ಪಂಚಮಸಾಲಿ ಮೀಸಲಾತಿ ಕೇಳಲು ಕಾಂಗ್ರೆಸ್ ಸಚಿವ, ಶಾಸಕರಿಗೆ ದಿಟ್ಟತನವಿಲ್ಲ : ಯತ್ನಾಳ್‌

ಪಂಚಮಸಾಲಿ ಮೀಸಲಾತಿ ಕೇಳಲು ಕಾಂಗ್ರೆಸ್ ಸಚಿವ, ಶಾಸಕರಿಗೆ ದಿಟ್ಟತನವಿಲ್ಲ : ಯತ್ನಾಳ್‌

ದಾವಣಗೆರೆ, ಮೇ 1 – ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕಲ್ಪಿಸುವ ಕುರಿತ ಬೇಡಿಕೆಯನ್ನು ಆಲಿಸಲು ಸಮಯ ನೀಡಲೂ ಸಹ ಮುಖ್ಯಮಂತ್ರಿ ಸಿದ್ದರಾಮಯ್ಯ ಒಲವು ತೋರಲಿಲ್ಲ. ಕಾಂಗ್ರೆಸ್‌ನಲ್ಲಿರುವ ಪಂಚಮಸಾಲಿ ಜನಪ್ರತಿನಿಧಿಗಳೂ ಮುಖ್ಯಮಂತ್ರಿ ಎದುರು ದಿಟ್ಟವಾಗಿ ಮಾತನಾಡುತ್ತಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಆರೋಪಿಸಿದ್ದಾರೆ.

ದಾವಣಗೆರೆ ಜಿಲ್ಲಾ ಲಿಂಗಾಯತ ಪಂಚಮಸಾಲಿ ಸಮಾಜದ ವತಿಯಿಂದ ಬಂಟರ ಭವನದಲ್ಲಿ ಆಯೋಜಿಸಲಾಗಿದ್ದ ಲಿಂಗಾಯತ ಪಂಚಮಸಾಲಿ ಸಮಾಜದ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬೆಳಗಾವಿಯ ಸುವರ್ಣ ಸೌಧದಲ್ಲಿ ವಿಧಾನ ಸಭಾ ಅಧಿವೇಶನದ ಸಮಯದಲ್ಲಿ ಮೀಸಲಾತಿ ಕುರಿತು ಸಿದ್ದರಾಮಯ್ಯ ಜೊತೆ ಮಾತನಾಡಲು ಸ್ವಾಮೀಜಿ ಬಯಸಿದ್ದರು. ಆದರೆ, ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಶಾಸಕರಾದ ವಿನಯ್ ಕುಲಕರ್ಣಿ ಮತ್ತು ವಿಜಯಾನಂದ ಕಾಶಪ್ಪನವರ್ ಅವರಿಗೆ ಸಮಯ ಕೊಡಿಸಲು ಒಂದು ವಾರವಾದರೂ ಸಾಧ್ಯವಾಗಲಿಲ್ಲ. ಕೊನೆಗೆ ನಾನು ಹೇಳಿಕೆ ನೀಡಿದ ನಂತರವೇ ಮುಖ್ಯಮಂತ್ರಿ ಸಮಯ ನೀಡಿದರು ಎಂದರು.

ಕಾಂಗ್ರೆಸ್ ಪಕ್ಷದಲ್ಲಿ ಲಿಂಗಾಯತರ ಬಗ್ಗೆ ಅಲರ್ಜಿ ಇದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರೇ ನನ್ನ ಬಳಿ ಹೇಳಿದ್ದರು. ಈ ಬಗ್ಗೆ ವೀರರಾಣಿ ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಮೆ ಎದುರು ಪ್ರಮಾಣ ಮಾಡಲು ಸಿದ್ಧ ಎಂದರು.

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಪಂಚಮಸಾಲಿ ಸಮಾಜದವರು ಬಿಜೆಪಿ ಪರ ಮತ ಚಲಾಯಿಸಬೇಕು. ನಾನು ಹೋರಾಟ ನಡೆಸಿ ಸಮಾಜದ ಮೀಸಲಾತಿ ಬೇಡಿಕೆ ಈಡೇರಿಸುತ್ತೇನೆ ಎಂದವರು ಭರವಸೆ ನೀಡಿದರು.

ಬಿಜೆಪಿಗೆ ಮತ ನೀಡಬಾರದು ಎಂದು ಹೇಳಿದ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ಅವರ ಹೆಸರು ಹೇಳದೇ ತರಾಟೆಗೆ ತೆಗೆದುಕೊಂಡ ಯತ್ನಾಳ್, ಬಿಜೆಪಿಗೆ ಮತ ಹಾಕಬೇಡಿ ಎಂದು ಹೇಳಲು ಸ್ವಾಮೀಜಿಗೆ ಯಾರು ಅನುಮತಿ ಕೊಟ್ಟಿದ್ದಾರೆ? ಎಂದು ಪ್ರಶ್ನಿಸಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಶಾಸಕ ಅರವಿಂದ ಬೆಲ್ಲದ್, ಲಿಂಗಾಯತ ಸಮುದಾಯಕ್ಕೆ 2ಡಿ ಅಡಿಯಲ್ಲಿ ನೀಡಲಾಗಿದ್ದ ಶೇ.7ರ ಮೀಸಲಾತಿ ತಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ರವಿಕುಮಾರ್ ಅವರು ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿರುವುದೇ ಕಾರಣ ಎಂದು ಆರೋಪಿಸಿದರು.

ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಮಾತನಾಡಿ, ಕೊಂಡಿ ಮಂಚಣ್ಣ ಹಾಗೂ ಮೀರ್ ಸಾಧಿಕ್ ಮನೋಭಾವದ ಕೆಲವರು ಕಾಂಗ್ರೆಸ್ ಪಕ್ಷಕ್ಕೆ ಪಂಚಮಸಾಲಿ ಸಮಾಜದ ಬೆಂಬಲ ಇದೆ ಎಂದು ಬಿಂಬಿಸಲು ಹೊರಟಿದ್ದಾರೆ ಎಂದು ಕಿಡಿ ಕಾರಿದರು.

ಇವರು ತಮ್ಮ ಸ್ವಾರ್ಥಕ್ಕಾಗಿ ಪಂಚಮಸಾಲಿ ಸಮಾಜ ಒಡೆದು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸುತ್ತಿದ್ದಾರೆ ಎಂದ ಅವರು, ಪಂಚಮಸಾಲಿ ಮೀಸಲಾತಿ ಹೋರಾಟದ ಪಾದಯಾತ್ರೆ ದಾವಣಗೆರೆಗೆ ಬಂದಾಗ ಕಾಂಗ್ರೆಸ್‌ನ ಯಾವ ನಾಯಕ ಬೆಂಬಲಿಸಿದರು? ಎಂದು ಪ್ರಶ್ನಿಸಿದರು.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಗೆಲುವಿಗೆ ಪಂಚಮಸಾಲಿ ಸಮಾಜವೇ ನಿರ್ಣಾಯಕ. ಗಾಯತ್ರಿ ಸಿದ್ದೇಶ್ವರ ಅವರ ಗೆಲುವು ಈ ಬಾರಿ ನಿಶ್ಚಿತವಾಗಿದೆ. ಗೆಲುವಿನ ನಂತರ, ಪಂಚಮಸಾಲಿ ಸಮಾಜಕ್ಕೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ನಾನು ಎಲ್ಲ ಸಮಾಜದವರಿಗೆ ದಾನ ಮಾಡಿದ್ದೇನೆ. ಆದರೆ, ದಾನ ಮಾಡಿದ್ದನ್ನು ಪ್ರಚಾರಕ್ಕೆ ಬಳಸಿಕೊಳ್ಳುವುದಿಲ್ಲ. ಬಲಗೈ ದಾನ ಮಾಡಿದ್ದು ಎಡಗೈಗೆ ಗೊತ್ತಾಗಬಾರದು ಎನ್ನುತ್ತಾರೆ. ಕೆಲವರು ಎರಡೂ ಕೈಗೆ ಗೊತ್ತಾಗುವಂತೆ ದಾನ ಮಾಡುತ್ತಾರೆ ಎಂದು ಲೇವಡಿ ಮಾಡಿದರು.

ಜಿ.ಪಂ. ಮಾಜಿ ಸದಸ್ಯ ತೇಜಸ್ವಿ ಪಟೇಲ್ ಮಾತನಾಡಿ, ಹೆಚ್ಚು ಜನಸಂಖ್ಯೆ ಇದ್ದರೂ ಅದರ ಮುಖಂಡರು ಚುನಾವಣೆಯಲ್ಲಿ ಸೋಲುವ ಪ್ರವೃತ್ತಿ ಪಂಚಮಸಾಲಿ ಸಮಾಜದಲ್ಲಿ ಮಾತ್ರ ಕಂಡು ಬರುತ್ತಿದೆ. ಚುನಾವಣೆಯಲ್ಲಿ ಹಣಬಲದ ಪ್ರಾಬಲ್ಯ ಹೆಚ್ಚಾಗಿರುವುದೇ ಇದಕ್ಕೆ ಕಾರಣ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಮಾಜಿ ಮೇಯರ್ ಬಿ.ಜಿ. ಅಜಯ್ ಕುಮಾರ್, ದಾವಣಗೆರೆ ಜಿಲ್ಲೆಯಲ್ಲಿ ಪಂಚಮಸಾಲಿ ಸಮಾಜದ ನಾಯಕತ್ವ ಬಲಿಷ್ಠವಾಗಬೇಕಿದೆ. ಜಿಲ್ಲೆಯಲ್ಲಿ ನಮ್ಮ ಸಮಾಜ ಎದುರಿಸುತ್ತಿರುವ ನಾಯಕತ್ವದ ಕೊರತೆಯನ್ನು ಯತ್ನಾಳ್ ನೀಗಿಸಿದ್ದಾರೆ ಎಂದರು.

ಕಾಂಗ್ರೆಸ್ ಸರ್ಕಾರ ಪಂಚಮಸಾಲಿ ವಿರೋಧಿಯಾಗಿದೆ. ಮೀಸಲಾತಿ ಕುರಿತು ಮುಖ್ಯಮಂತ್ರಿ ಬಳಿ ಮಾತನಾಡಲು ಶ್ರೀ ಜಯಮೃತ್ಯುಂಜಯ ಶ್ರೀಗಳಿಗೆ ಐದು ನಿಮಿಷಗಳ ಸಮಯ ಸಹ ಕೊಡಲಾಗಿಲ್ಲ ಎಂದು ಆಕ್ಷೇಪಿಸಿದರು.

ವೇದಿಕೆಯ ಮೇಲೆ ಪರಿಷತ್ ಸದಸ್ಯರಾದ ರವಿಕುಮಾರ್, ನಾರಾಯಣಸ್ವಾಮಿ, ಮುಖಂಡರಾದ ಜಿ.ಎಸ್. ಅನಿತ್, ಪರಮೇಶ್ವರ ಗೌಡ್ರು, ರಘುಚಂದ್ರನ್, ನಾಗರಾಳ್ ಹುಲಿ, ಎಂ.ಎಸ್. ರುದ್ರಗೌಡ್ರು, ಬಿ. ಚಿದಾನಂದಪ್ಪ, ಆರುಂಡಿ ನಾಗರಾಜ್, ಚಂದ್ರಶೇಖರಪ್ಪ, ಗಾಯತ್ರಿ, ಮಂಜುಳ ಮತ್ತಿತರರು ಉಪಸ್ಥಿತರಿದ್ದರು.

error: Content is protected !!