ದೇಶ ಮತ್ತೆ `ಚಿನ್ನದ ಹಕ್ಕಿ’ಯಾಗಲಿ

ದೇಶ ಮತ್ತೆ `ಚಿನ್ನದ ಹಕ್ಕಿ’ಯಾಗಲಿ

ದಾವಣಗೆರೆ ವಿ.ವಿ. 11ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಗೆಹ್ಲೋಟ್ ಆಶಯ

ದಾವಣಗೆರೆ ವಿವಿ ಘಟಿಕೋತ್ಸವದಲ್ಲಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹಾಗೂ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಮಾಜಿ ಅಧ್ಯಕ್ಷ ನ್ಯಾಯಮೂರ್ತಿ ಶಿವರಾಜ ಪಾಟೀಲ, ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಕೆ. ಸಿದ್ದಪ್ಪ ಹಾಗೂ ಹಿರಿಯ ಪತ್ರಕರ್ತ, ವ್ಯಂಗ್ಯಚಿತ್ರಕಾರ ಹೆಚ್.ಬಿ.ಮಂಜುನಾಥ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಸನ್ಮಾನಿಸಲಾಯಿತು. 

ದಾವಣಗೆರೆ, ಮಾ. 12 – ದೇಶದ ಅಭಿವೃದ್ಧಿಯ ಹಾದಿಯಲ್ಲಿ ಸರ್ಕಾರ ಹಾಗೂ ಅಧಿಕಾರಿಗಳೊಂದಿಗೆ ಸಾರ್ವಜನಿಕರೂ ಸಂಪೂರ್ಣ ಕೈ ಜೋಡಿಸಬೇಕು. ಆಗ ಮಾತ್ರ ತ್ವರಿತವಾಗಿ ಹಾಗೂ ಕಡಿಮೆ ವೆಚ್ಚದಲ್ಲಿ ಪ್ರಗತಿ ಕಾಣಲು ಸಾಧ್ಯ ಎಂದು ರಾಜ್ಯಪಾಲ ತಾವರ್‌ಚಂದ್ ಗೆಹ್ಲೋಟ್ ಅಭಿಪ್ರಾಯ ಪಟ್ಟರು.

ದಾವಣಗೆರೆ ವಿಶ್ವವಿದ್ಯಾಲಯದ 11ನೇ ಘಟಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದೇಶದ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಹಲವಾರು ಯೋಜನೆಗಳನ್ನು ರೂಪಿಸಿವೆ. ಇವುಗಳ ಜಾರಿಯಲ್ಲಿ ಸಾರ್ವಜನಿಕರ ಸಹಭಾಗಿತ್ವ ಇದ್ದಾಗ ಕಾಮಗಾರಿಗಳ ಗುಣಮಟ್ಟ ಉತ್ತಮವಾಗುತ್ತದೆ. ಯೋಜನೆಗಳು ಕಾಲಮಿತಿಯಲ್ಲಿ ಜಾರಿಯಾಗುತ್ತವೆ. ಜನರಿಗೆ ತ್ವರಿತವಾಗಿ ಯೋಜನೆಗಳ ಲಾಭ ಸಿಗುತ್ತದೆ ಎಂದು ಗೆಹ್ಲೋಟ್ ಹೇಳಿದರು.

ಭಾರತ ಈಗ ಆರ್ಥಿಕತೆಯಲ್ಲಿ ಜಗತ್ತಿನಲ್ಲೇ ಮೂರನೇ ಸ್ಥಾನಕ್ಕೆ ತಲುಪುವ ಹಾದಿಯಲ್ಲಿದೆ. 2047ರ ವೇಳೆಗೆ ಭಾರತಕ್ಕೆ ಸ್ವಾತಂತ್ರ್ಯ ದೊರೆತು ಶತಮಾನೋತ್ಸವ ತುಂಬಲಿದೆ. ಆ ವೇಳೆಗೆ ಭಾರತ ಆರ್ಥಿಕತೆಯಲ್ಲಿ ವಿಶ್ವದ ಮೊದಲನೇ ದೇಶವಾಗಬೇಕಿದೆ. ಹಾಗಾದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಆಶಯ ಈಡೇರುತ್ತದೆ ಎಂದು ರಾಜ್ಯಪಾಲರು ತಿಳಿಸಿದರು.

ಭಾರತವನ್ನು ಒಂದು ಕಾಲದಲ್ಲಿ ಬಂಗಾರದ ಪಕ್ಷಿ ಎಂದು ಕರೆಯಲಾಗುತ್ತಿತ್ತು. ಅಷ್ಟೊಂದು ಧನ ಸಂಪತ್ತು ಭಾರತದಲ್ಲಿತ್ತು ಹಾಗೂ ಆರ್ಥಿಕತೆ ಉತ್ತಮವಾಗಿತ್ತು. ಭಾರತ ಮತ್ತೆ ಬಂಗಾರದ ಪಕ್ಷಿಯಾಗಬೇಕು, ವಿಕಸಿತ ಭಾರತವಾಗಬೇಕು ಹಾಗೂ ವಿಶ್ವ ಗುರು ಆಗಬೇಕು. 2047ರ ವೇಳೆಗೆ ಈ ಗುರಿ ತಲುಪುವ ಹೊಣೆ ಈಗಿನ ಹಾಗೂ ಮುಂದಿನ ಪೀಳಿಗೆಯ ಮೇಲಿದೆ ಎಂದವರು ಹೇಳಿದರು.

ಉನ್ನತ ಶಿಕ್ಷಣ ಸಚಿವ ಹಾಗೂ ಸಮಕುಲಾಧಿಪತಿ ಡಾ. ಎಂ.ಸಿ.ಸುಧಾಕರ್ ಮಾತನಾಡಿ, ನಿರುದ್ಯೋಗ ಸಮಸ್ಯೆ ನೀಗಿಸಲು ಕೌಶಲ್ಯಾಧಾರಿತ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಯಾವ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಗಳಿವೆ ಎಂದು ಅರಿತು ಶಿಕ್ಷಣ, ಕೌಶಲ್ಯತೆ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಹೆಜ್ಜೆ ಇಟ್ಟಿದೆ ಎಂದರು.

ಎಲ್ಲಾ ವಿಶ್ವವಿದ್ಯಾನಿಲಯಗಳ ಶೈಕ್ಷಣಿಕ ಚಟುವಟಿಕೆ ಗಳು ಏಕರೂಪದಲ್ಲಿರಲು ಮತ್ತು ಏಕ ಮಾದರಿಯಲ್ಲಿ ಪ್ರವೇಶ ಪ್ರಕ್ರಿಯೆಯನ್ನು ನಡೆಸಲು ಒಂದೇ ವೇಳಾಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಶೈಕ್ಷಣಿಕ ಚಟುವಟಿಕೆಗಳು ಏಕಕಾಲದಲ್ಲಿ ಮುಕ್ತಾಯವಾಗುವುದರಿಂದ ವಿದ್ಯಾರ್ಥಿಗಳಲ್ಲಿ ಪ್ರವೇಶ ಪಡೆಯಲು ಅನುಕೂಲವಾಗುತ್ತದೆ ಎಂದವರು ಇದೇ ಸಂದರ್ಭದಲ್ಲಿ ಹೇಳಿದರು.

ದಾವಣಗೆರೆ ವಿ.ವಿ.ಕುಲಪತಿಗಳಾದ ಪ್ರೊ.ಬಿ.ಡಿ.ಕುಂಬಾರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ರಾಂಕ್ ಪಡೆದ ವಿದ್ಯಾರ್ಥಿಗಳಿಗೆ ಪದಕ ಹಾಗೂ ಪದವಿ ಪ್ರಮಾಣ ಪತ್ರ ನೀಡಲಾಯಿತು. 64 ಸಂಶೋಧಕರಿಗೆ ಪಿ.ಹೆಚ್.ಡಿ. ಪ್ರದಾನ ಮಾಡಲಾಯಿತು.

ವೇದಿಕೆಯ ಮೇಲೆ ಇಸ್ರೋ ಮಾಜಿ ಮುಖ್ಯಸ್ಥ ಎ.ಎಸ್. ಕಿರಣ್ ಕುಮಾರ್, ಕುಲಸಚಿವ ಪ್ರೊ.ವೆಂಕಟರಾವ್ ಎಂ.ಪಲಾಟೆ, ಪರೀಕ್ಷಾಂಗ ಕುಲಸಚಿವ ಪ್ರೊ.ಸಿ.ಕೆ.ರಮೇಶ್ ವಿವಿಧ ನಿಕಾಯಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

error: Content is protected !!