ನೀರು ಸರಬರಾಜು ವಿಭಾಗದ ಹೊರ ಗುತ್ತಿಗೆ ಕಾರ್ಮಿಕರ ಒತ್ತಾಯ

ನೀರು ಸರಬರಾಜು ವಿಭಾಗದ  ಹೊರ ಗುತ್ತಿಗೆ ಕಾರ್ಮಿಕರ ಒತ್ತಾಯ

ದಾವಣಗೆರೆ, ಮಾ. 6- ಹೊರಗುತ್ತಿಗೆ ಅಡಿಯಲ್ಲಿ ದುಡಿಯುತ್ತಿರುವ ನೀರು ಸರಬರಾಜು ವಿಭಾಗದ ಕಾರ್ಮಿಕರ ಸೇವೆಯನ್ನು ಖಾಯಂಗೊಳಿಸುವಂತೆ ಒತ್ತಾಯಿಸಿ, ದಾವಣಗೆರೆ ನಗರ ಪಾಲಿಕೆ ನೀರು ಸರಬರಾಜು ಮತ್ತು ಕಾವಲುಗಾರರ ಹೊರಗುತ್ತಿಗೆ ಸಂಘದಿಂದ ರಾಜ್ಯ ಸಂಘದ ಕರೆಯ ಮೇರೆಗೆ  ನಗರ ಪಾಲಿಕೆ ಮುಂಭಾಗದಲ್ಲಿ ಇಂದು ಧರಣಿ ಸತ್ಯಾಗ್ರಹ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಎಲ್.ಹೆಚ್. ಸಾಗರ್, ಎಲ್ಲಾ ಗುತ್ತಿಗೆ, ಹೊರ ಗುತ್ತಿಗೆ ಅಡಿಯಲ್ಲಿ ದುಡಿಯುತ್ತಿರುವ ನೀರು ಸರಬರಾಜು ವಿಭಾಗದ ಕಾರ್ಮಿಕರ ಸೇವೆಯನ್ನು ಖಾಯಂಗೊಳಿಸಬೇಕು. ಖಾಯಂಗೊಳಿಸುವ ತನಕ ನಗರ ಸ್ಥಳೀಯ ಸಂಸ್ಥೆಗಳ ಎಲ್ಲಾ ಗುತ್ತಿಗೆ ಕಾರ್ಮಿಕರಿಗೆ ನೇರ ಪಾವತಿಯಡಿಯಲ್ಲಿ ಸಂಬಳ ನೀಡಬೇಕು. ಸರ್ವೋಚ್ಛ ನ್ಯಾಯಾಲಯದ ತೀರ್ಪಿನಂತೆ ಎಲ್ಲಾ ಕಾರ್ಮಿಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವಂತೆ ಆಗ್ರಹಿಸಿದರು.

ಎಲ್ಲಾ ಕಾರ್ಮಿಕರಿಗೆ ದಿನದಲ್ಲಿ ಎಂಟು ಗಂಟೆ ಕೆಲಸ , ಹೆಚ್ಚುವರಿ ಕೆಲಸಕ್ಕೆ ಕಾನೂನು ಬದ್ಧ ವೇತನ, ವಾರದಲ್ಲಿ ಸಂಬಳ ಸಹಿತ ರಜೆ, ರಾಷ್ಟ್ರೀಯ ಹಬ್ಬಗಳ ರಜೆ, ಗಳಿಕೆ ರಜೆ, ಅನಾರೋಗ್ಯ ರಜೆ, ಹತ್ತಾರು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ, ಮರಣ ಹೊಂದುವ ಸ್ಥಳೀಯ ಸಂಸ್ಥೆಗಳ ಕಾರ್ಮಿಕರ ಅವಲಂಬಿತರಿಗೆ ಉಪಧನ ನೀಡುವ ಸಂಬಂಧ ಸ್ಪಷ್ಟ ಆದೇಶ ಹೊರಡಿಸಬೇಕೆಂದರು. 

ಸತ್ಯಾಗ್ರಹದಲ್ಲಿ ಸಂಘದ ಅಧ್ಯಕ್ಷ ಎಂ. ನೀಲಗಿರಿಯಪ್ಪ, ಕಾರ್ಯದರ್ಶಿ ಎಸ್.ಬಿ. ಗುತ್ತ್ಯೆಪ್ಪ,  ಪದಾಧಿಕಾರಿಗಳಾದ ಎಲ್.ಡಿ. ಗೋಣೆಪ್ಪ ಮತ್ತಿತರರಿದ್ದರು.

ವಿವಿಧ ಬೇಡಿಕೆಗಳಿರುವ ಮನವಿಯನ್ನು ಮೇಯರ್ ವಿನಾಯಕ ಪೈಲ್ವಾನ್, ಉಪ ಮೇಯರ್ ಯಶೋಧ ಹೆಗ್ಗಪ್ಪ, ಮಾಜಿ ಮೇಯರ್ ಎಸ್.ಟಿ. ವೀರೇಶ್‌ ಉಪಸ್ಥಿತರಿದ್ದು ಸ್ವೀಕರಿಸಿದರು.

error: Content is protected !!