ದೇವದಾಸಿ ಮಹಿಳೆಯರ ಮಾಸಿಕ ಪಿಂಚಣಿ 5 ಸಾವಿರ ರೂ.ಗೆ ಹೆಚ್ಚಿಸಲು ಆಗ್ರಹ

ದಾವಣಗೆರೆ, ಜೂ. 6-  ಮಾಸಿಕ ಪಿಂಚಣಿಯನ್ನು 5 ಸಾವಿರ ರೂ.ಗಳಿಗೆ ಹೆಚ್ಚಿಸುವಂತೆ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಜಿಲ್ಲಾ ಸಮಿತಿ ಸರ್ಕಾರಕ್ಕೆ ಒತ್ತಾಯಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಸಂಘದ ರಾಜ್ಯ ಉಪಾಧ್ಯಕ್ಷ ಟಿ.ವಿ. ರೇಣುಕಮ್ಮ, ಪಿಂಚಣಿ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಇದೇ ದಿನಾಂಕ 12ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಹಾಗೂ ತಾಲ್ಲೂಕು ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.

ಮಾಸಿಕ ಪಿಂಚಣಿಯನ್ನು 1500 ರೂ.ಗಳಿಂದ ಕನಿಷ್ಟ 3 ಸಾವಿರ ರೂ.ಗಳಿಗೆ ಹೆಚ್ಚಿಸುವಂತೆ ಹಿಂದಿನ ಎಲ್ಲಾ ಸರ್ಕಾರಗಳಿಗೆ ಒತ್ತಾಯಿಸಲಾಗಿತ್ತು. ಪ್ರತಿಭಟನೆಯನ್ನೂ ನಡೆಸಿದ್ದೆವು. ಆದರೆ ಯಾವ ಸರ್ಕಾರವೂ  ಹೆಚ್ಚಿಸಲಿಲ್ಲ ಎಂದವರು ಹೇಳಿದರು.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಜನ ಸಂಖ್ಯೆಗನುಗುಣವಾಗಿ 30,000 ಕೋಟಿ ರೂ. ಅನುದಾನ ಬಿಡುಗಡೆಯಾಗುತ್ತಿದ್ದರೂ ನಮ್ಮಗಳ ಅನುದಾನವನ್ನು ಯಾಕೆ ಹೆಚ್ಚಿಸುತ್ತಿಲ್ಲವೆಂಬುದು ಯಕ್ಷ ಪ್ರಶ್ನೆಯಾಗಿದೆ. ಈಗಲಾದರೂ ನಮ್ಮ ಅನುದಾನ ಹೆಚ್ಚಿಸಿ ನಮ್ಮಗಳ ಮಾಸಿಕ ಸಹಾಯಧನವನ್ನು ಬೆಲೆ ಏರಿಕೆಯಂತೆ ಕನಿಷ್ಟ 5,000 ರೂಗಳಿಗೆ ಹೆಚ್ಚಿಸಿ ಆದೇಶ ಹೊರಡಿಸಬೇಕೆಂದು ಒತ್ತಾಯಿಸಿದರು.

ಗಣತಿ ಪಟ್ಟಿಯಿಂದ ಹೊರಗಿರುವ ಮಹಿಳೆಯರ ಸೇರ್ಪಡೆಗೆ ಅನಗತ್ಯ ತಕರಾರು ತೆಗೆಯಲಾಗುತ್ತಿದೆ. ಅಪಮಾನಿತ ಮತ್ತು ದಮನಿತ ಮಕ್ಕಳ ಅದರಲ್ಲೂ ಪರಿತ್ಯಕ್ತ ಹೆಣ್ಣು ಮಕ್ಕಳ ಗಣತಿ ಮಾಡುವ ಕಾರ್ಯವನ್ನು ಕೈಗೊಳ್ಳದೇ ದೌರ್ಜನ್ಯದ ದೇವದಾಸಿ ಪದ್ಧತಿಯನ್ನು ಬೆಳೆಯಲು ಬಿಡಲಾಗುತ್ತಿದೆ ಎಂದು ಆರೋಪಿಸಿದರು.

ದೇವದಾಸಿ ಮಹಿಳೆಯರ ಮದುವೆಗೆ ಪ್ರೋತ್ಸಾಹ ಧನ ಹೆಚ್ಚಿಸಬೇಕು. ದೇವದಾಸಿ ಮಕ್ಕಳ ಹಾಗೂ ಕುಟುಂಬದವ ಸದಸ್ಯರನ್ನು ಗಣತಿ ಮಾಡಿ, ಅವರಿಗೆ ಪುನರ್ವಸತಿ ಕಲ್ಪಿಸಬೇಕು.  ವ್ಯವಸಾಯದಲ್ಲಿ ತೊಡಗಲು ಉಚಿತ ನೀರಾವರಿ ಜಮೀನು ನೀಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆೆ ಅವರು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷೆ ಚೆನ್ನಮ್ಮ, ಸಹ ಕಾರ್ಯದರ್ಶಿಗಳಾದ ಮೈಲಮ್ಮ, ಮಂಜುಳ, ಜಿಲ್ಲಾ ಕಾರ್ಯದರ್ಶಿ ಆನಂದರಾಜು ಇತರರು ಉಪಸ್ಥಿತರಿದ್ದರು.

error: Content is protected !!