ಲೋಕಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾಧ್ಯ : ಸಂಸದ ಸಿದ್ದೇಶ್ವರ

ಲೋಕಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾಧ್ಯ : ಸಂಸದ ಸಿದ್ದೇಶ್ವರ

ದಾವಣಗೆರೆ, ಮೇ 1- ಲೋಕಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾಧ್ಯ. ಇದನ್ನು ಮತದಾರರು ಅರ್ಥ ಮಾಡಿಕೊಂಡಿದ್ದು, ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ ಅವರಿಗೆ ಹೃದಯಪೂರ್ವಕ ಸ್ಪಂದನೆ ನೀಡುತ್ತಿದ್ದಾರೆ. ಈ ಬಾರಿ ನಮ್ಮ ಅಭ್ಯರ್ಥಿ ಗೆಲುವು ಖಚಿತ ಎಂದು ಸಂಸದ  ಜಿ.ಎಂ.ಸಿದ್ದೇಶ್ವರ ತಿಳಿಸಿದರು.

ಸ್ಥಳೀಯ ಗಾಂಧಿನಗರದಲ್ಲಿ ಪತ್ನಿ ಗಾಯಿತ್ರಿ ಸಿದ್ದೇಶ್ವರ ಪರ ಮತಯಾಚನೆ ಮಾಡಿ ಮಾತನಾಡಿದ ಅವರು, ದಾವಣಗೆರೆ ಲೋಕಸಭಾ ಕ್ಷೇತ್ರದ ಹಾಗೂ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಭಾ.ಜ.ಪ. ಸಂಕಲ್ಪ ಮಾಡಿದೆ. ಮೋದಿಜೀ ಪ್ರಧಾನಿ ಆಗಿ 10 ವರ್ಷದಲ್ಲೇ ದೇಶದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ರಾಷ್ಟ್ರೀಯ ಹೆದ್ದಾರಿ, ಏರ್‌ಪೋರ್ಟ್, ಆಸ್ಪತ್ರೆ, ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಸೇರಿದಂತೆ ಎಲ್ಲಾ ರಂಗಗಳ ಅಭಿವೃದ್ಧಿ ಮೋದಿ ಒತ್ತು ನೀಡಿದ್ದಾರೆ. ಇಂತಹ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂದರೆ ದಾವಣಗೆರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ ಹೆಚ್ಚಿನ ಅಂತರಗಳಿಂದ ಗೆದ್ದು ದೆಹಲಿಗೆ ಹೋಗಬೇಕು. ಈ ನಿಟ್ಟಿನಲ್ಲಿ ಕಾರ್ಯಕರ್ತರು ಇನ್ನು 6 ದಿನ ಮನೆ – ಮನೆಗೆ ಹೋಗಿ ಮತ ಕೇಳಬೇಕು ಎಂದು ಮನವಿ ಮಾಡಿದರು.

ಕಾಂಗ್ರೆಸ್ ಅಭ್ಯರ್ಥಿಗೆ ಮತ್ತು ಅವರ ಪತಿಗೆ ಜಿಲ್ಲೆಯಲ್ಲಿ ಎಷ್ಟು ಹಳ್ಳಿಗಳಿವೆ, ಎಷ್ಟು ಪಂಚಾಯಿತಿಗಳಿವೆ ಎನ್ನುವುದು ಗೊತ್ತಿಲ್ಲ. ಯಾವ ತಾಲ್ಲೂಕು ಎಷ್ಟು ದೂರ, ಅಲ್ಲಿನ ಸಮಸ್ಯೆಗಳೇನು ಎನ್ನುವುದು ಗೊತ್ತಿಲ್ಲ. ಏನೋ ಕಾಟಚಾರಕ್ಕೆ ಟಿಕೆಟ್ ಸಿಕ್ಕಿದೆ, ಪ್ರಚಾರ ಮಾಡಬೇಕು ಅಂತ ಪ್ರಚಾರ ಮಾಡುತ್ತಿದ್ದಾರೆ. ಮೋದಿ ಅಲೆಯಲ್ಲಿ ಕೊಚ್ಚಿ ಹೋಗುತ್ತೇವೆ ಎನ್ನುವುದು ಕಾಂಗ್ರೆಸ್ ಪಕ್ಷಕ್ಕೂ ಗೊತ್ತಿದೆ. ಇಂತಹ ಕಾಂಗ್ರೆಸ್ ಅಭ್ಯರ್ಥಿಗೆ ನೀವು ನೀಡುವ ಒಂದೊಂದು ಮತ ವ್ಯರ್ಥವಾಗಲಿದೆ. 

ನಿಮ್ಮ ಅಮೂಲ್ಯವಾದ ಮತಗಳನ್ನು ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರಿಗೆ ಹಾಕುವ ಮೂಲಕ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಿ ದೇಶದ, ದಾವಣಗೆರೆ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಿ ಎಂದು ಕರೆ ನೀಡಿದರು.

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸ್ಮಾರ್ಟ್ ಸಿಟಿ, ಅಮೃತ್ ಸಿಟಿ ಅಂತಹ ಯೋಜನೆಗಳು ಜಾರಿಗೆ ಬಂದು ನಗರಗಳು ಸ್ಮಾರ್ಟ್ ಆಗುತ್ತಿವೆ. ಸ್ಮಾರ್ಟ್ ಸಿಟಿ ಯೋಜನೆ ಅಡಿ ದಾವಣಗೆರೆಗೆ 1071 ಕೋಟಿ ರೂ. ಅನುದಾನ ತಂದಿದ್ದೇನೆ. ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಿವೆ. ಅಭಿವೃದ್ಧಿಯನ್ನು ಸಹಿಸದ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಕೆಲ ಯೋಜನೆಗಳನ್ನು ನಿಲ್ಲಿಸಿದ್ದಾರೆ. ಇನ್ನೂ ಕೆಲವು ಪೂರ್ಣಗೊಂಡರೂ ಹಸ್ತಕ್ಷೇಪ ಮಾಡಿ ಜನರ ಉಪಯೋಗಕ್ಕೆ ಬಾರದಂತೆ ಮಾಡಿದ್ದಾರೆ. ಎಸ್.ಎಸ್.ಮಲ್ಲಿಕಾರ್ಜನ್ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಇಂತಹ ದ್ವೇಷದ ರಾಜಕಾರಣಿಗಳಿಗೆ ಜನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದರು.

ಈ ವೇಳೆ ವಿಧಾನ ಪರಿಷತ್ ಸದಸ್ಯರಾದ ನಾರಾಯಣಸ್ವಾಮಿ, ಮಾಜಿ ಮೇಯರ್ ಬಿ.ಜಿ.ಅಜಯ್ ಕುಮಾರ್, ವಿಧಾನ ಪರಿಷತ್ ಸದಸ್ಯರಾದ ಸಂಗಮೇಶ್ ನಿರಾಣಿ, ದೂಡಾ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಒಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಬಿಜೆಪಿ ಮುಖಂಡರಾದ ದೇವರಮನೆ ಶಿವಕುಮಾರ್, ಪುರುಷೋತ್ತಮ್, ಹಾಲೇಶ್ ಸೇರಿದಂತೆ ನೂರಾರು ಕಾರ್ಯಕರ್ತರು ಜೊತೆಯಲ್ಲಿದ್ದರು.

error: Content is protected !!