ಹೊನ್ನಾಳಿ : ಶಿಳ್ಳೇಕ್ಯಾತ ಜನಾಂಗಕ್ಕೆ ನಿವೇಶನ ನೀಡಲು ಆಗ್ರಹ

ಹೊನ್ನಾಳಿ : ಶಿಳ್ಳೇಕ್ಯಾತ ಜನಾಂಗಕ್ಕೆ ನಿವೇಶನ ನೀಡಲು ಆಗ್ರಹ

ಡಿಎಸ್‌ಎಸ್ ಪ್ರತಿಭಟನೆ

ಹೊನ್ನಾಳಿ, ಮಾ. 24- ತಾಲ್ಲೂಕಿನ ದೇವನಾಯಕನಹಳ್ಳಿ ಗ್ರಾಮದಲ್ಲಿ ಕಳೆದ 35 ರಿಂದ 40 ವರ್ಷ ವಾಸವಾಗಿರುವ ಶಿಳ್ಳೇಕ್ಯಾತ ಜನಾಂಗದವರಿಗೆ ನಿವೇಶನ ನೀಡುವಂತೆ ಮತ್ತು ಪಟ್ಟಣದ ಹೊಸ ಅಂಬೇಡ್ಕರ್ ಭವನ ಒತ್ತುವರಿ ಆಗಿದ್ದು, ಕೂಡಲೇ ಅಳತೆ ಮಾಡಿ ಕಾಂಪೌಂಡ್ ನಿರ್ಮಾಣ ಮಾಡುವಂತೆ ಹಾಗೂ ಈ ಕೂಡಲೇ ತಾಲ್ಲೂಕು ಎಸ್ಸಿ, ಎಸ್ಟಿ ಕುಂದು ಕೊರತೆ ಸಭೆ ಕರೆಯುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ತಾಲ್ಲೂಕು ಅಧ್ಯಕ್ಷ ಕುರುವ ಮಂಜುನಾಥ ಆಗ್ರಹಿಸಿದ್ದಾರೆ.

ದಲಿತ ಸಂಘರ್ಷ ಸಮಿತಿ ವತಿಯಿಂದ ಟಿಬಿ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಮೂಲಕ ತಾಲ್ಲೂಕು ಕಚೇರಿಗೆ ಆಗಮಿಸಿ ನಂತರ ತಾಲ್ಲೂಕು ಉಪವಿಭಾಗಾಧಿಕಾರಿ ಅಭಿಷೇಕ್ ಅವರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.

ಪಟ್ಟಣದಲ್ಲಿ ಅಂಬೇಡ್ಕರ್ ಪ್ರತಿಮೆ ಹಾಗೂ ವೃತ್ತ ನಿರ್ಮಾಣ ಮಾಡಲು ಕ್ರಮ ಜರುಗಿಸಬೇಕು. ಮೂರು ವರ್ಷಗಳಿಗಿಂತ ಹೆಚ್ಚು ದಿನ ಒಂದೇ ಕಚೇರಿ ಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳ ವರ್ಗಾವಣೆ ಮಾಡಬೇಕು. ಅವಳಿ ತಾಲ್ಲೂಕುಗಳ ವಸತಿ ನಿಲಯಗಳ ವ್ಯವಸ್ಥೆ ಕಾಪಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

ದಾವಣಗೆರೆ ಜಿಲ್ಲಾ ಪ್ರಧಾನ ಸಂಚಾಲಕ ಬಿ. ದುಗ್ಗಪ್ಪ ಮಾತನಾಡಿ, ಪುರಸಭೆ ಮತ್ತು ಗ್ರಾಮ ಪಂಚಾಯತಿಗಳಲ್ಲಿ 24•10 ಹಣದಲ್ಲಿ ಫಲಾನುಭವಿಗಳಿಗೆ ನೀಡಿರುವ ಮಾಹಿತಿ ಬಹಿರಂಗಪಡಿಸುವಂತೆ ಫಾರಂ-53-57 ರಲ್ಲಿ ಅರ್ಜಿ ಸಲ್ಲಿಸಿದ ರೈತರಿಗೆ ಸಾಗುವಳಿ ಮತ್ತು ಹಕ್ಕುಪತ್ರ ನೀಡುವಂತೆ ಹಾಗೂ ಜನಾಂಗದವರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ತಡೆಯಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಮಿತಿಯ ಜಿಲ್ಲಾ ಮುಖಂಡರಾದ ಮಂಜುನಾಥ್, ತ್ಯಾಗರಾಜ್, ತಾಲ್ಲೂಕು ಸಮಿತಿ ಜಗದೀಶ್, ನಾಗರಾಜ್, ನವೀನ್, ಸುನಿಲ್, ರಂಗನಾಥ್, ಗಿರೀಶ್, ಹಾಲೇಶ್, ಶೇಖರಪ್ಪ, ಮಂಜುನಾಥ, ಇಮಾಂ ಹುಸೇನ್, ಮಹಿಳಾ ಸಮಿತಿಯ ರೂಪಾ, ನಾಗರತ್ನ, ಮಂಜುಳಾ, ನೇತ್ರ, ಚಂದ್ರಕಲಾ, ಸುನೀತ, ಜಯಮ್ಮ, ಅಂಜಿನಮ್ಮ, ಸರೋಜ ದೇವಿ, ಶೃತಿ, ಮಹಾದೇವಿ ಮತ್ತಿತರರಿದ್ದರು. 

error: Content is protected !!