ಪಠ್ಯಪುಸ್ತಕಗಳಿಗೆ ಸೀಮಿತರಾಗದೆ, ಸಾಮಾಜಿಕ ಕಾಳಜಿಯ ಜಾಗೃತಿ ಕಡೆಗೆ ಗಮನ ಹರಿಸಬೇಕು

ಪಠ್ಯಪುಸ್ತಕಗಳಿಗೆ ಸೀಮಿತರಾಗದೆ, ಸಾಮಾಜಿಕ ಕಾಳಜಿಯ ಜಾಗೃತಿ ಕಡೆಗೆ ಗಮನ ಹರಿಸಬೇಕು

ಮತದಾನ ಜಾಗೃತಿ ಕವಿಗೋಷ್ಠಿ ಸಮಾರಂಭದಲ್ಲಿ ಹಿರಿಯ ಸಾಹಿತಿ ಶ್ರೀಮತಿ ಎ.ಸಿ. ಶಶಿಕಲಾ ಶಂಕರಮೂರ್ತಿ

ದಾವಣಗೆರೆ, ಮಾ. 27 – ಯುವಕ, ಯುವತಿಯರು ಕಾಲೇಜುಗಳಲ್ಲಿ ಕೇವಲ ಪಠ್ಯಪುಸ್ತಕ, ಅಂಕಪಟ್ಟಿ ಪದವಿಗಳಿಗೆ ಸೀಮಿತವಾಗದೆ ಸಾಮಾಜಿಕ ಕಾಳಜಿಯೊಂದಿಗೆ ಮುಂದಿನ ನಮ್ಮ ದೇಶವನ್ನು ಆಳುವ ಸೂಕ್ತ ವ್ಯಕ್ತಿಗಳನ್ನು ಆಯ್ಕೆ ಮಾಡುವ ಹಂತದಲ್ಲಿ ಜಾಗೃತಿ ಯೊಂದಿಗೆ ಮತದಾನ ಮಾಡುವುದರ ಜೊತೆಗೆ ಜವಾಬ್ದಾರಿ ಮತ್ತು ಬದ್ಧತೆಯಿಂದ ನಮ್ಮ ದೇಶದ ಅಭಿವೃದ್ಧಿಯ ಕಡೆಗೆ ಗಮನ ಹರಿಸಬೇಕು  ಎಂದು ಹಿರಿಯ ಸಾಹಿತಿ ಶ್ರೀಮತಿ ಎ.ಸಿ. ಶಶಿಕಲಾ ಶಂಕರಮೂರ್ತಿ ಕಿವಿಮಾತು ಹೇಳಿದರು.

ನಗರದ ಕಲಾ ಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ಕಲಾ ಕುಂಚ ಕಚೇರಿ ಸಭಾಂಗಣದಲ್ಲಿ ಕಳೆದ ವಾರ ನಡೆದ ಮತದಾನ ಜಾಗೃತಿ ಕವಿಗೋಷ್ಠಿ ಸಮಾರಂಭವನ್ನು ತುಳಸಿ ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. 

ನಮ್ಮ ದೇಶದ ಈ ಲೋಕಸಭಾ ಚುನಾವಣೆ ಐದು ವರ್ಷಕ್ಕೊಮ್ಮೆ ಉತ್ತಮ ಆಡಳಿತಕ್ಕೆ ಪರಿವ ರ್ತನೆಗೆ ಯಾವುದೇ ಜಾತಿ ಮತದ ಭೇದಭಾವ ಇಲ್ಲದೇ ನಾಗರಿಕರು ಸಾಮಾಜಿಕ ಕಾಳಜಿಯೊಂ ದಿಗೆ ಮತ ಚಲಾಯಿಸುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಅವರು ಹೇಳಿದರು.

ಮುಖ್ಯ ಅತಿಥಿಯಾಗಿ ಚಿತ್ರದುರ್ಗದ ಸುದ್ದಿ ಗಿಡುಗ ಸಂಪಾದಕ ಶ.ಮಂಜುನಾಥ್ ಮಾತನಾಡಿ,  ಕೆಲವು ರಾಜಕೀಯ ಪಕ್ಷಗಳು ಕೇವಲ ಪ್ರಚಾರಕ್ಕೋಸ್ಕರ ಓಟಿಗಾಗಿ ಅಧಿಕಾರಕ್ಕಾಗಿ ತೊಡಗಿಸಿಕೊಂಡು ಸಮಾಜದ ಸಂಸ್ಕಾರ, ಸಂಸ್ಕೃತಿ, ಸಾಮಾಜಿಕ ಕಾಳಜಿಗಳು ಮರೆಯಾಗುತ್ತಿರುವುದು ವಿಷಾದನೀಯ ಎಂದರು. ಹಾವೇರಿ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಹಿರಿಯ ಕವಿ ಕವಯತ್ರಿಯರು ಮತದಾನ ಜಾಗೃತಿ ಕುರಿತು ಒಳ್ಳೊಳ್ಳೆ ಸಂದೇಶಗಳನ್ನು ಅಕ್ಷರ ಜ್ಞಾನದೊಂದಿಗೆ ಅರ್ಥಪೂರ್ಣವಾಗಿ ಕವನ ವಾಚನ ಮಾಡಿದರು. 

ರಾಣೇಬೆನ್ನೂರಿನ ಹಿರಿಯ ಕವಿ ಪರಮೇಶ್ವರಯ್ಯ ವೀರಭದ್ರಯ್ಯ ಮಠದ, ಕಲಾಕುಂಚದ ಅಧ್ಯಕ್ಷ ಕೆ.ಎಚ್.ಮಂಜುನಾಥ್ ಶ್ರೀಮತಿ ಹೇಮಾ ಶಾಂತಪ್ಪ ಪೂಜಾರಿ ಮತದಾನದ ಕುರಿತು ಸಾರ್ವಜನಿಕರು ನಿರ್ಲಕ್ಷ್ಯ ಮಾಡದೇ ಉದಾಸೀನತೆ ಬಿಟ್ಟು ಕಡ್ಡಾಯವಾಗಿ ಮತ ಚಲಾಯಿಸಬೇಕು. ಇದು ನಮ್ಮ ನಿಮ್ಮೆಲ್ಲರ ಆಜನ್ಮ ಹಕ್ಕು ಎಂದರು. 

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸಂಸ್ಥಾಪಕ ಸಾಲಿಗ್ರಾಮ ಗಣೇಶ್‍ ಶೆಣೈ ಮಾತನಾಡಿ, ಚುನಾವಣಾ ಆಯೋಗದವರು ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಬೇಕಾದ ಅವಶ್ಯಕತೆ ಇದೆ. ಮುಖ್ಯವಾಗಿ ಕೆಲವು ಮತದಾರರು ನಿರ್ಲಕ್ಷದಿಂದ ಉದಾಸೀನತೆಯಿಂದ ಮತ ಚಲಾಯಿಸದೇ ಮದ್ಯಪಾನದೊಂದಿಗೆ ಮತದಾನದಿಂದ ದೂರ ಸೇರುತ್ತಾರೆ ಅಂತವರಿಗೆ ಆಧಾರ್ ಕಾರ್ಡ್, ಪಾನ್ ಕಾರ್ಡ್, ರೇಷನ್ ಕಾರ್ಡ್, ಹಿರಿಯ ನಾಗರಿಕರ ಕಾರ್ಡ್ ರದ್ದು ಮಾಡುವ ಕಾನೂನು ತಂದರೆ ಕೆಲವು ಮತದಾರರು ಜಾಗೃತರಾಗುತ್ತಾರೆ ಎಂದು ಅಭಿಪ್ರಾಯಪಟ್ಟರು. 

ಕು. ಅಪೇಕ್ಷ, ಅನುಷಾ ಅವರ ಪ್ರಾರ್ಥನೆ ಯೊಂದಿಗೆ ಪ್ರಾರಂಭವಾದ ಸಮಾರಂಭಕ್ಕೆ ಶ್ರೀಮತಿ ಪುಷ್ಪ ಮಂಜುನಾಥ್ ಸ್ವಾಗತಿಸಿದರು. ಶ್ರೀಮತಿ ಶೈಲಾ ವಿನೋದ ದೇವರಾಜ್‌ ಕವನ ವಾಚನ ಮಾಡಿ ಕಾರ್ಯಕ್ರಮ ನಿರೂಪಿಸಿದರು. ಕಲಾಕುಂಚ ಸಿದ್ದವೀರಪ್ಪ ಬಡಾವಣೆ ಶಾಖೆಯ ಅಧ್ಯಕ್ಷರಾದ ಶ್ರೀಮತಿ ಲಲಿತ ಕಲ್ಲೇಶ್, ಕಚೇರಿ ಕಾರ್ಯದರ್ಶಿ ಎಂ.ಎಸ್. ಪ್ರಸಾದ್ ಉಪಸ್ಥಿತರಿದ್ದರು. 

ಸಂಸ್ಥೆಯ ಸಹ ಕಾರ್ಯದರ್ಶಿ ಕೆ.ಸಿ. ಉಮೇಶ್ ವಂದಿಸಿದರು.

error: Content is protected !!