ಕಾಂಗ್ರೆಸ್‌ಗೆ ಬಡವರ ಮೇಲೆ ನಾಟಕೀಯ ಪ್ರೀತಿ-ಉತ್ತರ-ದಕ್ಷಿಣ ಕ್ಷೇತ್ರದ ಪ್ರಚಾರದಲ್ಲಿ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ

ಕಾಂಗ್ರೆಸ್‌ಗೆ ಬಡವರ ಮೇಲೆ ನಾಟಕೀಯ ಪ್ರೀತಿ-ಉತ್ತರ-ದಕ್ಷಿಣ ಕ್ಷೇತ್ರದ ಪ್ರಚಾರದಲ್ಲಿ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ

ಲೋಕಸಭಾ ಕ್ಷೇತ್ರದ ವಾತಾವರಣ ನೋಡಿದರೆ ನಮ್ಮ ಬಿಜೆಪಿ ಅಭ್ಯರ್ಥಿ ಕನಿಷ್ಠ  2 ಲಕ್ಷ ಲೀಡ್​ನಲ್ಲಿ ಗೆಲ್ಲುತ್ತಾರೆ. ಶಾಮನೂರು ಕುಟುಂಬದ ದೌರ್ಜನ್ಯದಿಂದ ಕ್ಷೇತ್ರದ ಮತದಾರರು ಹೈರಾಣಾಗಿದ್ದಾರೆ. ಸಿದ್ದೇಶ್ವರ ಅವರು ಮಾಡಿರುವ ಅಭಿವೃದ್ಧಿ ಕೆಲಸ ನೋಡಿದ್ದಾರೆ. ಗಾಯತ್ರಿ ಸಿದ್ದೇಶ್ವರ ಅವರು ಗೆಲ್ಲುವು ಖಚಿತ, ನಿಶ್ಚಿತ.

– ಮಾಳವಿಕಾ ಅವಿನಾಶ್, ಬಿಜೆಪಿ ವಕ್ತಾರೆ

ದಾವಣಗೆರೆ ಬಿಜೆಪಿ ಭದ್ರಕೋಟೆ, 6 ಬಾರಿ ಸತತವಾಗಿ ಬಿಜೆಪಿ ಗೆದ್ದಿದೆ ಅಂದರೆ ಸುಮ್ಮನೆ ಅಲ್ಲ. ನಮ್ಮ ಕಾರ್ಯಕರ್ತರ ಶ್ರಮ, ಸಿದ್ದೇಶ್ವರ ಅವರ ಅಭಿವೃದ್ಧಿ ಕಾರ್ಯಗಳು ಬಿಜೆಪಿ ಶ್ರೀರಕ್ಷೆ. ಈ ಬಾರಿ ಗಾಯತ್ರಿ ಸಿದ್ದೇಶ್ವರ​ ಅವರನ್ನು ನಾವೆಲ್ಲವೂ ಸೇರಿ 2 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲಿಸಬೇಕು.

– ಎಸ್.ಎ.ರವೀಂದ್ರನಾಥ್, ಮಾಜಿ ಸಚಿವರು

ದಾವಣಗೆರೆ, ಮೇ 5- ಕಾಂಗ್ರೆಸ್​ ಪಕ್ಷಕ್ಕೆ ಹಾಗೂ ಕಾಂಗ್ರೆಸ್ಸಿಗರಿಗೆ ಬಡವರೆಂದರೆ ನಾಟ ಕೀಯ ಪ್ರೀತಿ. ಅವರ ಮೇಲೆ ನಿಜವಾದ ಕಾಳಜಿ ಇಲ್ಲ. ಮೂರು ತಲೆಮಾರು ದೇಶದ ಪ್ರಧಾನಿ ಗಳಾಗಿದ್ದ ಗಾಂಧಿ ಕುಟುಂಬಕ್ಕೆ ದೇಶದ ಬಡವರ ಕಷ್ಟ ಅರ್ಥವಾಗಲೇ ಇಲ್ಲ. ರೋಟಿ -ಕಪಡಾ- ಮಕಾನ್ ಎಂಬುವುದು 60 ವರ್ಷ ಕೇವಲ ಘೋಷಣೆಯಾಗಿಯೇ ಉಳಿದಿತ್ತು. ಅದನ್ನು ಪೂರ್ತಿ ಮಾಡುವ ನಿಟ್ಟಿನಲ್ಲಿ ಕಾರ್ಯ ಮಾಡಿದ್ದು ನರೇಂದ್ರ ಮೋದಿ ಜೀ ಅವರೇ ವಿನಃ ಕಾಂಗ್ರೆಸ್ ಅಲ್ಲ ಎಂದು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರು​ ಕಾಂಗ್ರೆಸ್​ ವಿರುದ್ಧ ಗುಡುಗಿದರು.

ದಾವಣಗೆರೆ ಉತ್ತರ, ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೊನೆ ದಿನದ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, 60 ವರ್ಷ ದೇಶವನ್ನಾಳಿದ ಕಾಂಗ್ರೆಸ್ ಬಡತನ ನಿರ್ಮೂಲನೆಗೆ ಪ್ರಾಮಾಣಿಕ ಪ್ರಯತ್ನ ಮಾಡಲೇ ಇಲ್ಲ. ಗಾಂಧಿ ಪರಿವಾರ ತಮ್ಮ ಕುಟುಂಬದ ಅಸ್ತಿತ್ವಕ್ಕಾಗಿ ರಾಜಕಾರಣ ಮಾಡಿದೆಯೇ ವಿನಃ ದೇಶದ ಅಭಿವೃದ್ಧಿ, ಬಡವರ ಕಾಳಜಿಗಾಗಿ ರಾಜಕಾರಣ ಮಾಡಿಲ್ಲ ಎಂದು ಛೇಡಿಸಿದರು.

ನರೇಂದ್ರ ಮೋದಿಜೀ ಪ್ರಧಾನಿಯಾಗಿ 10 ವರ್ಷಗಳಲ್ಲೇ 3 ಕೋಟಿ ಮನೆಗಳನ್ನು ನಿರ್ಮಾಣ ಮಾಡಿದ್ದಾರೆ. ದೇಶದ 80 ಕೋಟಿಗೂ ಹೆಚ್ಚು ಜನರಿಗೆ ಉಚಿತ ಪಡಿತರ ನೀಡುತ್ತಿದ್ದಾರೆ. ಬಡವರ ಕಲ್ಯಾಣಕ್ಕಾಗಿ ಹಲವಾರು ಯೋಜನೆ ಜಾರಿ ಗೊಳಿಸಿದ್ದಾರೆ. ಕೇವಲ 10 ವರ್ಷಗಳಲ್ಲಿ ಮೋದಿ ಜೀ ಇಷ್ಟೆಲ್ಲಾ ಸಾಧನೆ ಮಾಡಿದ್ದಾರೆ ಎಂದಾದರೆ, 60 ವರ್ಷ ದೇಶ ಆಳಿದ ಕಾಂಗ್ರೆಸ್​ಗೆ ಏಕೆ ಸಾಧ್ಯ ವಾಗಲಿಲ್ಲ ? ಎಂದು ಪ್ರಶ್ನಿಸಿದ ಅವರು, ಮೋದಿ ಜೀ ತಂದಿರುವ ಹಲವಾರು ಸುಧಾರಣೆಗಳಿಂದ ದೇಶದ 25 ಕೋಟಿ ಜನ ಹಲವು ಆಯಾಮಗಳ ಬಡತನದಿಂದ ಹೊರ ಬಂದಿದ್ದಾರೆ ಎಂದರು.

ಪ್ರಿಯಾಂಕಾ ಗಾಂಧಿ ನಿನ್ನೆ ದಾವಣಗೆರೆಯಲ್ಲಿ ನಿರುದ್ಯೋಗದ ಬಗ್ಗೆ ಮಾತನಾಡಿದ್ದಾರೆ. ದೇಶಾ ದ್ಯಂತ ಬ್ರಿಟಿಷರ ಕಾಲದಲ್ಲಿದ್ದ ಅನೇಕ ದೊಡ್ಡ ದೊಡ್ಡ ಖಾಸಗಿ ಕಂಪನಿಗಳು, ಕಾರ್ಖಾನೆಗಳು ಮುಚ್ಚುವ ಹಂತಕ್ಕೆ ಬರಲು ಕಾಂಗ್ರೆಸ್​ ಕಾರಣ. ಕಾಂಗ್ರೆಸ್ ಕಾಲದಲ್ಲಿ ಸಾರ್ವಜನಿಕ ಸ್ವಾಮ್ಯದ ಅನೇಕ ಉದ್ದಿಮೆಗಳು ನಷ್ಟದ ಹಾದಿಯಲ್ಲಿದ್ದವು. ಕೆಲಸ ಮಾಡುವ ಕಾರ್ಮಿಕರಿಗೆ ಸಂಬಳ ಕೊಡಲು ಆಗದ ಸ್ಥಿತಿಗೆ ಉದ್ದಿಮೆಗಳನ್ನು ತಂದ ಕೀರ್ತಿ ಕಾಂಗ್ರೆಸ್​ ಸರ್ಕಾರಕ್ಕೆ ಸಲ್ಲುತ್ತದೆ ಎಂದರು.

ಮೋದಿ ಜೀ ಅಧಿಕಾರಕ್ಕೆ ಬಂದ ಮೇಲೆ ಗೇಲ್ ಇಂಡಿಯಾ ಕಂಪನಿ, ಬಿ.ಹೆಚ್​.ಇ.ಎಲ್, ಭಾರತ್ ಎಲೆಕ್ಟ್ರಾನಿಕ್ಸ್, ಕೋಲ್ ಇಂಡಿಯಾ, ಹಿಂದೂಸ್ತಾನ್ ಏರೋನಾಟಿಕ್ಸ್ ಸೇರಿದಂತೆ ಹಲವಾರು ಉದ್ದಿಮೆಗಳು ಲಾಭದತ್ತ ಮುಖ ಮಾಡಿವೆ. ಇದಕ್ಕೆ ಕಾರಣ ಮೋದಿ ಜೀ ಅಳವಡಿಸಿಕೊಂಡಿರುವ ಆತ್ಮನಿರ್ಭರ ಭಾರತ ಯೋಜನೆ. ಈ ಯೋಜನೆ ಮೂಲಕ ಭಾರತ ಸ್ವಾವಲಂಬನೆಯತ್ತ ದಾಪುಗಾಲು ಇಡುತ್ತಿದೆ. ಭಾರತ ಈಗ ಸೆಮಿಕಂಡಕ್ಟರ್ ಉತ್ಪಾದನೆ ಬಗ್ಗೆ ಚಿಂತಿಸುತ್ತಿದೆ. ಅಭಿವೃದ್ಧಿ ಅಂದರೆ ಇದಲ್ಲವೇ..? ಎಂದು ಕಾಂಗ್ರೆಸ್ಸಿಗರನ್ನು ಪ್ರಶ್ನಿಸಿದರು.

2004 ರಿಂದ 2014 ರವರೆಗಿನ ಯುಪಿಎ (ಕಾಂಗ್ರೆಸ್​) ಆಡಳಿತಾವಧಿಯಲ್ಲಿ ಪ್ರತಿನಿತ್ಯ ದಿನ ಪತ್ರಿಕೆಗಳಲ್ಲಿ ಯಾವ ಯಾವ ಸುದ್ದಿಗಳು ಮುಖಪುಟದಲ್ಲಿ ಬರುತ್ತಿದ್ದವು ಎಂಬುದನ್ನು ನೆನಪು ಮಾಡಿಕೊಳ್ಳಿ. ಅಲ್ಲಿ ಬಾಂಬ್ ಬ್ಲಾಸ್ಟ್​, ಇಲ್ಲಿ ಬಾಂಬ್ ಬ್ಲಾಸ್ಟ್​, ಭ್ರಷ್ಟಾಚಾರ, ಸೈನಿಕರ ಮೇಲೆ ದಾಳಿ, ಭಯೋತ್ಪಾದಕರ ಅಟ್ಟಹಾಸ, ಕಾಮನ್ ವೆಲ್ತ್​ ಹಗರಣ, ಕೋಲ್ ಹಗರಣ, ಸತ್ಯಂ ಹಗರಣ, ಐಪಿಎಲ್ ಹಗರಣ ಹೀಗೆ ಸಾಲು ಸಾಲು ಹಗರಣಗಳ ಸರಮಾಲೆಯೇ ಮುಖ ಪುಟಗಳಲ್ಲಿ ಸುದ್ದಿಯಾಗುತ್ತಿದ್ದವು. ಆದರೆ, ಮೋದಿ ಜೀ ಅಧಿಕಾರಕ್ಕೆ ಬಂದು 10 ವರ್ಷಗಳಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದಂತೆ ಅಧಿಕಾರ ನಡೆಸಿದ್ದಾರೆ. ಈಗಿನ ದಿನಪತ್ರಿಕೆಗಳ ಮುಖ ಪುಟದಲ್ಲಿ ದೇಶದ ಅಭಿವೃದ್ಧಿ, ಆರ್ಥಿಕ ಚೇತರಿಕೆ ಸೇರಿದಂತೆ ಅನೇಕ ಯಶೋಗಾಥೆಗಳು ಪ್ರಕಟಗೊಳ್ಳುತ್ತಿವೆ. ಇದಕ್ಕೆಲ್ಲಾ ಮೋದಿ ಜೀ ಅವರ ದಿಟ್ಟ ನಾಯಕತ್ವ ಕಾರಣ ಎಂದರು ತಿಳಿಸಿದರು.

ಅಭಿವೃದ್ಧಿಗೆ ಶಾಮನೂರು ಕುಟುಂಬ ಅಡ್ಡಿ : ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಿ ಮಾತನಾಡಿ, ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ, ದಾವಣಗೆರೆ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ಶಾಮನೂರು ಕುಟುಂಬ ಅಡ್ಡಿಯಾಗಿದೆ ಎಂದು ಆರೋಪಿಸಿದರು. ದಾವಣಗೆರೆಗೆ ಅವಶ್ಯಕವಾಗಿರುವ ಸರ್ಕಾರಿ ಮೆಡಿಕಲ್ ಕಾಲೇಜು ಬಾರದಂತೆ ಶಾಮನೂರು ಕುಟುಂಬ ನೋಡಿಕೊಳ್ಳುತ್ತಿದೆ. ಸರ್ಕಾರಿ ಮೆಡಿಕಲ್ ಕಾಲೇಜು ದಾವಣಗೆರೆಗೆ ಬಂದರೆ ಚಿಗಟೇರಿ ಆಸ್ಪತ್ರೆಯಿಂದ ಅವರಿಗೆ ಸಿಗುತ್ತಿರುವ ಕೋಟ್ಯಾಂತರ ಆಮದಿಗೆ ಹೊಡೆತ ಬೀಳಲಿದೆ ಎಂಬ ಉದ್ದೇಶ ಶಾಮನೂರು ಫ್ಯಾಮಿಲಿಯದ್ದು.

ಚಿಗಟೇರಿ ಸಾರ್ವಜನಿಕ ಜಿಲ್ಲಾಸ್ಪತ್ರೆಗೆ ನಮ್ಮ ಸರ್ಕಾರ ಎಂ.ಆರ್.ಐ. ಸ್ಕ್ಯಾನಿಂಗ್ ಯಂತ್ರ ಮಂಜೂರು ಮಾಡಿದ್ದರೂ ಸಹ ಶಾಮನೂರು ಕುಟುಂಬ ಅದನ್ನು ವ್ಯವಸ್ಥಿತವಾಗಿ ತಡೆಯುವ ಕೆಲಸ ಮಾಡುತ್ತಿದೆ. ಅನೇಕ ಬಡ ರೋಗಿಗಳು ಎಂ.ಆರ್.ಐ. ಸ್ಕ್ಯಾನಿಂಗ್​​ಗೆ ಚಿತ್ರದುರ್ಗದ ಆಸ್ಪತ್ರೆಗೆ ಓಡಾಡುತ್ತಿದ್ದಾರೆ. ಶಾಮನೂರು ಕುಟುಂಬದವರಿಗೆ ಬಡವರ ಕಷ್ಟ ಹೇಗೆ ಅರ್ಥವಾದೀತು ? ಎಂದು ಪ್ರಶ್ನಿಸಿದರು.

ಎಂಎಲ್‌ಸಿ ರವಿಕುಮಾರ್, ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಜಗದೀಶ್, ಮಾಜಿ ಮುಖ್ಯಸಚೇತಕ ಶಿವಯೋಗಿಸ್ವಾಮಿ, ಪಾಲಿಕೆ ಸದಸ್ಯ ಪ್ರಸನ್ನ ಕುಮಾರ್, ವೀಣಾ ನಂಜಪ್ಪ, ರೇಖಾ ಸುರೇಶ್​ ಮತ್ತು ಇತರರು ಪ್ರಚಾರದಲ್ಲಿ ಭಾಗವಹಿಸಿದ್ದರು.

error: Content is protected !!