ಮಕ್ಕಳಿಗೆ ಪಠ್ಯಕ್ರಮ ಎಷ್ಟು ಮುಖ್ಯವೋ ಪಠ್ಯೇತರ ಚಟುವಟಿಕೆಯೂ ಅಷ್ಟೇ ಮುಖ್ಯ

ಮಕ್ಕಳಿಗೆ ಪಠ್ಯಕ್ರಮ ಎಷ್ಟು ಮುಖ್ಯವೋ ಪಠ್ಯೇತರ ಚಟುವಟಿಕೆಯೂ ಅಷ್ಟೇ ಮುಖ್ಯ

ಹರಪನಹಳ್ಳಿ, ಮಾ. 26 – ತಾಲ್ಲೂಕಿನ ಕನ್ನನಾಯಕನ ಹಳ್ಳಿಯ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ಹಾಗೂ ಎಸ್ ಎಸ್.ಎಲ್.ಸಿ. ಮಕ್ಕಳಿಗೆ ಹೃದಯ ಸ್ಪರ್ಷಿ ಬೀಳ್ಕೊಡುಗೆ ಸಮಾರಂಭ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯ ಶಿಕ್ಷಕ ಎ.ಸಿ.ಮಂಜಪ್ಪ, ವಸತಿ ಶಾಲೆಯಲ್ಲಿ ಮಕ್ಕಳು ತಮ್ಮ ಹೆಚ್ಚಿನ ಸಮಯವನ್ನು ಶಿಕ್ಷಕರೊಂದಿಗೆ ಕಳೆಯುತ್ತಾರೆ. ಮಕ್ಕಳ ಮೇಲೆ ಶಿಕ್ಷಕರು ಪ್ರಭಾವ ಬೀರುವುದರಿಂದ ಮಕ್ಕಳು ಉತ್ತಮ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವಂತೆ  ಸಲಹೆ ನೀಡಿದರು. 

ಮಕ್ಕಳಿಗೆ ಪಠ್ಯಕ್ರಮ ಎಷ್ಟು ಮುಖ್ಯವೋ ಪಠ್ಯೇತರ ಚಟುವಟಿಕೆಯೂ ಅಷ್ಟೇ ಮುಖ್ಯ. ಪ್ರತಿಯೊಬ್ಬ ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳ ಬೇಕು. ಉತ್ತಮ ಶಿಕ್ಷಣದೊಂದಿಗೆ ಉತ್ತಮ ದೇಹದಾರ್ಢ್ಯ ಹಾಗೂ ಆರೋಗ್ಯ ಹೊಂದುವಂತೆ ಅವರು ತಿಳಿಸಿದರು.

ವಸತಿ ಶಾಲೆಗಳಿಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದ್ದು ಮಕ್ಕಳು ಇದರ ಸದ್ಬಳಕೆ ಮಾಡಿಕೊಂಡು ಜೇನು ಹುಳುಗಳು ಹೇಗೆ ಹೂವಿನ ಮಕರಂದವನ್ನು ಹೀರುತ್ತವೆಯೋ ಹಾಗೆ ನೀವು ಪಠ್ಯ ಪುಸ್ತಕವನ್ನು ಏಕಾಗ್ರತೆಯಿಂದ ಅಭ್ಯಾಸ ಮಾಡಿ ಅದರೊಳಗಿನ ಅಂಶಗಳನ್ನು ಬಳಕೆ ಮಾಡಿಕೊಂಡು ದೇಶದ ಸತ್‌ ಪ್ರಜೆಗಳಾಗಿ ಬಾಳಿ ಎಂದರು.

ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಅಗ್ರಹಾರ ಕೆ. ಅಶೋಕ್ ಮಾತನಾಡಿ, ಮಕ್ಕಳು ಉತ್ತಮ ಶಿಕ್ಷಣ ಪಡೆದು ಸೃಜನಶೀಲತೆಯನ್ನು ಮೈಗೂಡಿಸಿಕೊಳ್ಳಬೇಕು. ಎಸ್.ಎಸ್.ಎಲ್‍.ಸಿ ಅಭ್ಯಾಸ ಮಾಡುತ್ತಿರುವ ಮಕ್ಕಳು ಸತತ ಹಾಗೂ ಕಠಿಣ ಪರಿಶ್ರಮದಿಂದ ಓದಿ ಉತ್ತಮ ಫಲಿತಾಂಶ ಪಡೆದು ತಂದೆ, ತಾಯಿಗಳಿಗೆ ಹೊರೆಯಾಗದೆ ಉತ್ತಮ ಶಿಕ್ಷಣ ಪಡೆಯಿರಿ ಎಂದು ಅವರು ಕರೆ ನೀಡಿದರು. 

ಕನ್ನನಾಯಕನಹಳ್ಳಿ ಶಾಲೆಯಲ್ಲಿ ಉತ್ತಮ ಶಿಕ್ಷಕ ವೃಂದ ಇರುವುದರಿಂದ ಮಕ್ಕಳು ಉತ್ತಮ ಫಲಿತಾಂಶದಿಂದ ತೇರ್ಗಡೆಯಾಗುತ್ತಿದ್ದಾರೆ. ಇದನ್ನೆಲ್ಲಾ ನೋಡಿದರೆ ನಮ್ಮ ಕುಟುಂಬ ಈ ಶಾಲೆಗೆ ಭೂಮಿಯನ್ನು ದಾನ ಮಾಡಿದ್ದು ಸಾರ್ಥಕ ಎನಿಸುತ್ತಿದೆ ಎಂದು ಅವರು ಹೇಳಿದರು.

ಪುರಸಭೆ ಮಾಜಿ ಸದಸ್ಯ ಸಿ. ಪಾಲಾಕ್ಷಪ್ಪ, ವಾಲ್ಮೀಕಿ ನಾಯಕ ಸಮಾಜದ ಉಪಾಧ್ಯಕ್ಷ ಹಾಗೂ ಕಾನಿಪ ಸಂಘದ ಖಜಾಂಚಿ ಸುರೇಶ್ ಮಂಡಕ್ಕಿ ಮಾತನಾಡಿದರು. ಗ್ರಾ.ಪಂ. ಸದಸ್ಯೆ ಮಹಾದೇವಮ್ಮ, ಮುಖಂಡರಾದ ತಿಮ್ಮಣ್ಣ, ಶಿಕ್ಷಕರಾದ ರಾಜಶೇಖರ್, ಗಿರೀಶ್, ಸುಂದ್ರೇಶ್, ಬಂದಮ್ಮ, ದೇವರಾಜ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

error: Content is protected !!