ದಿವ್ಯದೃಷ್ಟಿಗೆ ಪಾಂಡುರಂಗ ವಿಠ್ಠಲನ ವಿಗ್ರಹದಲ್ಲಿ ಗೋಚರಿಸಿದ ವಿಸ್ಮಯಕಾರಿ ಕೌತುಕಗಳು

ದಿವ್ಯದೃಷ್ಟಿಗೆ ಪಾಂಡುರಂಗ ವಿಠ್ಠಲನ ವಿಗ್ರಹದಲ್ಲಿ ಗೋಚರಿಸಿದ ವಿಸ್ಮಯಕಾರಿ ಕೌತುಕಗಳು

ದಿವ್ಯದೃಷ್ಟಿಗೆ ಪಾಂಡುರಂಗ ವಿಠ್ಠಲನ ವಿಗ್ರಹದಲ್ಲಿ ಗೋಚರಿಸಿದ ವಿಸ್ಮಯಕಾರಿ ಕೌತುಕಗಳು - Janathavani

ಕಳೆದ ಸಂಚಿಕೆಯಲ್ಲಿ ಶ್ರೀ ಪಾಂಡುರಂಗ ಮೂರ್ತಿಯ ನಿರ್ಮಾಣ, ಅಂತರದಲ್ಲಿ ನಿಂತ ಮೂರ್ತಿ, ಎರಡು ಕೈಗಳ ಶಂಕ ಕಮಲದ ಮೊಗ್ಗು, ಪಾಂಡುರಂಗನ ಪತ್ನಿಯರು, ಬುಕ್ಕಾ ಹಚ್ಚುವಿಕೆ ಬಗ್ಗೆ ತಿಳಿಸಿದ್ದೆವು. ಈಗ

ವಿಶಾಲವಾದ ಬಾಲ ಪ್ರದೇಶ (ಹಣೆ) : ಈ ಪ್ರದೇಶವು ಅಜ್ಞಾಚಕ್ರದಿಂದ ತೇಜಸ್ಸನ್ನು ಹರಡಿ ಅದು ಶಿವನ ಸ್ವರೂಪವಾಗಿದೆ. 

ಕೊರಳಲ್ಲಿನ ಕೌಸ್ತುಭಮಣಿ : ಇದು ಕ್ರಿಯೆಯ ಸ್ತರದಲ್ಲಿ ಪಿಂಡದ ಆಸೆ, ಆಕಾಂಕ್ಷೆಗಳನ್ನು ಪೂರ್ತಿ ಮಾಡುವುದಾಗಿದೆ. ಈ ಮಣಿಯಲ್ಲಿ ವಿದ್ಯಾದಾಯಿನಿ ಶ್ರೀ ಸರಸ್ವತಿಯ ವಾಸವಿದೆ. ಶ್ರೀ ವಿಠ್ಠಲನ ಕಿವಿಯಲ್ಲಿರುವ ಮೀನಿನಾಕಾರದ ಕುಂಡಲದಲ್ಲಿನ ಭಾಗದಲ್ಲಿ ವಾಯುಪುತ್ರ ಹನುಮಂತನ ಸೂಕ್ಷ್ಮವಾಸವಿದೆ.

ಮಸ್ತಕದ ಮೇಲಿರುವ ಶಿವಲಿಂಗ : ಇದು ಸ್ವಯಂ ಬ್ರಹ್ಮ ಸ್ವರೂಪ ಶಿವ ತತ್ವದ ಅದ್ವೈತದ ಅನುಭೂತಿಯನ್ನು ನೀಡುವ ನಿರ್ಗುಣ ತತ್ವಕ್ಕೆ ಸಂಬಂಧಿಸಿದೆ.

ಶ್ರೀ ವಿಠ್ಠಲನ ಕಾಲುಗಳಲ್ಲಿನ ಕೋಲು : ಶ್ರೀ ಕೃಷ್ಣ ಸ್ವರೂಪ ಪೂರ್ಣಸ್ವರೂಪಿ ಕಾರ್ಯದ ಪ್ರತೀಕವಾಗಿದೆ. ಶಕ್ತಿಯ ಸ್ತರದಲ್ಲಿ ಬ್ರಹ್ಮಾಂಡದ ಸಮತೋಲನವನ್ನು ಸಪ್ತಲೋಕ, ಸಪ್ತಪಾತಾಳಗಳ ಬೆನ್ನೆಲುಬಾಗಿ ಮಾರಕ ತತ್ವದ ಸಹಾಯದಿಂದ ಪಾತಾಳದ ತ್ರಾಸದಾಯಕ ಸ್ಪಂದನಗಳನ್ನು ನಿಯಂತ್ರಿಸುತ್ತದೆ.

ಎದೆಯ ಮೇಲಿರುವ ಶ್ರೀ ವತ್ಸಲಾಂಛನ ಚಿಹ್ನೆ : ಈ ಚಿಹ್ನೆ ಅನಾಹತ ಚಕ್ರಕ್ಕೆ ಸಂಬಂಧಿಸಿದ ಭಾವ, ಇಂಧನಾತ್ಮಕ ನೀಲಿ ಲಹರಿಗಳನ್ನು ಬ್ರಹ್ಮಾಂಡದಲ್ಲಿ ಹರಡಿ ಈ ಮೂರ್ತಿಯ ಸಾನ್ನಿಧ್ಯದಲ್ಲಿ ಬಂದ ನಂತರ ಈ ಲಹರಿಗಳ ಸಹಾಯದಿಂದ ಪ್ರತಿಯೊಬ್ಬ ಭಕ್ತನ ಭಾವ ಜಾಗೃತವಾಗುತ್ತದೆ. ಶ್ರೀ ವಿಠ್ಠಲನ ಸೊಂಟದ ಕೆಳಗಿನ ಭಾಗವು ಬ್ರಹ್ಮಸ್ವರೂಪ. ಸೊಂಟದ ಮೇಲಿನಿಂದ ಕುತ್ತಿಗೆವರೆಗೆ ಶ್ರೀ ವಿಷ್ಣುಸ್ವರೂಪ ಮಸ್ತಕದ ಭಾಗವು ಶಿವಸ್ವರೂಪವಾಗಿದೆ.

ಶ್ರೀ ವಿಷ್ಣು ಲೋಕವನ್ನು ಶೂನ್ಯ ಮಾರ್ಗದಿಂದ ತಲುಪಿಸುವ ಮೂರ್ತಿ : ಈ ಮೂರ್ತಿಯು ಸ್ಥಿತಿವಾಚಕ, ಇಚ್ಚೆ, ಕ್ರಿಯೆ, ಜ್ಞಾನ ಇವುಗಳ ಸ್ತರದಲ್ಲಿ ತಲುಪಿಸುವ ದೈವೀ ಮೂರ್ತಿ ಎನ್ನುತ್ತಾರೆ. ಶ್ರೀ ವಿಠ್ಠಲ ಮೂರ್ತಿಯ ಬಾಹ್ಯ ಮಂಡಲದಲ್ಲಿ ಅನೇಕ ದೈವಿ ಮಂಡಲಗಳ ವಾಸವಿದ್ದು ನವಗ್ರಹ ಮಂಡಲ, ತಾರಾ ಮಂಡಲ, ನಕ್ಷತ್ರ ಮಂಡಲ, ಮಾತೃಕೆ ಸುಪ್ತರೂಪದಲ್ಲಿ ಇರುವುದರಿಂದ ಏನು ಬೇಡಿದರೂ ಈ ಮೂರ್ತಿಯ ಮುಂಭಾಗದ ಎಡ ಬಲ ಭಾಗದಲ್ಲಿ ಸಗುಣ-ನಿರ್ಗುಣ ತಾರಕ, ಮಾರಕ, ಆಕರ್ಷಣ ಶಕ್ತಿಯ ವಾಸವಿದ್ದು, ಮೂರ್ತಿಯ ಹಿಂಭಾಗದಲ್ಲಿ ಜ್ಞಾನರೂಪಿ ಆಕರ್ಷಣ ಶಕ್ತಿಯ ವಾಸವಿದೆ.

ಮೂರ್ತಿಯ ಅಂತರಂಗದ ವೈಶಿಷ್ಟ್ಯಗಳು : ಮೂರ್ತಿಯ ಒಳಗೆ ಟೊಳ್ಳಿದ್ದು ಅದರಲ್ಲಿ ಅನಂತ ಬ್ರಹ್ಮಾಂಡಗಳು ಬಿಳಿ ಅಪ್ರಕಟ ಪ್ರಕಾಶ ರೂಪದಲ್ಲಿ ಸಮಾವೇಶಗೊಂಡಿವೆ. ದಿವ್ಯ ದೃಷ್ಟಿಯಿಂದ ನೋಡಿದರೆ ಸಂಪೂರ್ಣ ಬಿಳಿ ಬಣ್ಣವಾಗಿ ಕಾಣಿಸುತ್ತದೆ. ಈ ಮೂರ್ತಿಯ ಮಾಯಾರೂಪಿ, ನಿವೃತ್ತ ರೂಪಿ, ಶೂನ್ಯಮಾರ್ಗವಿದೆ. ಟೊಳ್ಳಿನಲ್ಲಿ ಅದರ ನೇರ ಮಧ್ಯರೇಖೆಯಲ್ಲಿ ಎರಡು ಮಾರ್ಗಗಳಿದ್ದು, ಒಂದು ಮಾಯಾಮಾರ್ಗ, ಇನ್ನೊಂದು ಶೂನ್ಯ ಮಾರ್ಗವಿದೆ. ಆದ್ದರಿಂದ ಸಾಕ್ಷಿ ಭಾವನಾತ್ಮಕ ಮೂರ್ತಿ ಎಂದು ಕರೆಯುತ್ತಾರೆ.

ಶ್ರೀ ವಿಠ್ಠಲ ಮೂರ್ತಿಯು ದೈವೀ ಪ್ರೀತಿಯು ಅಗಾಧ ಸಾಗರವಾಗಿರುವುದರಿಂದ ಅದು ಇಂದಿನವರೆಗೆ ಅನೇಕ ಸಂತರ ಅಪಾರ ಭಕ್ತಿಗೆ ತನ್ನ ಹೃದಯದಲ್ಲಿ ಸ್ಥಾನವನ್ನು ನೀಡಿದೆ. ಆದ್ದರಿಂದ ಸಂತರು, ಭಕ್ತರು ಬಹಳಷ್ಟು ಪ್ರೀತಿಸುತ್ತಾರೆ. ಆದ್ದರಿಂದ ಶ್ರೀ ವಿಠ್ಠಲನಿಗೆ ಭಕ್ತಿಯ ಹಸಿವು ತುಂಬಾ ಇದೆ ಎಂದು ಹೇಳುತ್ತಾರೆ. ಆದ್ದರಿಂದ ಎಷ್ಟೋ ಯುಗಗಳಿಂದ ಭಕ್ತರನ್ನು ತನ್ನೆಡೆಗೆ ಆಕರ್ಷಿಸಿ ಅವರ ಕಣ್ಣುಗಳಲ್ಲಿ ಭಕ್ತಿಭಾವದ ಅಶ್ರುಗಳನ್ನು ತರುವಂತಹದ್ದಾಗಿದೆ. ಈ ಮೂರ್ತಿಯಲ್ಲಿ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ಈ ಎಲ್ಲಾ ದೇವತೆಗಳ ತತ್ವಗಳು ಒಟ್ಟುಗೂಡಿವೆ.

ಪಂಡರೀಪುರದ ಪುಣ್ಯಭೂಮಿಯ ವಾತಾವರಣದಲ್ಲಿ ಶ್ರೀ ಸಂತ ತುಕಾರಾಮರ, ಶ್ರೀ ಸಂತ ನಾಮದೇವರ, ಶ್ರೀ ಸಂತ ಏಕನಾಥರ ಇನ್ನೂ ಅನೇಕ ಸಂತರ ಅಭಂಗಗಳು ತುಂಬಿಕೊಂಡು ಭಕ್ತಿಭಾವ ಜಾಗೃತಗೊಳಿಸಲು ಸಹಾಯವಾಗಿ ಅದರ ಸುವಾಸನೆ ಅಷ್ಟಗಂಧದ ಪರಿಮಳ ಹರಡಿದೆ.

ಪಂಡರೀಪುರ ಒಂದು ತೀರ್ಥಕ್ಷೇತ್ರ ಹೇಗೆ? : ಎಲ್ಲಿ ಅಧೋ ಮಂಡಲ, ಮಧ್ಯಮಂಡಲ ಮತ್ತು ಊರ್ಧ್ವ ವಾಯುಮಂಡಲವು ಚೈತನ್ಯದಿಂದ ವ್ಯಾಪಿಸಿರುತ್ತದೆಯೋ ಅಂತಹ ಕ್ಷೇತ್ರಕ್ಕೆ ತೀರ್ಥಕ್ಷೇತ್ರ ಎನ್ನುತ್ತಾರೆ. ಎಲ್ಲಾ ಸ್ತರಗಳಿಂದ ವಾಯುಮಂಡಲದಲ್ಲಿ ಚೈತನ್ಯವನ್ನು ಹರಡುವ ವಿಠ್ಠಲಮೂರ್ತಿಯಿಂದ ಅಧ್ಯಾತ್ಮದ ಮಾರ್ಗದಲ್ಲಿ ಮಾಡುವ ಕನಿಷ್ಠ ಹಾಗೆಯೇ ವರಿಷ್ಠ ಜೀವಿಗಳಿಗೂ ಅಧ್ಯಾತ್ಮಿಕ ಸ್ತರದಲ್ಲಿ ಯಥಾಯೋಗ್ಯ ಲಾಭವಾಗಲು ಸಹಾಯಕವಾಗುತ್ತದೆ.

ಈ ತೀರ್ಥಕ್ಷೇತ್ರ ಭಕ್ತರ ಪಾಲಿಗೆ ರೂಪ ಮನೋಹರ ಕ್ಷೇತ್ರವಾಗಿ ಭಗವಂತ ತನ್ನ ಭಕ್ತರನ್ನು ಕೈ ಬೀಸಿ ಕರೆದು ಬೇಡಿದ ವರವ ನೀಡಿ, ಆಶೀರ್ವದಿಸುವ ಕ್ಷೇತ್ರ. ಭೀಮಾರಥಿಯು ಸ್ವಾಮಿಯ ಸೌಂದರ್ಯಕ್ಕೆ ಮನಸೋತು ದೇವಾಲಯವನ್ನು ಅರ್ಧಚಂದ್ರಾಕೃತಿಯಲ್ಲಿ ಸುತ್ತಿ ಭಕ್ತಿ ಸಮರ್ಪಣೆ ಮಾಡಿದ್ದಾಳೆ. ಅದಕ್ಕೆ ಚಂದ್ರಭಾಗ ಎಂದು ಹೆಸರು ಬಂದಿದೆ ಮತ್ತು ತನ್ನಲ್ಲಿ ಮಿಂದ ಭಕ್ತರ ಪಾಪವ ತೊಳೆದು ಆಶೀರ್ವದಿಸುತ್ತಾಳೆ.

ಕೊನೆಯದಾಗಿ ಶ್ರೀ ಪಾಂಡುರಂಗ ವಿಠ್ಠಲ ವೈಕುಂಠವನ್ನು ಬಿಟ್ಟು ಬಂದದ್ದು ಪುಂಡಲೀಕರಾಯರು ತನ್ನ ವಯಸ್ಸಾದ ತಂದೆ-ತಾಯಿಗಳ ಸೇವೆ ಮಾಡುವುದನ್ನು ನೋಡಲಿಕ್ಕೆ. ನಂತರ ವರ ನೀಡಿ ಕಲ್ಲಾಗುತ್ತಾನೆ. ಆದ್ದರಿಂದ ನಾವುಗಳು ಈಗ ನಮ್ಮ ನಮ್ಮ ಮನೆಯಲ್ಲಿ ಬಾಳ ಸಂಜೆಯಲ್ಲಿರುವ ತಂದೆ-ತಾಯಿಗಳನ್ನು ಅಕ್ಕರೆಯಿಂದ ಚೆನ್ನಾಗಿ ಆರೈಕೆ ಮಾಡಿರಿ. ಯಾವುದೇ ಕಾರಣಕ್ಕೂ ಅನಾಥಾಶ್ರಮಕ್ಕೆ ಸೇರಿಸಬೇಡಿ. ಕಾರಣ ನಾವು ಈ ಬಾಳಸಂಜೆಯ ಪಯಣಿಕರಲ್ಲವೇ? ತಂದೆ-ತಾಯಿಗಿಂತ ಮಿಗಿಲಾದ ದೇವರಿಲ್ಲ ಎಂದು ವೇದಶಾಸ್ತ್ರ ಪುರಾಣಗಳು ಹೇಳಿವೆ. ಅವರ ಆರೈಕೆಯನ್ನು ಮಾಡಿ ಅವರ ಆಶೀರ್ವಾದವನ್ನು ಪಡೆದು ಧನ್ಯರಾಗೋಣ. ಆಗ ನಮ್ಮ ಬಾಳಬಂಡಿ ಹಸನಾಗುತ್ತದೆ ಮತ್ತು ಶ್ರೀ ಪಾಂಡುರಂಗ ವಿಠ್ಠಲನ ಆಶೀರ್ವಾದ ಖಂಡಿತಾ ನಮ್ಮದಾಗುತ್ತದೆ. ಇದಕ್ಕೆ ಸಂಶಯವಿಲ್ಲ. ಇದು ರುಕ್ಮಿಣಿರಮಣಿ ಶ್ರೀ ಪಾಂಡುರಂಗ ವಿಠ್ಠಲನ ಚರಣ ಕಮಲಕ್ಕೆ ಭಕ್ತಿಯಿಂದ ಅರ್ಪಿಸುವ ತುಳಸಿ ಪುಷ್ಪಮಾಲೆ.

ಭಾಗ-2 ಲೇಖನ ಮುಕ್ತಾಯ.

ಲೇಖನ : ಬಾಗೂರು ಜಿ. ಪರಪ್ಪ ಸೇಲ್ಕರ್‌, ನಿವೃತ್ತ ಶಿಕ್ಷಕರು, ದಾವಣಗೆರೆ. 

ಮೊ: 63639 65282

error: Content is protected !!