ಹಕ್ಕು ಪತ್ರಕ್ಕೆ ಆಗ್ರಹಿಸಿ ಗೌರಿಪುರ ಗ್ರಾಮಸ್ಥರ ಮತದಾನ ಬಹಿಷ್ಕಾರ : ಸಿಇಓ ಭೇಟಿ

ಹಕ್ಕು ಪತ್ರಕ್ಕೆ ಆಗ್ರಹಿಸಿ ಗೌರಿಪುರ ಗ್ರಾಮಸ್ಥರ ಮತದಾನ ಬಹಿಷ್ಕಾರ : ಸಿಇಓ ಭೇಟಿ

ಜಗಳೂರು, ಏ. 11 – ತಾಲ್ಲೂಕಿನ ಗೌರಿಪುರ ಹೊಸೂರು ನಲ್ಲಿ ವಾಸವಿರುವ ಮನೆಗಳಿಗೆ ಹಲವಾರು ವರ್ಷ ಗಳಿಂದ  ಹಕ್ಕು ಪತ್ರ ನೀಡದೇ ಇರುವುದರಿಂದ ಅಧಿಕಾರಿಗಳ ಕ್ರಮಕ್ಕೆ ಬೇಸತ್ತು  ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಮಾಡುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.

ತಾಲ್ಲೂಕಿನ ಕ್ಯಾಸನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗೌರಿಪುರ ಗ್ರಾಮದ ಗೌರಿಪುರ ಹೊಸೂರಿನಲ್ಲಿ ಸುಮಾರು 400ಕ್ಕೂ ಹೆಚ್ಚು ಮತಗಳನ್ನು ಹೊಂದಿದ್ದು, ಇಲ್ಲಿ ಸುಮಾರು 103ಕ್ಕೂ ಹೆಚ್ಚು ಮನೆಗಳಿರುತ್ತವೆ. ಈ ಪ್ರದೇಶದಲ್ಲಿ ಅತಿ ಕಡುಬಡತನ ಮತ್ತು ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುವ ಹೆಚ್ಚು ಕುಟುಂಬಗಳು ಕಂಡುಬರುತ್ತವೆ. ಪ್ರದೇಶದಲ್ಲಿ ಸುಮಾರು 20 ವರ್ಷಗಳಿಂದಲೂ ಈ ಜನ ವಾಸ ಮಾಡುತಿದ್ದಾರೆ.

ತಾಲ್ಲೂಕು ದಂಡಾಧಿಕಾರಿಗಳಿಗೆ ಹಾಗೂ ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ವಾಸವಿರುವ ಮನೆಗಳಿಗೆ ಹಕ್ಕುಪತ್ರ ನೀಡಬೇಕೆಂದು ಮನವಿಯನ್ನು ಸಲ್ಲಿಸಿದರೂ ಕೂಡ ಯಾವುದೇ ಅಧಿಕಾರಿಗಳು ಗಮನಹರಿಸಿಲ್ಲ.

  ಹಿಂದೆ 2023-24ನೇ ವಿಧಾನಸಭಾ ಚುನಾವಣೆ ಮತದಾನಕ್ಕೆ ಗೌರಿಪುರ ಹೊಸೂರು ಗ್ರಾಮದ ಎಲ್ಲಾ ಜನರು ಬಹಿಷ್ಕಾರ ಮಾಡಲಾಗಿತ್ತು. ಅಂತ ಸಂದರ್ಭದಲ್ಲಿ ತಾಲ್ಲೂಕು ದಂಡಾಧಿಕಾರಿಗಳು ಮತ್ತು ತಹಶೀಲ್ದಾರ್ ಹಾಗೂ ತಾಲ್ಲೂಕು ಪಂಚಾಯತಿ ಅಧಿಕಾರಿಗಳು, ಗ್ರಾಮ ಪಂಚಾಯತ್ ಅಧಿಕಾರಿಗಳು ಗೌರಿಪುರ ಹೊಸೂರು ಗ್ರಾಮಕ್ಕೆ ಭೇಟಿ ನೀಡಿ ಜನಸಾಮಾನ್ಯರ ಮನವೊಲಿಸುವ ಕಾರ್ಯ ಮಾಡಿದರು. ನಿಮಗೆ ಇನ್ನೂ 3 ತಿಂಗಳ ಒಳಗಾಗಿ ನಾವು ಹಕ್ಕು ಪತ್ರವನ್ನ ನೀಡುತ್ತೇವೆ ಎಂದು ದಯಮಾಡಿ ಮತದಾನ ಬಹಿಷ್ಕಾರವನ್ನು ಹಿಂಪಡೆಯುವಂತೆ ತಿಳಿಸಿದರಲ್ಲದೇ, ಭರವಸೆಯನ್ನೂ ನೀಡಿದರು. ಆದರೆ ವಿಧಾನಸಭಾ ಚುನಾವಣೆ ಮುಗಿದು 1 ವರ್ಷವಾದರೂ ಯಾವುದೇ ರೀತಿಯ ಕ್ರಮಕೈಗೊಂಡಿಲ್ಲ.  ಆದ್ದರಿಂದ ಬೇಸತ್ತ ಗ್ರಾಮಸ್ಥರು ಮನೆಗಳಿಗೆ ಹಕ್ಕು ಪತ್ರ ನೀಡುವವರೆಗೂ ಮುಂಬರುವ 2024ನೇ ಸಾಲಿನ ಲೋಕಸಭಾ ಚುನಾವಣೆಯಲ್ಲಿ ಸಂಪೂರ್ಣವಾಗಿ ಮತದಾನ ಬಹಿಷ್ಕರಿಸುತ್ತೇವೆ ಎಂದು ತಿಸಿದ್ದಾರೆ.

 ಜಿ.ಪಂ.ಸಿಇಓ ಭೇಟಿ : ವಿಷಯ ತಿಳಿದು ಸ್ಥಳಕ್ಕೆ  ಜಿ.ಪಂ ಸಿಇಓ ಮತ್ತು ಚುನಾವಣೆ ಅಧಿಕಾರಿ ಹಾಗೂ ತಾಲ್ಲೂಕು ದಂಡಾಧಿಕಾರಿಗಳು ಇಓ ಹಾಗೂ ಗ್ರಾಮ ಪಂಚಾಯತ್ ಅಧಿಕಾರಿಗಳು  ಗೌರಿಪುರ ಹೊಸೂರು ಗ್ರಾಮಕ್ಕೆ ಭೇಟಿ ನೀಡಿ ಚುನಾವಣೆ ಮುಗಿದ ತಕ್ಷಣ  ಹಕ್ಕುಪತ್ರ ನೀಡುತ್ತೇವೆ ಎಂದು ಭರವಸೆ ನೀಡಿದ್ದಾರೆ.

 ಆದರೆ ಈ ಹಿಂದೆ ಇದೇ ರೀತಿಯಾಗಿ ಭರವಸೆ ನೀಡಿ ಹಕ್ಕುಪತ್ರವನ್ನು ನೀಡದೇ ಇರುವುದರಿಂದ ಅಧಿಕಾರಿಗಳ ಮನವಿಗೆ ಗ್ರಾಮಸ್ಥರು ನಿರಾಕರಿಸಿ ಹಕ್ಕು ಪತ್ರ ನೀಡುವವರೆಗೂ ಯಾವುದೇ ರೀತಿಯಲ್ಲಿ ಮತದಾನ ಮಾಡುವುದಿಲ್ಲ ಎಂದು ಗ್ರಾಮಸ್ಥರು ಮತದಾನ ಬಹಿಷ್ಕಾರವನ್ನು ಮುಂದುವರೆಸುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಮುಖಂಡರಾದ ಮೈಲೇಶ ವಕೀಲರು, ಸತ್ಯಮೂರ್ತಿ

ಹನುಮಂತರಾಜು, ಅಜ್ಜುಯ, ಬಸವರಾಜ್, ರವಿಕುಮಾರ್, ಬಸವರಾಜ್ . ಅಂಜಿನಪ್ಪ ಎಲ್ಲ ಗ್ರಾಮಸ್ಥರು ಇದ್ದರು.

error: Content is protected !!