ಇಂದು ಬಕ್ಕೇಶ್ವರ ರಥೋತ್ಸವ : ನೂತನ ರಥದ ವಿಶೇಷತೆ

ಇಂದು ಬಕ್ಕೇಶ್ವರ ರಥೋತ್ಸವ : ನೂತನ ರಥದ ವಿಶೇಷತೆ

ಇಂದು ಬಕ್ಕೇಶ್ವರ ರಥೋತ್ಸವ : ನೂತನ ರಥದ ವಿಶೇಷತೆ - Janathavaniಶಿವಾಂಶ ಸಂಭೂತರಾಗಿ ಗುಮ್ಮನೂರಿನಲ್ಲಿ  ಅವತರಿಸಿ, ದೇಶ ಪರ್ಯಟನೆ ಮಾಡಿ, ಹರಿಹರ ಕ್ಷೇತ್ರದಲ್ಲಿ ಸ್ವಲ್ಪ ಕಾಲ ನೆಲೆಸಿ, ನಂತರ ದಾವಣಗೆರೆಗೆ ಬಂದು ನೆಲೆಸಿ ಲೀಲಾ ಪವಾಡಗಳನ್ನು ಮೆರೆಯುತ್ತಾ ಚೌಕಿಪೇಟೆಯಲ್ಲಿ ಲಿಂಗೈಕ್ಯರಾಗಿ ಸದ್ಭಕ್ತರನ್ನು ಹರಸುತ್ತಿರುವ ಶ್ರೀ ಗುರು ಶಿವಯೋಗಿ ಬಕೇಶ್ವರ ಸ್ವಾಮಿಯ ರಥೋತ್ಸವ ಇಂದು ನಡೆಯಲಿದೆ.  

ನೂತನ ರಥವನ್ನು ನಿರ್ಮಿಸಲಾಗಿದ್ದು, ಈ ರಥದ ವಿಶೇಷತೆಗಳು ಹೀಗಿವೆ.

ಸುಮಾರು 28 ಅಡಿ ಎತ್ತರವಿರುವ ಈ ರಥದ ಗಡ್ಡೆಯೇ ಸುಮಾರು ಎಂಟೂವರೆ ಅಡಿ ಎತ್ತರವಿದ್ದು, 8 ಅಡಿ ಅಗಲದೊಂದಿಗೆ 16 ಕೋನಗಳಲ್ಲಿದೆ. ವೇದ, ಆಗಮಗಳ ಆಧಾರದೊಂದಿಗೆ ದಕ್ಷಿಣ ಭಾರತೀಯ ಶೈಲಿಯಲ್ಲಿ ನಿರ್ಮಾಣಗೊಂಡಿರುವ ಈ ರಥದ ಪೂರ್ವ ಭಾಗದಲ್ಲಿ ಶ್ರೀ ಗಣೇಶ ಹಾಗೂ ಉಳಿದ ದಿಕ್ಕುಗಳಲ್ಲಿ ಲಕ್ಷ್ಮಿ-ಸರಸ್ವತಿ-ಮಹಾಕಾಳಿ-ವಿಷ್ಣು-ವೀರಭದ್ರೇಶ್ವರ- ಷಣ್ಮುಖ – ಆಂಜನೇಯ – ಮಹೇಶ್ವರ – ರಾಜರಾಜೇಶ್ವರಿ – ಸೂರ್ಯಾದಿ ನವಗ್ರಹಗಳು ಇಂದ್ರಾದಿ ಅಷ್ಟದಿಕ್ಪಾಲಕರು ಅಲ್ಲದೇ ನಂತರದ ಸಾಲುಗಳಲ್ಲಿ ಮೌನೇಶ್ವರ – ಅಲ್ಲಮಪ್ರಭು – ಯಡಿಯೂರು ಸಿದ್ದಲಿಂಗೇಶ್ವರ – ಕರಿಬಸವೇಶ್ವರ – ರೇಣುಕಾಚಾರ್ಯರು – ಮರುಳಸಿದ್ದರು – ತಿಪ್ಪೇರುದ್ರಸ್ವಾಮಿ – ಹೆಬ್ಬಾಳು ರುದ್ರಸ್ವಾಮಿ – ಬಸವಣ್ಣ – ಅಕ್ಕಮಹಾದೇವಿ ಮುಂತಾದ ಶರಣ ಶರಣೆಯರು ಬಕ್ಕೇಶ್ವರರ ಪವಾಡ ಮುಂತಾದ ಕಾಷ್ಟ ಕೆತ್ತನೆಗಳಿದ್ದು, ಊರ್ಧ್ವ ಸಿಂಹಗಳು ಆನೆ ಸಾಲುಗಳು ಸುಂದರವಾಗಿ ಮೂಡಿಬಂದಿವೆ. 

ತೇಗ – ಹೊನ್ನೆ ಹಾಗೂ ಕರಿಮತ್ತಿ ಮರವನ್ನು ಬಳಸಿ, ಗೊಪ್ಪೇನಹಳ್ಳಿಯ ಚಂದ್ರಾಚಾರ್ ಮಕ್ಕಳಾದ ವೀರಾಚಾರ್ ಮುಂತಾದ ಸಹೋದರರು ಸುಮಾರು ಎಂಟು ತಿಂಗಳ ಪರಿಶ್ರಮದೊಂದಿಗೆ ಈ ನೂತನ ರಥವನ್ನು ನಿರ್ಮಿಸಿದ್ದು, ಇಂದಿನ ಮಹಾರಥೋತ್ಸವದಲ್ಲಿ ಇದನ್ನು ಕಣ್ತುಂಬಿಕೊಳ್ಳುವ ಅವಕಾಶ ಭಕ್ತಾದಿಗಳಿಗೆ ಒದಗಿದೆ. ರಥೋತ್ಸವವು ಇಂದು ಸಂಜೆ 7 ಗಂಟೆಯಿಂದ ಜರುಗಲಿದೆ.

ನೂತನ ತೇರಿನಲ್ಲಿ ಮಹಾರಥೋತ್ಸವದ ವಿಶೇಷ ಆಕರ್ಷಣೆಯಾಗಿ ಈ ಬಾರಿ ಉಡುಪಿಯ ಪ್ರಸಿದ್ಧ ಚಂಡೆ ಮೇಳ, ಸಿಂಗಾರ ಮೇಳ, ಕೇರಳದ ದೈವನ್ ನೃತ್ಯ ಮೇಳ, ಎಂದಿನ ಸಂಪ್ರದಾಯದಂತೆ ಚಪ್ಪರದಳ್ಳಿ  ನಂದಿಕೋಲು,  ಕೀಲುಕುದುರೆ, ಕೋಲಾಟ, ಸಾಮೇಳ ವಾದ್ಯಗಳು, ಚವರಿ ಸೇವೆ, ದೀವಟಿಗೆ, ಆಕರ್ಷಕವಾಗಿರುತ್ತದೆ. 

ಶ್ರೀ ಬಕ್ಕೇಶ್ವರರ ಗದ್ದುಗೆಯ ಹೂವಿನ ಅಲಂಕಾರ ಸೇವೆ ಯನ್ನು ಎ.ಎಸ್.ಸಲೋಚನಮ್ಮ ಮತ್ತು ಮಕ್ಕಳು ಮಾಡಿದರೆ, ನೂತನ ತೇರಿನ ಹೂವಿನ ಅಲಂಕಾರ ಸೇವಾಕರ್ತರು ಗೌಡರ ಜಯದೇವಪ್ಪ ರೆಡಿಮೇಡ್ ಗಾರ್ಮೆಂಟ್ಸ್ ಮಾಲೀಕರಾದ ಶ್ರೀಮತಿ ಕವಿತಾ ಗೌಡರ್ ಹಾಗೂ ತೇರಿನ ಒಳಹೊರ ಎಲ್.ಇ.ಡಿ ವಿದ್ಯುತ್ ದೀಪದ ವ್ಯವಸ್ಥೆಯನ್ನು ದಿ. ಶಾಮನೂರು ಬಸವರಾಜಪ್ಪನವರ ಮೊಮ್ಮಗ, ಡಾ.ಎಸ್.ಬಿ.ಮುರುಗೇಶ್ ಅವರ ಮಗ ವಾಸ್ತುಶಿಲ್ಪ ತಜ್ಞ ಆಕರ್ಷ್ ಮಾಡಿದ್ದಾರೆ.                    


– ಹೆಚ್.ಬಿ.ಮಂಜುನಾಥ್

error: Content is protected !!