ಈ ಬಾರಿ ಶೇ.85ಕ್ಕಿಂತ ಹೆಚ್ಚು ದಾಖಲೆ ಮತದಾನ ಆಗಬೇಕು

ಈ ಬಾರಿ ಶೇ.85ಕ್ಕಿಂತ ಹೆಚ್ಚು ದಾಖಲೆ ಮತದಾನ ಆಗಬೇಕು

ಜಿಲ್ಲಾ ಸ್ವೀಪ್ ಸಮಿತಿ ಕೋರ್ ಕಮಿಟಿ ಸಭೆಯಲ್ಲಿ ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್.ವಸ್ತ್ರದ್ ಕರೆ

ದಾವಣಗೆರೆ, ಮಾ.27- ಪ್ರಸ್ತುತ 18ನೇ ಲೋಕಸಭಾ ಚುನಾವಣೆಯಲ್ಲಿ ಶೇ 85ಕ್ಕಿಂತಲೂ ಹೆಚ್ಚಿನ ಮತದಾನವಾಗುವಂತೆ  ಮಾಡಿ, ಹೊಸ ದಾಖಲೆ ನಿರ್ಮಿಸುವಂತೆ ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್.ವಸ್ತ್ರದ್ ತಿಳಿಸಿದರು.

ಬುಧವಾರ ಜಿಲ್ಲಾ ಪಂಚಾಯತ್ ಸಭಾಂಗಣ ದಲ್ಲಿ  ಜರುಗಿದ ಜಿಲ್ಲಾ ಸ್ವೀಪ್ ಸಮಿತಿ ಕೋರ್ ಕಮಿಟಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ದಾವಣಗೆರೆ ಕ್ಷೇತ್ರದಲ್ಲಿ 2019ರ ಲೋಕಸಭಾ ಚುನಾವಣೆಯಲ್ಲಿ ಶೇ. 72.96 ರಷ್ಟು ಮತದಾನವಾಗಿತ್ತು. ಕಳೆದ ಚುನಾವಣೆಯಲ್ಲಿ ಯಾವ ಮತಗಟ್ಟೆಯಲ್ಲಿ ಕಡಿಮೆ ಮತದಾನವಾಗಿದೆ, ಅಂತಹ ಪ್ರದೇಶದಲ್ಲಿ ಹೆಚ್ಚಿನ ಮತದಾರರ ಜಾಗೃತಿ ಕಾರ್ಯಕ್ರಮದ ಜೊತೆಗೆ ಅವರಿಗಾಗಿರುವ ಅನಾನುಕೂಲಗಳ ಬಗ್ಗೆಯೂ ಪರಿಶೀಲನೆ ನಡೆಸಿ ಕಡಿಮೆ ಮತದಾನವಾಗಲು ಯಾವ ಯಾವ ಅಂಶಗಳು ಕಾರಣವಾಗಿವೆ ಎಂಬುದನ್ನು ಮನಗಂಡು, ಇದಕ್ಕೆ ಪರಿಹಾರೋಪಾಯಗಳನ್ನು ಕಂಡುಕೊಂಡು, ಈ ವರ್ಷ ಮತದಾನದ ಹೆಚ್ಚಳಕ್ಕೆ ಮುಂದಾಗಬೇಕಾಗಿದೆ ಎಂದರು.

ಗ್ರಾಮಾಂತರ ಪ್ರದೇಶದಲ್ಲಿ ಮತದಾನ ಹೆಚ್ಚಿರುತ್ತದೆ, ಆದರೆ ನಗರ, ಪಟ್ಟಣ ಪ್ರದೇಶದ ಕೆಲವು ಪ್ರದೇಶಗಳು ಅಂದರೆ ಶಿಕ್ಷಣವಂತರೇ ಮತದಾನದಿಂದ ದೂರ ಇರುತ್ತಾರೆ.  ಆದ್ದರಿಂದ ಪ್ರತಿಯೊಬ್ಬರ ಮತವು ಬಹಳ ಪ್ರಾಮುಖ್ಯವಾ ಗಿದ್ದು, ಎಲ್ಲರೂ ಚುನಾವಣಾ ಹಬ್ಬದಲ್ಲಿ ಭಾಗವ ಹಿಸುವಂತೆ ಪ್ರೇರಪಿಸಬೇಕಾಗಿದೆ ಎಂದರು.

ಮತಗಟ್ಟೆಗೆ ಜನರು ಖುಷಿಯಿಂದ ಬಂದು ಮತದಾನ ಮಾಡುವಂತಹ ವಾತಾವರಣ ಕಲ್ಪಿಸಬೇಕು. ಮತಗಟ್ಟೆಗಳಲ್ಲಿ ಜನರಿಗೆ ಕನಿಷ್ಠ ಸೌಲಭ್ಯಗಳು ಇರುವಂತೆ, ನೋಡಿಕೊಳ್ಳಬೇಕು ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ ಹಲವು ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ವಿಶೇಷವಾಗಿ ಮೂರು ತಲೆಮಾರಿನ ಮತದಾರರಿಂದ ಮತದಾನ, ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ ಸೇರಿದಂತೆ ಮತದಾರರ ಜಾಗೃತಿಗೆ ವಿನೂತನ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ ಎಂದು ಉಪನಿರ್ದೇಶಕರು ಮಾಹಿತಿ ನೀಡಿದರು.   

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷ  ಸುರೇಶ್ ಬಿ.ಇಟ್ನಾಳ್ ಮಾತನಾಡಿ 2023 ರಲ್ಲಿ ಜರುಗಿದ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಪ್ರಮಾಣ ಗಣನೀಯವಾಗಿ ಹೆಚ್ಚಳವಾಗಿದೆ. ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಶೇ 85ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡಲು ಅಗತ್ಯವಿರುವ ಎಲ್ಲಾ ಜಾಗೃತಿ ಕಾರ್ಯಕ್ರಮ ರೂಪಿಸಲಾಗಿದೆ. 36 ಸಾವಿರಕ್ಕಿಂತ ಹೆಚ್ಚು ಹೊಸ ಮತದಾರರನ್ನು ನೋಂದಣಿ ಮಾಡಿಸಲಾಗಿದೆ ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕೃಷ್ಣನಾಯ್ಕ, ಮುಖ್ಯ ಯೋಜನಾಧಿಕಾರಿ ಮಲ್ಲಾನಾಯ್ಕ್, ಪಾಲಿಕೆ ಆಯುಕ್ತರಾದ ರೇಣುಕಾ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಮಹಂತೇಶ್ ಹಾಗೂ ಸಮಿತಿ ಸದಸ್ಯರಾದ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!