ಪಕ್ಷದ ಅಭ್ಯರ್ಥಿಗಳಿಗೆ ಹಳ್ಳಿಗಳ ಪ್ರವೇಶ ನಿರ್ಬಂಧಿಸಿ

ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಕರೆ

ದಾವಣಗೆರೆ, ಏ. 11- ಬರಗಾಲದ ಕಷ್ಟ ಅರಿಯದ, ಬರ ಪರಿಹಾರ ನೀಡದ, ರಾಜಕೀಯ ಪಕ್ಷದ ಅಭ್ಯರ್ಥಿಗಳು ಚುನಾವಣಾ ಪ್ರಚಾರಕ್ಕಾಗಿ ಹಳ್ಳಿಗಳಿಗೆ ಬಂದಾಗ ಪ್ರವೇಶ ನಿರ್ಬಂಧಿಸಿ, ಎಚ್ಚರಿಕೆಯ ಸಂದೇಶ ನೀಡುವಂತೆ ರೈತರಿಗೆ ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಕರೆ ನೀಡಿದ್ದಾರೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ರಾಜಕಾರಣ ಕುಟುಂಬ ರಾಜಕೀಯವಾಗಿ ವ್ಯಾಪಾರವಾಗಿದೆ. ಮತ ನೀಡಿದ ಪ್ರಜೆಗಳು ಸಂಕಷ್ಟ ಪಡುವಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಬರದ ಸಂಕಷ್ಟ ಕಾಲದಲ್ಲಿ ಜಗಳವಾಡುತ್ತಾ ಮನರಂಜನೆ ನೀಡುತ್ತಿದ್ದಾರೆ. ಇದರಿಂದ ರೈತರ ಹೊಟ್ಟೆ ತುಂಬುವುದಿಲ್ಲ. ಈ ನಾಟಕ ಬಿಟ್ಟು ಪರಿಹಾರ ನೀಡಿ. ಇಲ್ಲವೇ ಮತ ಕೇಳಲು ಬರಬೇಡಿ ಎಂದು ಮತ ಕೇಳಲು ಬರುವ ಅಭ್ಯರ್ಥಿಗಳನ್ನು ಊರಿಂದ ಹೊರಗಿಡಿ ಎಂದು ಕರೆ ನೀಡಿದರು.   

ರೈತರು ಕೆರೆ ಕಟ್ಟೆಗಳ ಹೂಳೆತ್ತುವ ಮೂಲಕ ಪುನಶ್ಚೇತನಗೊಳಿಸುವ ಹಾಗೂ ಹೊಸದಾಗಿ ಕೆರೆಕಟ್ಟೆ ನಿರ್ಮಿಸುವ ಕೆಲಸದಲ್ಲಿ  ಶ್ರದ್ದೆ ವಹಿಸಿದರೆ ಮುಂದಿನ ತಲೆಮಾರಿಗೆ ಕೊಳವೆ ಬಾವಿಗಳಲ್ಲಿ ನೀರು ಶೇಖರಣೆಯಾಗಿ ಕೃಷಿ ಕ್ಷೇತ್ರ ಸಮೃದ್ಧಿಯಾಗಲು ಸಹಕಾರಿಯಾಗುತ್ತದೆ ಎಂದು ಸಲಹೆ ನೀಡಿದರು.

ರಾಜ್ಯಾದ್ಯಂತ 78 ಸಕ್ಕರೆ ಕಾರ್ಖಾನೆಗಳು ಸುಮಾರು 2600 ಕೋಟಿ ರೂ. ಕಬ್ಬಿನ ಬಾಕಿ ಹಣ ಪಾವತಿಸಿಲ್ಲ. ಸಂಬಂಧಿಸಿದ ಅಧಿಕಾರಿಗಳು ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಚುನಾವಣಾ ಆಯೋಗವು ನೋಟಾ ಮತದಾನಕ್ಕೆ  ಬದಲಾವಣೆ ತಂದು, ನೋಟಾ ಮತದಾನಕ್ಕೂ ಗೌರವ ತರುವಂತಹ ಮಾನದಂಡ ಜಾರಿಗೆ ತರಬೇಕು ಎಂದು ಒತ್ತಾಯಿಸಲಾಗುವುದು ಎಂದು ಶಾಂತಕುಮಾರ್ ಹೇಳಿದರು.

ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಬಲ್ಲೂರ್ ರವಿಕುಮಾರ್ ಮಾತನಾಡಿ, ಸಾಸಿವೆ ಹಳ್ಳಿ ಏತ ನೀರಾವರಿಯ 420 ಕೋಟಿ ರೂ.ಗಳ ಯೋಜನೆ ನೆನೆಗುದಿಗೆ ಬಿದ್ದಿದೆ. ಭೈರಜನಪಾದ ಏತ ನೀರಾವರಿ ಯೋಜನೆ ಬದಲು ಬ್ಯಾರೇಜ್ ನಿರ್ಮಿಸಿದರೆ 13 ಟಿಎಂಸಿ ನೀರು ನಿಲ್ಲಿಸಬಹುದಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.

ಜಿಲ್ಲೆಯಲ್ಲಿ 522 ಕೆರೆಗಳಿವೆ. ನಮ್ಮ ಒತ್ತಾಯದ ಹಿನ್ನೆಲೆಯಲ್ಲಿ 225 ಕೆರೆ ಹೂಳು ತೆಗೆದಿರುವುದಾಗಿ ಹೇಳಲಾಗುತ್ತಿದೆ. ಉಳಿದ ಕೆರೆಗಳ ಹೂಳನ್ನು ತೆಗೆದರೆ ಕೆರೆಯಲ್ಲಿ ನೀರು ತುಂಬಿ ಅಂತರ್ಜಲ ವೃದ್ದಿಯಾಗುತ್ತದೆ. ಈ ಬಗ್ಗೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದರು.

ರೈತ ಮುಖಂಡರುಗಳಾದ ಅಂಜನಪ್ಪ ಪೂಜಾರ್, ಹತ್ತಳ್ಳಿ ದೇವರಾಜ್ ಬಸವರಾಜ್, ಅಶೋಕ್, ಮಂಜುನಾಥ್ ವಕೀಲರು, ತಿರುಮಲ್ಲೇಶ್, ಕರಿಬಸಪ್ಪ, ಬಸಣ್ಣ ಇತರರು ಉಪಸ್ಥಿತರಿದ್ದರು.

error: Content is protected !!