ಮೋದಿ 10 ಗುರುತರ ಸಾಧನೆ ತೋರಿಸಿದರೆ ರಾಜಕೀಯದಿಂದ ನಿವೃತ್ತಿ : ಮುಖ್ಯಮಂತ್ರಿ

ಮೋದಿ 10 ಗುರುತರ ಸಾಧನೆ ತೋರಿಸಿದರೆ ರಾಜಕೀಯದಿಂದ ನಿವೃತ್ತಿ : ಮುಖ್ಯಮಂತ್ರಿ

ಹೊನ್ನಾಳಿ, ಮೇ 5 – ಬಿಜೆಪಿಯ ಸುಳ್ಳು ಮತ್ತು ಕಾಂಗ್ರೆಸ್‌ನ ಸತ್ಯದ ನಡುವೆ ಲೋಕಸಭಾ ಚುನಾವಣೆ ನಡೆಯುತ್ತಿದ್ದು, ಜನರು ಸತ್ಯ ನುಡಿಯುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

ನಗರದ ಪಟ್ಟಣಶೆಟ್ಟಿ ಲೇಔಟ್‍ನಲ್ಲಿ ಕಾಂಗ್ರೆಸ್ ಪಕ್ಷದಿಂದ ಇಂದು ಹಮ್ಮಿಕೊಳ್ಳಲಾಗಿದ್ದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

10 ವರ್ಷ ದೇಶವನ್ನಾಳಿದ ಮೋದಿ ಸರ್ಕಾರ ದಿಂದ ಬೆಲೆಯೇರಿಕೆ, ನಿರುದ್ಯೋಗ ಸಮಸ್ಯೆ, ಅಗತ್ಯ ಉತ್ಪನ್ನಗಳ ಬೆಲೆ ಹೆಚ್ಚಳದಿಂದ ಜನರ ಕೊಂಡುಕೊಳ್ಳುವ ಶಕ್ತಿ ಕುಂದಿದ್ದು, ಈ ಎಲ್ಲಾ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿ 5 ಗ್ಯಾರಂಟಿ ಯೋಜನೆಗಳನ್ನು ಯಾವುದೇ ಜಾತಿ-ಮತ-ಪಕ್ಷ ಎನ್ನದೇ ರಾಜ್ಯದ ಎಲ್ಲಾ ಸಮುದಾಯ ಗಳ ಬಡವರು ಇಂದು 5 ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಾಗಿದ್ದಾರೆ ಎಂದು ಹೇಳಲು ಹರ್ಷವಾಗುತ್ತದೆ ಎಂದರು.

ಮೋದಿ ನೇತೃತ್ವದ ಸರ್ಕಾರದಲ್ಲಿ 10 ವರ್ಷ ಸಂಸದರಾಗಿದ್ದ ಜಿ.ಎಂ.ಸಿದ್ದೇಶ್ವರ ಅವರು ಇಡೀ ಜಿಲ್ಲೆಯಲ್ಲಿ ಹೇಳಿಸಿಕೊಳ್ಳದ ಅಭಿವೃದ್ಧಿ ಕೆಲಸ ಮಾಡದೇ, ಲೋಕಸಭೆಯಲ್ಲೂ ಜಿಲ್ಲೆಯ ಪರ ಮತ್ತು ತಾಲ್ಲೂಕಿನ ಸಮಸ್ಯೆಗಳ ಕುರಿತಾಗಿ ಧ್ವನಿ ಎತ್ತದೆ ? ತಮ್ಮ ಅವಧಿ ಮುಗಿಸಿ ಮತ್ತೆ ತಮ್ಮ ಪತ್ನಿ ಗಾಯತ್ರಿ ಅವರಿಗೆ ಟಿಕೆಟ್ ಕೊಡಿಸಿದ್ದಾರೆ. ಸಿದ್ದೇಶ್ವರ ಅವರೇ ಧ್ವನಿಯೆತ್ತಿಲ್ಲ ಎಂದ ಮೇಲೆ ರಾಜಕೀಯ ಅನುಭವವಿರದ ಅವರ ಪತ್ನಿ ಧ್ವನಿ ಎತ್ತುವರೇ ? ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು. ಇವರನ್ನು ಅಸಮರ್ಥ ಎಂದು ಮೋದಿ ತಮ್ಮ ಸಂಪುಟದಿಂದ ಕೈಬಿಟ್ಟಿದ್ದವರಿಗೆ ಬೆಂಬಲಿಸುವಿರಾ   ? ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ವಿದ್ಯಾವಂತರಿದ್ದು, ಅವರು ಗೆದ್ದರೆ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಗಮನಹರಿಸಿ ಅವುಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡುತ್ತಾರೆ ಎಂಬ ವಿಶ್ವಾಸವಿದೆ. ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಗೆದ್ದರೆ ನಾನೇ ಗೆದ್ದಂತೆ. ನನಗೆ ಅಧಿಕಾರ ನಡೆಸಲು ಇನ್ನೂ ಶಕ್ತಿ ಹೆಚ್ಚಾಗುತ್ತದೆ ಎಂದರು.

ಕೃತಜ್ಞತೆ : ನಾನು ಚುನಾವಣೆ ಸಂದರ್ಭಗಳಲ್ಲಿ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಿ ದಾಗಲೆಲ್ಲಾ ತಾವುಗಳು ನನ್ನ ಮೇಲೆ ಪ್ರೀತಿ, ಅಭಿಮಾನ ತೋರಿಸಿ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದೀರಿ. ಅದಕ್ಕಾಗಿ ತಮಗೆಲ್ಲರಿಗೂ ಹೃತ್ಪೂರ್ವಕ ಧನ್ಯ ವಾದಗಳನ್ನು ಅರ್ಪಿಸುವುದಾಗಿ ತಿಳಿಸಿದರು.

ಶಿಸ್ತಿನ ಸಿಪಾಯಿ: ಶಾಸಕ ಡಿ.ಜಿ.ಶಾಂತನಗೌಡ ಅವರು ಪಕ್ಷದ ನಿಷ್ಠಾವಂತ ಶಾಸಕರಾಗಿದ್ದು ತಮಗೆ ಇಂತದ್ದೇ ಸ್ಥಾನ-ಮಾನ ಬೇಕೆಂದು ಎಂದಿಗೂ ಕಿರಿ-ಕಿರಿ ಮಾಡಿಲ್ಲ, ಹಾಗೆಯೇ ಪಕ್ಷದ ಶಿಸ್ತನ್ನು, ಹೇಳಿದ ಕೆಲಸವನ್ನು ಚಾಚೂ ತಪ್ಪದೇ ಪಾಲಿಸುತ್ತಾರೆ ಎಂದು ಬಣ್ಣಿಸಿದರು. ಮುಂದಿನ ದಿನಗಳಲ್ಲಿ ಅವರಿಗೆ ನಿಗಮ ಮಂಡಳಿಯಲ್ಲಿ ಅವಕಾಶ ಕಲ್ಪಿಸುತ್ತೇನೆ ಎಂದು ಘೋಷಿಸಿದರು.

ವಿನಯ್ ಬೆಂಬಲಿಸಬೇಡಿ; ಕುರುಬ ಸಮಾಜದವರು ರಾಜ್ಯದಲ್ಲಿ 7% ಜನಸಂಖ್ಯೆ ಹೊಂದಿದ್ದರೂ ಪಕ್ಷವು ಇಬ್ಬರಿಗೆ ಲೋಕಸಭೆಯಲ್ಲಿ ಅವಕಾಶ ನೀಡಿದೆ. ಆದರೆ ಬಿಜೆಪಿ ಪಕ್ಷವು ಒಬ್ಬರಿಗೂ ಅವಕಾಶ ನೀಡಿಲ್ಲ. ಇಂತಹದರಲ್ಲಿ ಜಾತಿಯ ಹೆಸರೇಳಿಕೊಂಡು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತಿರುವ ವಿನಯ್ ಕುಮಾರ್ ಅವರನ್ನು ದುಡ್ಡು ಕೊಟ್ಟು ಬಿಜೆಪಿ ಪಕ್ಷದವರು ಚುನಾವಣೆಗೆ ನಿಲ್ಲಿಸಿದ್ದು, ನೀವೇನಾದರೂ ವಿನಯ್‍ಕುಮಾರ್ ಅವರಿಗೆ ಮತ ಹಾಕಿದರೆ ಬಿಜೆಪಿ ಪಕ್ಷಕ್ಕೆ ಬೆಂಬಲಿಸಿದಂತಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.

ರಾಜೀನಾಮೆ : ಮೋದಿಯವರು ತಮ್ಮ 10 ವರ್ಷಗಳ ಅವಧಿಯಲ್ಲಿ ಗುರುತರವಾದ 10 ಸಾಧನೆಗಳನ್ನು ಹೇಳಿದರೆ ನಾನು ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ ಎಂದು ಸವಾಲ್ ಹಾಕಿದರು.

ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಮಾತನಾಡಿ, ಚುನಾವಣೆ ಇನ್ನೆರಡು ದಿನ ಮಾತ್ರವಿದ್ದು ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರುಗಳು ಒಗ್ಗಟ್ಟಾಗಿ ಕೆಲಸ ಮಾಡಿ ಬೂತ್‌ ಮಟ್ಟದಿಂದಲೂ ನಮ್ಮ ಅಭ್ಯರ್ಥಿಗೆ ಮತ ಹಾಕಿಸುವುದರ ಮೂಲಕ ನಿಮ್ಮ ತಾಲ್ಲೂಕುಗಳಿಂದ ಹೆಚ್ಚಿನ ಮತಗಳನ್ನು ಹಾಕಿಸಿ ಗೆಲುವಿಗೆ ಕಾರಣರಾಗಬೇಕು ಎಂದು ವಿನಂತಿಸಿದರು.

ಡಾ. ಪ್ರಭಾ ಮಲ್ಲಿಕಾರ್ಜುನ್‌ ಗೆಲುವು ಸಾಧಿಸಿದರೆ ಶಿವಮೊಗ್ಗ-ಹರಿಹರ ರೈಲ್ವೆ ಯೋಜನೆ, ಚೀಲೂರು-ರಾಂಪುರ-ಗೋವಿನಕೋವಿ ನಡುವೆ ಸೇತುವೆ ನಿರ್ಮಾಣ, ಕೆರೆಗಳಿಗೆ ನೀರು ತುಂಬಿಸುವ ನೀರಾವರಿ ಯೋಜನೆಗಳು ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳಿಗೆ ವಿಶೇಷ ಒತ್ತನ್ನು ನೀಡಲಾಗುವುದು ಎಂದು ಭರವಸೆ ನೀಡಿದರು.

ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿ,  ರಾಜ್ಯದ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಡೆಯವರು ಮುಕ್ತ ಕಂಠದಿಂದ ಶ್ಲ್ಯಾಘಿಸಿದ್ದಾರೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬರಗಾಲವಿರುವ ಪ್ರಯುಕ್ತ ಕುಡಿಯುವ ನೀರಿಗೆ ಸಮಸ್ಯೆಯುಂಟಾಗಬಾರದೆಂದು ಕೋಟಿಗಟ್ಟಲೇ ಅನುದಾನ ಬಿಡುಗಡೆ ಮಾಡಿದ್ದಾರೆ. ನ್ಯಾಮತಿ ತಾಲ್ಲೂಕು ಶೇ. 97 ಮತ್ತು ಹೊನ್ನಾಳಿ ತಾಲ್ಲೂಕಿನಲ್ಲಿ ಶೇ.98 ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿದ್ದಾರೆ. ಸಮಸ್ಯೆಯಿದ್ದವುಗಳನ್ನು ನಮ್ಮ ತಂಡವು ಮನೆ-ಮನೆಗೂ ಭೇಟಿ ನೀಡಿ ಸಮಸ್ಯೆ ಬಗೆಹರಿಸಿದೆ ಎಂದು ಮಾಹಿತಿ ನೀಡಿದರು.

ವಿಧಾನಸಭಾ ಚುನಾವಣೆಯಲ್ಲಿ ನನಗೆ 17819 ಮತಗಳನ್ನು ಹಾಕಿ ಗೆಲುವು ತಂದು ಕೊಟ್ಟಿದ್ದೀರಿ. ಅದೇ ತರಹ ನಮ್ಮ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರಿಗೆ 25000 ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವಿಗೆ ಕಾರಣರಾಗಬೇಕೆಂದು ಮನವಿ ಮಾಡಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ಮಂಜಪ್ಪ ಸ್ವಾಗತಿಸಿದರು. ಕಾಂಗ್ರೆಸ್ ಮುಖಂಡ ಬಿ.ಸಿದ್ದಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಚ್.ಎ.ಉಮಾಪತಿ ವಂದಿಸಿದರು.

ಈ ಸಂದರ್ಭದಲ್ಲಿ ಶಾಸಕ  ಶ್ರೀನಿವಾಸ್, ಬಸವಂತಪ್ಪ, ವಿಧಾನಪರಿಷತ್ತಿನ ಮಾಜಿ ಸದಸ್ಯರಾದ ಆಯನೂರ್ ಮಂಜುನಾಥ್, ಆರ್.ಶಂಕರ್, ಮಾಜಿ ಶಾಸಕ ಡಾ.ಡಿ.ಬಿ.ಗಂಗಪ್ಪ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ಶಿವಯೋಗಿ, ಆರ್.ನಾಗಪ್ಪ, ಡಿ.ಜಿ.ವಿಶ್ವನಾಥ್, ಮಹಿಳಾ ಘಟಕದ ಅಧ್ಯಕ್ಷೆಯರಾದ ವನಜಾಕ್ಷಮ್ಮ, ಪುಷ್ಪಾ, ಡಿ.ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಡಿ.ಎಸ್.ಸುರೇಂದ್ರಗೌಡ, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಬಣ್ಣಜ್ಜಿ, ಮುಖಂಡರುಗಳಾದ ಡಾ.ಈಶ್ವರ್ ನಾಯ್ಕ್, ಎಚ್.ಎ.ಗದ್ದಿಗೇಶ್, ಸಣ್ಣಕ್ಕಿ ಬಸವನಗೌಡ, ಎ.ಆರ್.ಚಂದ್ರಶೇಖರಪ್ಪ, ನುಚ್ಚಿನ್ ವಾಗೀಶ್, ಸುರೇಶ್, ಜೀವೇಶಪ್ಪ, ವರದರಾಜಗೌಡ್ರು, ಎಚ್.ಬಿ.ಅಣ್ಣಪ್ಪ, ಎಚ್.ಡಿ.ವಿಜೇಂದ್ರಪ್ಪ, ವಸಂತನಾಯ್ಕ್, ಮಧುಗೌಡ, ಜಬ್ಬಾರ್ ಅಲಿ ಖಾನ್, ಮತ್ತಿತರರು ಉಪಸ್ಥಿತರಿದ್ದರು.

error: Content is protected !!