ಜನ ಸಾಮಾನ್ಯರ ಧ್ವನಿಯೇ ಜಾನಪದ ಸಂಪತ್ತು : ರಂಭಾಪುರಿ ಶ್ರೀಗಳು

ಜನ ಸಾಮಾನ್ಯರ ಧ್ವನಿಯೇ ಜಾನಪದ ಸಂಪತ್ತು : ರಂಭಾಪುರಿ ಶ್ರೀಗಳು

ರಂಭಾಪುರಿ ಪೀಠ (ಬಾಳೆಹೊನ್ನೂರು) – ಮಾ. 26 – ನೀರು, ಅನ್ನ ಮತ್ತು ಒಳ್ಳೆಯವರ ಮಾತು ಜೀವನ ಉನ್ನತಿಗೆ ಅವಶ್ಯಕ. ಭೌತಿಕ ಆಸ್ತಿ ಸಿರಿ ಸಂಪತ್ತು ನಾಶವಾಗಿ ಹೋಗಬಹುದು. ಗ್ರಾಮೀಣ ಜನರ ಬಾಯಿಂದ ಬಂದ ಸಾಹಿತ್ಯವೇ ನಿಜವಾದ ಜಾನಪದ ಸಾಹಿತ್ಯ. ಇವುಗಳಲ್ಲಿರುವ ಅಧ್ಯಾತ್ಮ ಚಿಂತನೆಗಳು ಜೀವನ ಶ್ರೇಯಸ್ಸಿಗೆ ಅಡಿಪಾಯವಾಗಿವೆ ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಶ್ರೀ ರಂಭಾಪುರಿ ಪೀಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ವೀರಭದ್ರಸ್ವಾಮಿ ಮಹಾರಥೋತ್ಸವದ ಅಂಗವಾಗಿ ನಿನ್ನೆ ಜರುಗಿದ ಜಾನಪದ ಹಬ್ಬದ ಸಾನ್ನಿಧ್ಯ ವಹಿಸಿ, ಶ್ರೀಗಳು ಆಶೀರ್ವಚನ ನೀಡಿದರು.

ಮಾನವನ ಬದುಕು ದೀಪದಂತೆ ಪರಿಶುದ್ಧವಾಗಬೇಕು. ಬೆಳಕು ಎಲ್ಲಿ ಬಿದ್ದರೂ ಮಲಿನವಾಗುವುದಿಲ್ಲ. ಈ ದೇಹ ಶಿವನಿರುವ ಶಿವಾಲಯ. ಸೂರ್ಯ, ಚಂದ್ರರ ಬೆಳಕು ಬೆಳೆಯುವ ಭೂಮಿ, ಮಳೆ ಸುರಿಸುವ ಮೋಡ, ಬೀಸುವ ಗಾಳಿ ಯಾವಾಗಲೂ ತಮ್ಮ ಕಾರ್ಯವನ್ನು ಮಾಡುತ್ತಲೇ ಬಂದಿವೆ. ಆದರೆ ನಾ ಮಾಡಿದೆ ಎಂದು ಎಲ್ಲಿಯೂ ಹೇಳಿಲ್ಲ. ಆದರೆ ಮನುಷ್ಯ ಮಾತ್ರ ಎಲ್ಲೆಡೆಯೂ ತನ್ನ ಹೆಸರು ಇರಬೇಕೆಂದು ಬಯಸುತ್ತಾನೆ. ದುರಾಸೆಯಿಂದ ದೂರವಾದಾಗ ಮಾತ್ರ ಈ ದೇಹ ದೇವಾಲಯವಾಗಲು ಸಾಧ್ಯ. ನೋವು-ನಲಿವು, ಪಾಪ-ಪುಣ್ಯ, ಸುಖ-ದು:ಖ ಯಾರನ್ನೂ ಬಿಟ್ಟಿಲ್ಲ. ಕರಡಿಯನ್ನು ಕಂಬಳಿಯೆಂದು ಹಿಡಿಯಲು ಹೋದರೆ ಆಘಾತ ತಪ್ಪಿದ್ದಲ್ಲ. ಸಂಸಾರವೆಂಬ ಕರಡಿಯನ್ನು ಕೊರಳಿಗೆ ಹಾಕಿಕೊಂಡು ಪಾರಾಗುವುದಕ್ಕೆ ಪ್ರಾರ್ಥನೆಯೊಂದೇ ದಾರಿ. ಬಹಿರಂಗದ ಭೌತಿಕ ಸಂಪತ್ತು ಒಂದಲ್ಲಾ ಒಂದು ದಿನ ಮನುಷ್ಯನ ಕೈಬಿಟ್ಟು ಹೋಗು ತ್ತದೆ. ಮನುಷ್ಯ ಜಾಗೃತನಾಗಿ ಸತ್ಕಾರ್ಯ ಮಾಡಿ ಧರ್ಮವನ್ನು ಸಂಪಾದಿಸಬೇಕು. 

ಸಮಾರಂಭವನ್ನು ಉದ್ಘಾಟಿಸಿದ ಜಾನಪದ ತಜ್ಞ ಡಾ. ರಾಮು ಮೂಲಗಿ ಮಾತನಾಡಿ, ಜಾನಪದ ಸಾಹಿತ್ಯ ವಿದ್ವಾಂಸರಿಂದ ಬಂದುದಲ್ಲ. ಹಳ್ಳಿಯ ಪರಿಸರದಲ್ಲಿ ಬೆಳೆದು, ಸಾಮಾನ್ಯರಿಂದ ಹೊರ ಬಂದುದು ಜಾನಪದ ಸಂಪತ್ತು. ಅದನ್ನು ಬೆಳೆಸುವ ಕಾರ್ಯ ಎಲ್ಲರೂ ಮಾಡಬೇಕಾಗಿದೆ ಎಂದ ಅವರು ಹಲವಾರು ಜಾನಪದ ಗೀತೆಗಳನ್ನು ಪ್ರಸ್ತುತ ಪಡಿಸಿದರು. 

ತರೀಕೆರೆ ಶಾಸಕ ಡಿ.ಹೆಚ್.ಶ್ರೀನಿವಾಸ ಮಾತನಾಡಿದರು.

ನೇತೃತ್ವ ವಹಿಸಿದ್ದ ಮುಕ್ತಿಮಂದಿರ ಕ್ಷೇತ್ರದ ಶ್ರೀ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು ಆದರ್ಶಗಳನ್ನು ಮರೆತರೆ ಜೀವನ ಬರಡು. ಹಿರಿಯರ ಆದರ್ಶ ಚಿಂತನಗಳ ನುಡಿ ಜೀವನೋತ್ಸಾಹಕ್ಕೆ ಕಾರಣವಾಗಿವೆ ಎಂದರು. 

ಶಿರಕೋಳ ಹಿರೇಮಠದ ಗುರುಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು ಪ್ರಾಸ್ತಾವಿಕವಾಗಿ ಮಾತನಾಡಿದರು. 

ಲಿಂಗಸುಗೂರು ಶ್ರೀ ಮಾಣಿಕ್ಯೇಶ್ವರಿ ಆಶ್ರಮದ ಮಾತಾ ನಂದಿಕೇಶ್ವರಿ ಅಮ್ಮನವರು, ವಾಣಿ ಶ್ರೀನಿವಾಸ ಮುಖ್ಯ ಅತಿಥಿಗಳಾಗಿದ್ದರು.  

ಹರ್ಲಾಪುರದ ಸಾಂಬಯ್ಯ ಹಿರೇಮಠ ಇವರು ಜೀವನದಲ್ಲಿ ಹಾಸ್ಯ ಹೇಗೆ ಹಾಸು ಹೊಕ್ಕಾಗಿದೆ ಎಂಬುದನ್ನು ಹಾಸ್ಯ ಪ್ರಸಂಗಗ ಳೊಂದಿಗೆ ವಿವರಿಸಿದರು. ಚಿಕ್ಕಮಗಳೂರಿನ  ನಿವೃತ್ತ ಶಿಕ್ಷಕ ಆರ್.ಷಡಕ್ಷರಿ ಸ್ವಾಗತಿಸಿದರು. ಹುಬ್ಬಳ್ಳಿಯ ಶಿವಸ್ವಾಮಿ ಹಿರೇಮಠ ಇವರಿಂದ ಭಕ್ತಿ ಗೀತೆ ಜರುಗಿತು. ಹುಬ್ಬಳ್ಳಿಯ ಜಿ.ವಿ.ಹಿರೇಮಠ ಮೈಸೂರಿನ ಸಿ.ಹೆಚ್. ರೇಣುಕಾ ಪ್ರಸಾದ್ ನಿರೂಪಿಸಿದರು.

error: Content is protected !!