ನಗರದಲ್ಲಿ ಇಂದು ಸೈಕಲ್ ವಿತರಣೆ

ನಗರದಲ್ಲಿ ಇಂದು ಸೈಕಲ್ ವಿತರಣೆ

ದಾವಣಗೆರೆ, ಮೇ 1- ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ಥೆಯರ ರಕ್ಷಣೆಗೆ ರಾಜ್ಯ ಸರ್ಕಾರ ಬದ್ಧವಾಗಿದೆ. ಯಾರಿಗೆ ರಕ್ಷಣೆ ಬೇಕೋ ಅವರಿಗೆಲ್ಲ ರಕ್ಷಣೆ ಕೊಡುತ್ತೇವೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ.

ಬುಧವಾರ ಸಚಿವ ಎಸ್.ಎಸ್. ಮಲ್ಲಿಕಾ ರ್ಜುನ್ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಕರಣದಲ್ಲಿ ರಾಜ್ಯ ಸರ್ಕಾರ ಯಾವುದೇ ವಿಳಂಬ ಮಾಡಿಲ್ಲ. ರಾಜ್ಯ ಮಹಿಳಾ ಆಯೋಗದಿಂದ ಸರ್ಕಾರಕ್ಕೆ  ದೂರು ಪತ್ರ ಬಂದ ತಕ್ಷಣ ಕ್ರಮವಹಿಸಿ, ತನಿಖೆಗೆ ಎಸ್‌ಐಟಿಗೆ ವಹಿಸಲಾಗಿದೆ. ತನಿಖೆ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದರು.

ಶೀಘ್ರವೇ ಸರ್ಕಾರಕ್ಕೆ ತನಿಖಾ ವರದಿ ಕೊಡಲು ಸೂಚಿಸಲಾಗಿದೆ. ವರದಿ ಬರುವವರೆಗೆ ಈ ಪ್ರಕರಣ ಕುರಿತು ಏನೂ ಉತ್ತರಿಸಲು ಸಾಧ್ಯವಿಲ್ಲ ಎಂದ ಪರಮೇಶ್ವರ್, ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ವಿಡಿಯೋ ಹರಿದಾಡುತ್ತಿದ್ದು  ಇವು ಪೋಸ್ಟ್ ಆಗದಂತೆ ಹಾಗೂ ಈಗಾಗಲೇ ಪೋಸ್ಟ್ ಆಗಿದ್ದನ್ನು ಅಳಿಸಿ ಹಾಕುವಂತೆ ಸಾಮಾಜಿಕ ಜಾಲತಾಣಗಳ ಏಜೆನ್ಸಿಗೆ ಕೋರಲಾಗುವುದು ಎಂದರು.

ಪ್ರಜ್ವಲ್ ಪ್ರಕರಣವನ್ನು ಖಾಸಗಿ ತನಿಖಾ ಸಂಸ್ಥೆಗೊಳಪಡಿಸಬೇಕು ಎಂಬ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಒತ್ತಾಯಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ್, ನಾವು- ಅವರು (ಕುಮಾರಸ್ವಾಮಿ)ಸರ್ಕಾರ ನಡೆಸುವಾಗ ಆಗಲೂ ನಾನು ಗೃಹ ಸಚಿವನಾಗಿದ್ದೆ. ಆಗ ಅವರು ರಾಜ್ಯ ಪೊಲೀಸ್ ವ್ಯವಸ್ಥೆ ಬಗ್ಗೆ ವಿಶ್ವಾಸ ಹೊಂದಿದ್ದರು. ಈಗ ಏಕಾಏಕಿ ಅವರಿಗೆ ರಾಜ್ಯ ಪೊಲೀಸರ ಮೇಲಿನ ವಿಶ್ವಾಸ ಹೋಯಿತೇ? ನನಗಂತೂ ರಾಜ್ಯ ಪೊಲೀಸ್ ಇಲಾಖೆ ಬಗ್ಗೆ ವಿಶ್ವಾಸವಿದೆ ಎಂದರು.

ಬಿಜೆಪಿ ಆಡಳಿತಾವಧಿಗಿಂತ ನಮ್ಮ ಆಡಳಿತಾವಧಿಯಲ್ಲಿ ಕಾನೂನು ವ್ಯವಸ್ಥೆ ಹೆಚ್ಚು ಸುವ್ಯವಸ್ಥಿತವಾಗಿದೆ ಎಂದರು. ಬಿಜೆಪಿ ಆಡಳಿತವಿದ್ದಾಗ ರಾಜ್ಯದಲ್ಲಿ ಎಷ್ಟು ಕೊಲೆ, ಅತ್ಯಾಚಾರ, ಇತರ ಅಪರಾಧ ಪ್ರಕರಣಗಳು ನಡೆದಿದ್ದವು. ನಮ್ಮ ಸರ್ಕಾರ ಇದ್ದಾಗ ಎಷ್ಟು ನಡೆದಿವೆ ಎಂಬ ಅಂಕಿ ಸಂಖ್ಯೆ ಕೊಡಬಲ್ಲ ಎಂದರು.

ಬೆಂಗಳೂರಿನಲ್ಲಿ ನಡೆದ ರಾಮೇಶ್ವರ ಕೆಫೆ ಬಾಂಬ್ ಪ್ರಕರಣದ ಆರೋಪಿಯನ್ನು  ಬೇಗ ಬಂಧಿಸಲಾಗಿದೆ. ಇಂಥ ಗಂಭೀರ ಪ್ರಕರಣದಲ್ಲಿ  ಇಷ್ಟೊಂದು ಬೇಗ ಆರೋಪಿಯನ್ನು ಬಂಧಿಸಿರುವುದು ಇತಿಹಾಸದಲ್ಲಿಯೇ ಉದಾಹರಣೆ ಇಲ್ಲ. ಹುಬ್ಬಳ್ಳಿಯ ಯುವತಿ ನೇಹಾ ಹತ್ಯೆ ವಿಚಾರ ಗೊತ್ತಾದ ತಕ್ಷಣ ಒಂದು ಗಂಟೆಯೊಳಗೆ ಆರೋಪಿಯನ್ನು ಬಂಧಿಸಲಾಗಿದೆ ಹಾಗೂ ಸಿಐಡಿ ತನಿಖೆಗೆ ವಹಿಸಲಾಗಿದೆ ಎಂದರು.

ಮಹಿಳೆಯೋರ್ವರು ಕೊಟ್ಟ ದೂರಿನ ಪ್ರಕರಣ ವಿಚಾರವಾಗಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ನೊಟೀಸ್ ನೀಡಲಾಗಿದೆ. ನೋಟಿಸ್‌ಗೆ ಯಡಿಯೂರಪ್ಪ  ಪ್ರತಿಕ್ರಿಯಿಸಿದ್ದಾರೆ. ಅದೂ ಕೂಡ ತನಿಖೆ ನಡೆದಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ. ಬಸವರಾಜ್, ಎಸ್.ರಾಮಪ್ಪ, ಬಿ.ಹೆಚ್. ವೀರಭದ್ರಪ್ಪ, ವಕೀಲ ಪ್ರಕಾಶ್ ಪಾಟೀಲ್ ಇನ್ನಿತರ ಪ್ರಮುಖರು ಸುದ್ದಿಗೋಷ್ಠಿಯಲ್ಲಿದ್ದರು.

error: Content is protected !!