ವಕೀಲರು ಜ್ಞಾನ ಸಾಮರ್ಥ್ಯದ ಮೇಲೆ ಹಿಡಿತ ಸಾಧಿಸಬೇಕು

ವಕೀಲರು ಜ್ಞಾನ ಸಾಮರ್ಥ್ಯದ ಮೇಲೆ ಹಿಡಿತ ಸಾಧಿಸಬೇಕು

ಹರಪನಹಳ್ಳಿ : ಕಾನೂನು ಕಾರ್ಯಾಗಾರದಲ್ಲಿ ರಾಜ್ಯ ವಕೀಲರ ಪರಿಷತ್ತಿನ ಸದಸ್ಯ ಕೋಟೇಶ್ವರರಾವ್

ಹರಪನಹಳ್ಳಿ, ಏ. 5 – ವಕೀಲರು ಜ್ಞಾನ ಸಾಮರ್ಥ್ಯದ ಮೇಲೆ ಹಿಡಿತ ಸಾಧಿಸುವ ಮೂಲಕ ತಮ್ಮ ಪರಿಣಿತಿ ಹೆಚ್ಚಿಸಿಕೊಳ್ಳಬೇಕಿದೆ ಎಂದು ರಾಜ್ಯ ವಕೀಲರ ಪರಿಷತ್ತಿನ ಸದಸ್ಯ ಕೋಟೇಶ್ವರರಾವ್ ಹೇಳಿದರು.

ಪಟ್ಟಣದ ವಕೀಲರ ಸಂಘದ ಸಭಾಂಗಣದಲ್ಲಿ ರಾಜ್ಯ ವಕೀಲರ ಪರಿಷತ್, ವಕೀಲರ ಸಂಘ ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮೂರು ದಿನಗಳ ಕಾನೂನು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ವಕೀಲರು, ನ್ಯಾಯಾಂಗ ವ್ಯವಸ್ಥೆಯ  ಪ್ರಚಲಿತ ವಿದ್ಯಮಾನವನ್ನು ಸೂಕ್ಷ್ಮವಾಗಿ
ಅವಲೋಕಿಸುವ ಜತೆಗೆ ನಿರಂತರ ಅಧ್ಯಯನದ ಮೂಲಕ ಜ್ಞಾನದ ಹಸಿವು ನೀಗಿಸಿಕೊಂಡಾಗ ಮಾತ್ರ ನ್ಯಾಯಾಂಗ ವ್ಯವಸ್ಥೆಯಲ್ಲಿ ಗುರುತಿಸಿ ಕೊಳ್ಳಲು ಸಾಧ್ಯ ಎಂದು ಹೇಳಿದರು.

ವಿಜ್ಞಾನ ಮತ್ತು ತಂತ್ರಜ್ಞಾನದ ಆವಿಷ್ಕಾರಗಳಿಂದಾಗಿ, ಜಗತ್ತು ನಾಗಾಲೋಟ ದಲ್ಲಿ ತಂತ್ರಜ್ಞಾನವನ್ನು ಒಪ್ಪಿಕೊಳ್ಳುತ್ತಿದೆ-ಅಪ್ಪಿಕೊಳ್ಳುತ್ತಿದೆ. ಆದ್ದರಿಂದ ಅಲ್ಲಿ ನಡೆಯುವ ಸೈಬರ್ ಅಪರಾಧ ಕುರಿತಂತೆಯೂ ಸಹ ಸಮರ್ಥವಾಗಿ ವಾದಿಸುವ ನಿಟ್ಟಿನಲ್ಲಿ ತಂತ್ರಜ್ಞಾನ ಆಧಾರಿತ ವ್ಯವಸ್ಥೆಗೂ ತೊಡಗಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ತಿಳಿಸಿದರು.

ನ್ಯಾಯಾಂಗ ವ್ಯವಸ್ಥೆಯ ನ್ಯಾಯ ಶಾಸ್ತ್ರದಲ್ಲಿ ಹಲವು ವೈವಿಧ್ಯಮಯ ಮಜಲುಗಳಿವೆ. ಅವು ಸಮಯ ಹಾಗೂ ಸ್ಥಳಗಳೊಂದಿಗೆ ವಿಕಸನಗೊಳ್ಳುತ್ತಲೇ ಸಾಗುತ್ತಿವೆ. 

ಜತೆಗೆ, ಸಾಮಾಜಿಕ ಬದಲಾವಣೆಗೂ ಹೊಂದಿಕೊಳ್ಳುತ್ತಿವೆ. ಆದ್ದರಿಂದ ವಕೀಲರು, ನಿರಂತರವಾಗಿ ಅಧ್ಯಯನದಲ್ಲಿ ತೊಡಗುವ ಮೂಲಕ ಕಕ್ಷಿದಾರರಿಗೆ ನ್ಯಾಯ ಒದಗಿಸುವಂತೆ  ಕಾರ್ಯೋನ್ಮುಖರಾಗಬೇಕು. ಅಂತಹ ಪ್ರಯತ್ನಕ್ಕೆ ಈ ಕಾರ್ಯಾಗಾರ ಪೂರಕವಾಗಿದೆ ಎಂದು ಆಶಿಸಿದರು.

ಸಿವಿಲ್ ಹಿರಿಯ ನ್ಯಾಯಾಧೀಶೆ ಎಂ. ಭಾರತಿ ಮಾತನಾಡಿ, ಕಾನೂನು ಕಾರ್ಯಾಗಾರಗಳಿಂದ ಜ್ಞಾನದ ಸಂಪತ್ತು ವಿಸ್ತಾರಗೊಳ್ಳಲಿದೆ. 

ಸಾಮಾಜಿಕ ವ್ಯವಸ್ಥೆೆಯಲ್ಲಿನ ವಿಭಿನ್ನ ಆಯಾಮಗಳ ಬಗ್ಗೆ ಹೆಚ್ಚಿನ ಜ್ಞಾನ ಸಂಪಾದನೆಯಿಂದ ಕಕ್ಷಿದಾರರಿಗೆ ಸೂಕ್ತ ನ್ಯಾಯ ಒದಗಿಸಬಹುದು ಎಂದು ಯುವ ವಕೀಲರಿಗೆ ಕಿವಿಮಾತು ಹೇಳಿದರು.

ಅನುಭವಿ ಹಿರಿಯ ವಕೀಲರ ಜತೆ ವಿವಿಧ ವಿಷಯ ಕುರಿತಂತೆ ಚರ್ಚೆ ನಡೆಸುವ ಮೂಲಕ ಅವರ ಅನುಭವಗಳನ್ನು ಅಭ್ಯಸಿಸಬೇಕು. ಮತ್ತು ಸಮಯ ಪ್ರಜ್ಞೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ವಕೀಲ ವೃತ್ತಿಗೆ ತನ್ನದೇ ಆದ ಘನತೆ, ಗೌರವಗಳಿದ್ದು, ಈ ವೃತ್ತಿಯಲ್ಲಿ ನಿರತರಾಗುವವರು ನಿರಂತರ ಕಲಿಕೆಯಲ್ಲಿ ತೊಡಗಿಸಿಕೊಂಡರೆ ಮಾತ್ರ ವೃತ್ತಿ ನಮ್ಮ ಕೈಹಿಡಿಯಲು ಸಾಧ್ಯ ಎಂದರು.

ವಕೀಲರ ಸಂಘದ ಅಧ್ಯಕ್ಷ ರಾಮನಗೌಡ ಪಾಟೀಲ್ ಮಾತನಾಡಿ, ಬುದ್ಧಿವಂತ ವಕೀಲರು ತಾರ್ಕಿಕ ಸಮಸ್ಯೆಗಳನ್ನೂ  ಅಂತ್ಯಗೊಳಿಸಬಲ್ಲರು. ಈ ನಿಟ್ಟಿನಲ್ಲಿ ಅಧಿಕ ಜ್ಞಾನ ಸಂಪಾದನೆ ಮಾಡುವ ಮೂಲಕ  ವಕೀಲ ವೃತ್ತಿಯನ್ನು ಶಿಖರದೆತ್ತರಕ್ಕೆ ಒಯ್ಯುವ ಕಾರ್ಯ ನಮ್ಮಿಂದಾಗಬೇಕು ಎಂದರು. 

ಇದೇ ವೇಳೆ ‘ನಿರ್ದಿಷ್ಟ ಪರಿಹಾರ ಅಧಿನಿಯಮ’ ಎಂಬ ವಿಷಯದ ಮೇಲೆ ಬಳ್ಳಾರಿ ವಕೀಲ ರಾಮಬ್ರಹ್ಮಮ್ ಮತ್ತು ಸಿವಿಲ್ ಪ್ರಕ್ರಿಯೂ ಸಂಹಿತೆ ಕುರಿತಂತೆ ಸಿ.ಎಂ. ಗುರುಬಸವರಾಜ ಉಪನ್ಯಾಸ ನೀಡಿದರು.

ಸಿವಿಲ್ ಕಿರಿಯ ನ್ಯಾಯಾಧೀಶೆ ಫಕ್ಕೀರವ್ವ ಕೆಳಗೇರಿ, ಸಹಾಯಕ ಅಭಿಯೋಜಕಿ ಮೀನಾಕ್ಷಿ, ನಿರ್ಮಲ, ವಕೀಲರ ಸಂಘದ ಉಪಾಧ್ಯಕ್ಷ ಸಿ. ಪೀರ್ ಅಹಮ್ಮದ್, ಕಾರ್ಯದರ್ಶಿ ಜಿ.ಎಸ್.ಎಂ. ಕೊಟ್ರಯ್ಯ, ಹಿರಿಯ ವಕೀಲರಾದ ಬಿ. ಕೃಷ್ಣ ಮೂರ್ತಿ, ಕೆ. ಜಗದಪ್ಪ, ಪಿ. ಜಗದೀಶಗೌಡ, ಎಸ್.ಎಂ. ರುದ್ರಮುನಿಸ್ವಾಮಿ, ಆರುಂಡಿ ನಾಗರಾಜ, ವಕೀಲರಾದ ಜೆ. ಸೀಮಾ, ಕೆ. ದಾಕ್ಷಾಯಣಿ, ಮೃತ್ಯುಂಜಯ, ಕೆಂಗಳ್ಳಿ ಪ್ರಕಾಶ್, ಕಮ್ಮತ್ತಹಳ್ಳಿ ವಾಮದೇವ ಮತ್ತು  ಇತರರು ಇದ್ದರು.

error: Content is protected !!