ಬಸವ ಜಯಂತಿ: ನಗರದಲ್ಲಿ ನಾಡಿದ್ದು ಪ್ರಭಾತ್‌ಪೇರಿ

ಬಸವ ಜಯಂತಿ: ನಗರದಲ್ಲಿ ನಾಡಿದ್ದು ಪ್ರಭಾತ್‌ಪೇರಿ

ದಾವಣಗೆರೆ, ಮೇ 1 – 112ನೇ ವರ್ಷದ ಬಸವ ಜಯಂತ್ಯೋತ್ಸವದ ಪ್ರಯುಕ್ತ ಶ್ರೀ ವಿರಕ್ತ ಮಠ ಮತ್ತು ಲಿಂಗಾಯತ ತರುಣ ಸಂಘ ಇವರ ಜಂಟಿ ಆಶ್ರಯದಲ್ಲಿ ಇದೇ ದಿನಾಂಕ 4ರ ಶನಿವಾರದಿಂದ ಇದೇ ದಿನಾಂಕ 10ರ ಶುಕ್ರವಾರದವರೆಗೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ವಿರಕ್ತ ಮಠ – ಶ್ರೀ ಶಿವಯೋಗಾಶ್ರಮದ ಶ್ರೀ ಬಸವಪ್ರಭು ಸ್ವಾಮೀಜಿ ತಿಳಿಸಿದ್ದಾರೆ.

ಇದೇ ದಿನಾಂಕ 4ರ ಶನಿವಾರದಿಂದ ಪ್ರತಿದಿನ ಬೆಳಿಗ್ಗೆ 7.30 ಕ್ಕೆ ನಗರದ ವಿವಿಧ ಬಡಾವಣೆಗಳಲ್ಲಿ ಬಸವ ಪ್ರಭಾತ್ ಪೇರಿ ಜರುಗಲಿದ್ದು, ಈ ಪ್ರಭಾತ್ ಪೇರಿಗೆ ಬಸವ ಕಲಾ ಲೋಕ ಪ್ರತಿನಿತ್ಯ ವಚನ ಭಜನೆ ಸಾಥ್ ನೀಡಲಿದೆ.   

4ರ ಶನಿವಾರ  ಶ್ರೀ ವಿರಕ್ತ ಮಠದಿಂದ ಆರಂಭವಾಗುವ ಪಾದಯಾತ್ರೆಯು ಶ್ರೀ ಬಕ್ಕೇ ಶ್ವರ ದೇವಸ್ಥಾನ, ಮಹಾರಾಜಪೇಟೆ, ಗಾಂಧಿ ನಗರ, ಕಾಳಿಕಾದೇವಿ ರಸ್ತೆಯಲ್ಲಿ ಸಂಚರಿಸಲಿದೆ.

ದಿನಾಂಕ 5ರ ಭಾನುವಾರ ಸ್ವಾಗೇರ ಪೇಟೆ, ಒಕ್ಕಲಿಗರ ಪೇಟೆ, ಕಾಯಿಪೇಟೆ, ದಿನಾಂಕ 6ರ ಸೋಮವಾರ ಮದಕರಿ ನಾಯಕ ವೃತ್ತ, ಜಾಲಿನಗರ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಬಸವ ಪ್ರಭಾತ್ ಪೇರಿ ಸಂಚರಿಸಲಿದೆ.

ದಿನಾಂಕ 7ರ ಮಂಗಳವಾರ ಮದಕರಿ ನಾಯಕ ವೃತ್ತ, ಛಲವಾದಿ ಕೇರಿ, ದಿನಾಂಕ 8ರ ಬುಧವಾರ ಮದಕರಿ ನಾಯಕ ವೃತ್ತ, ತಳವಾರ ಕೇರಿ, ಕುರುಬರ ಕೇರಿ, ಬೂದಾಳ್‌ ರಸ್ತೆ, ಕಾಳಿಕಾದೇವಿ ರಸ್ತೆ, ದಿನಾಂಕ 9ರ  ಗುರುವಾರ ಕಾಳಿಕಾದೇವಿ ರಸ್ತೆ, ಆನೆಕೊಂಡ ಪೇಟೆ, ಹಳೇಪೇಟೆ, ಎಸ್.ಕೆ.ಪಿ. ರಸ್ತೆಯಿಂದ ವಿರಕ್ತ ಮಠ ತಲುಪಲಿದೆ.

ಬಸವ ಪ್ರಭಾತ್ ಪೇರಿಯಲ್ಲಿ ಭಾಗವಹಿಸಲಿಚ್ಚಿಸುವವರು ವಿವರಕ್ಕೆ ಮೊಬೈಲ್ 96118-89151 ರಲ್ಲಿ ಸಂಪರ್ಕಿಸುವಂತೆ ಲಿಂಗಾಯತ ತರುಣ ಸಂಘದ ಸಂಚಾಲಕ ಕಣಕುಪ್ಪಿ ಮುರುಗೇಶಪ್ಪ ಕೋರಿದ್ದಾರೆ.  

ಇದೇ ದಿನಾಂಕ 6ರ ಸೋಮವಾರ ಸಂಜೆ 4 ಕ್ಕೆ ವಿರಕ್ತ ಮಠದಲ್ಲಿ ಮಕ್ಕಳಿಗಾಗಿ ವಚನ ಸ್ಪರ್ಧೆ ಏರ್ಪಡಿಸಲಾಗಿದೆ. 

ದಿನಾಂಕ 10ರ ಶುಕ್ರವಾರ ಬಸವ ಜಯಂತಿ ದಿನದಂದು ಬೆಿಳಿಗ್ಗೆ  7.30ಕ್ಕೆ ಐತಿಹಾಸಿಕ ಶ್ರೀ ಗುರು ಬಸವಣ್ಣನವರ ಉತ್ಸವ, ವಿಶ್ವಗುರು ಬಸವಣ್ಣನವರ ಭಾವಚಿತ್ರದೊಂದಿಗೆ,
ಬಸವಾದಿ ಶರಣರ ವಚನ ಗ್ರಂಥ
ಮೆರವಣಿಗೆ ನಡೆಯಲಿದೆ. ಮೆರವಣಿಗೆಯು ವಿರಕ್ತಮಠದಿಂದ ಹೊರಟು ಶ್ರೀ ಬಕ್ಕೇಶ್ವರ ದೇವಸ್ಥಾನ, ಹಾಸಬಾವಿ ವೃತ್ತ, ಬಸವರಾಜಪೇಟೆ, ಕಾಳಿಕಾದೇವಿ ರಸ್ತೆಯಿಂದ ಶ್ರೀ ವಿರಕ್ತಮಠ ತಲುಪಲಿದೆ.

ಬೆಳಿಗ್ಗೆ 9.30ಕ್ಕೆ  ನಡೆಯುವ ಶ್ರೀ ಗುರು ಬಸವಣ್ಣನವರ ತೊಟ್ಟಿಲು ಕಾರ್ಯಕ್ರಮದಲ್ಲಿ ಸಣ್ಣ ಮಕ್ಕಳಿಗೆ ನಾಮಕರಣ ಮಾಡಲಾಗುವುದು.   

ನಂತರ ಬೆಳಿಗ್ಗೆ 10 ಕ್ಕೆ, ದೇಶದಲ್ಲೇ ಪ್ರಪ್ರಥಮ ಬಾರಿಗೆ 1913ರಲ್ಲಿ ದಾವಣಗೆರೆ
ಶ್ರೀ ವಿರಕ್ತ ಮಠದಲ್ಲಿ ವಿಶ್ವಗುರು ಬಸವಣ್ಣನವರ ಜಯಂತಿ ಯನ್ನು ಪ್ರಾರಂಭಿಸಿದ್ದ ಅಂದಿನ ವಿರಕ್ತ ಮಠಾಧೀಶರಾದ ಲಿಂ. ಶ್ರೀ ಮೃತ್ಯುಂಜಯ ಅಪ್ಪಗಳವರ ಹಾಗೂ ಕರ್ನಾಟಕ ಗಾಂಧಿ ಲಿಂ. ಹರ್ಡೇಕರ್ ಮಂಜಪ್ಪನವರ ಸ್ಮರಣೋತ್ಸವವನ್ನು ದೊಡ್ಡ ಪೇಟೆಯಲ್ಲಿರುವ ವಿರಕ್ತಮಠದಲ್ಲಿ ಹಮ್ಮಿಕೊಳ್ಳ ಲಾಗಿದೆ. ಇದೇ ಸಂದರ್ಭದಲ್ಲಿ ಚಿತ್ರದುರ್ಗದ ಜಾನಪದ ಕಲಾವಿದ ಗಂಜಿಗಟ್ಟೆ ಕೃಷ್ಣಮೂರ್ತಿ ಅವರಿಂದ ವಚನ ಸಂಗೀತ ಏರ್ಪಾಡಾಗಿದೆ.

ಬಸವ ಜಯಂತಿ ಪ್ರಯುಕ್ತ ಜನಜಾಗೃತಿಗಾಗಿ ಬಸವ ಪ್ರಭಾತ್ ಪೇರಿಯನ್ನು  ಲಿಂ. ಕಣಕುಪ್ಪಿ ಕೊಟ್ರಬಸಪ್ಪ ಮತ್ತು ಲಿಂ. ಕಣಕುಪ್ಪಿ ಗುರುಪಾದಪ್ಪ ಅವರುಗಳ ನೇತೃತ್ವ ದಲ್ಲಿ  108 ವರ್ಷಗಳ ಹಿಂದೆ  ಪ್ರಾರಂಭಿಸಲಾಗಿದ್ದು, ಅಂದಿನಿಂದ ಪ್ರತಿ ವರ್ಷವೂ ಬಸವ ಪ್ರಭಾತ್ ಪೇರಿ ನಡೆಸಲಾಗುತ್ತಿದೆ ಎಂದು ಲಿಂಗಾಯತ ತರುಣ ಸಂಘದ ಸಂಚಾಲಕ ಕಣಕುಪ್ಪಿ ಮುರುಗೇಶಪ್ಪ ತಿಳಿಸಿದ್ದಾರೆ.

error: Content is protected !!