ಶ್ರೀ ಗುರುರಾಜರ ಶೋಭಾಯಾತ್ರೆ

ಶ್ರೀ ಗುರುರಾಜರ ಶೋಭಾಯಾತ್ರೆ

ದಾವಣಗೆರೆ, ಮಾ.12- ತೆರೆದ ವಾಹನದಲ್ಲಿ ಪುಷ್ಪ, ವಸ್ತ್ರ, ಆಭರಣಗಳಿಂದ ಅಲಂಕೃತವಾದ ವೃಂದಾವನ, ಮುಂದೆ ಪ್ರಹ್ಲಾದ ರಾಜರ ರಜತ ವಿಗ್ರಹ. ದಾಸರ ಕೀರ್ತನೆಗಳ ಗಾಯನ, ಭಕ್ತರ ಸಂಭ್ರಮ.

 ಇದು, 31ನೇ ಶ್ರೀ ರಾಘವೇಂದ್ರ ಸಪ್ತಾಹ ಮಹೋತ್ಸವದ ಎರಡನೇ ದಿನವಾದ ಮಂಗಳವಾರ ನಡೆದ ಶ್ರೀ ಗುರುರಾಜರ ಶೋಭಾಯಾತ್ರೆಯ ದೃಶ್ಯ.

 ಉಡುಪಿ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದಂಗಳವರು ನಗರದ ಶಾಮ ನೂರು ರಸ್ತೆಯ ಲಕ್ಷ್ಮೀ ಫ್ಲೋರ್ ಮಿಲ್ ಬಳಿ ಶೋಭಾ ಯಾತ್ರೆಗೆ ಚಾಲನೆ ನೀಡಿದರು. ಅಲ್ಲಿಂದ ಆರಂಭವಾಗಿ ಬಾಪೂಜಿ ಬ್ಯಾಂಕ್ ಸಮುದಾಯ ಭವನದ ವರೆಗೆ ಸಾಗಿತು. ಮಾರ್ಗದುದ್ದಕ್ಕೂ ಮಂತ್ರಾಲಯ ಪ್ರಭುಗಳ ಸ್ಮರಣೆ ಮಾಡಲಾಯಿತು.

 ವೇದ ಘೋಷಗಳು ಮೊಳಗಿದವು. ಚಂಡೆ, ನಾದಸ್ವರ ವಾದನ, ವಿವಿಧ ಭಜನಾ ಮಂಡಳಿಗಳ ಸದಸ್ಯರು ದಾಸರ ಕೀರ್ತನೆಗಳನ್ನು ಹಾಡಿದ್ದು ಮೆರವಣಿಗೆಯ ಕಳೆಯನ್ನು ಹೆಚ್ಚಿಸಿತು. ರಸ್ತೆಯ ಇಕ್ಕೆಲಗಳಲ್ಲಿದ್ದ ಸಾರ್ವಜನಿಕರು ರಾಯರ ವೃಂದಾವನದ ದರ್ಶನ ಪಡೆದರು.

 ಮಂತ್ರಾಲಯ ಶ್ರೀ ಗುರುಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟೃ್ನ ನಿರ್ದೇಶಕ ಕೆ. ಅಪ್ಪಣ್ಣಾಚಾರ್ಯರು, ಮಂತ್ರಾಲಯದ ಶ್ರೀ ರಾಘವೇಂದ್ರ ಸಪ್ತಾಹ ಕಾರ್ಯಾಚರಣ ಸಮಿತಿ ಅಧ್ಯಕ್ಷ, ಅರ್ಚಕ ಪರಿಮಳಾಚಾರ್ಯರು, ಬ್ರಹ್ಮಣ್ಯಾಚಾರ್, ಮಹೋತ್ಸವ ಸಮಿತಿಯ ಕಾರ್ಯದರ್ಶಿ ಕಂಪ್ಲಿ ಗುರುರಾಜಾಚಾರ್, ಸತ್ಯಬೋಧ ಕುಲಕರ್ಣಿ, ಡಾ.ಎಂ.ಸಿ. ಶಶಿಕಾಂತ್, ಡಾ.ಸಿ.ಕೆ. ಆನಂದ ತೀರ್ಥಾಚಾರ್, ಕೆ. ವಿಠ್ಠಲ್ ಇದ್ದರು.

 ಪಿ.ಎಸ್. ಸತ್ಯನಾರಾಯಣ ರಾವ್, ಪ್ರಾಣೇಶಾಚಾರ್, ಗೋಪಾಲಾಚಾರ್, ಶೇಷ ನವರತ್ನ, ಬದರಿನಾರಾಯಣ, ವಾಚಸ್ಪತಿ, ಪಿ.ಕೆ. ಪ್ರಕಾಶ್, ಪಲ್ಲಕ್ಕಿ ವಾಸುದೇವಾಚಾರ್, ರಮೇಶ ಜಹಗೀರದಾರ್, ಅನಿಲ್ ಬಾರೆಂಗಳ್, ಎಂ.ಜಿ. ಶ್ರೀಕಾಂತ್, ಮಾಧವ ಪದಕಿ ಭಾಗವಹಿಸಿದ್ದರು.

error: Content is protected !!