ಜಿಗಳಿಯಲ್ಲಿ ವೈಭವದ ರಥೋತ್ಸವ

ಜಿಗಳಿಯಲ್ಲಿ ವೈಭವದ ರಥೋತ್ಸವ

ಅಪಾರ ಜನ ಭಾಗಿ, ಗಮನ ಸೆಳೆದ ರಂಗನಾಥ ಸ್ವಾಮಿ ಅಲಂಕಾರ

ಮಲೇಬೆನ್ನೂರು, ಮಾ.24- ಜಿಗಳಿ ಗ್ರಾಮದ ಆರಾಧ್ಯ ದೈವ ಶ್ರೀ ರಂಗನಾಥ ಸ್ವಾಮಿಯ ರಥೋತ್ಸವವು ಭಾನುವಾರ ಬ್ರಾಹ್ಮೀ ಮೂಹೂರ್ತದಲ್ಲಿ ಅಪಾರ ಜನರ ಸಮ್ಮುಖದಲ್ಲಿ ವೈಭವದೊಂದಿಗೆ ಜರುಗಿತು.

ಶ್ರೀ ರಂಗನಾಥ ಸ್ವಾಮಿ ಉತ್ಸವ ಮೂರ್ತಿಯನ್ನು ರಥದಲ್ಲಿ ಇಟ್ಟ ನಂತರ ರಥಕ್ಕೆ ಪೂಜೆ ಸಲ್ಲಿಸಿ, ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

`ಗೋವಿಂದಾ ಗೋವಿಂದಾ’ ಎಂಬ ಉದ್ಘೋಷದೊಂದಿಗೆ ಜಿಗಳಿ, ಜಿ.ಬೇವಿನಹಳ್ಳಿ, ಭಾನುವಳ್ಳಿ, ಯಲವಟ್ಟಿ, ಮಲೇಬೆನ್ನೂರು, ಕುಂಬಳೂರು ಸೇರಿದಂತೆ ಇನ್ನೂ ಅನೇಕ ಗ್ರಾಮಗಳ ಭಕ್ತರು ರಥವನ್ನು ಎಳೆದು ಸಂಭ್ರಮಿಸಿದರು.

ಗ್ರಾಮದ ಶ್ರೀ ಬೀರಲಿಂಗೇಶ್ವರ, ಜಿ.ಬೇವಿನಹಳ್ಳಿ ಮತ್ತು ಯಲವಟ್ಟಿ ಗ್ರಾಮಗಳ ಶ್ರೀ ಆಂಜನೇಯ ಸ್ವಾಮಿ ದೇವರುಗಳ ಒಡಗೂಡಿ ಸಕಲ ಬಿರುದಾವಳಿಗಳಿಂದ ಜರುಗಿದ ರಥೋತ್ಸವದಲ್ಲಿ ಡೊಳ್ಳು, ಭಜನೆ, ವೀರಗಾಸೆ ಮತ್ತು ಪಟಾಕಿ ಸಿಡಿಸಿ ಗಮನ ಸೆಳೆಯಿತು.

ಬೆಳಗಿನ ಜಾವ 3-4 ರಿಂದ ಪ್ರಾರಂಭವಾದ ರಥೋತ್ಸವವು ಬೆಳಿಗ್ಗೆ 6 ಗಂಟೆಯವರೆಗೂ ನಡೆಯಿತು. ನಂತರ ಯಲವಟ್ಟಿ ಆಂಜನೇಯ ಸ್ವಾಮಿಯನ್ನು ಬೀಳ್ಕೊಡಲಾಯಿತು.

ದೇವಸ್ಥಾನದಲ್ಲಿ ಜವಳ, ಮುದ್ರೆ ಸೇರಿದಂತೆ ವಿವಿಧ ಸೇವಾ ಕಾರ್ಯಕ್ರಮಗಳು ನಡೆದವು. ರಂಗನಾಥ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಮರಾಠ ಸಮಾಜದವರು ಪ್ರತಿವರ್ಷದಂತೆ ಈ ವರ್ಷವೂ ಅನ್ನಸಂತರ್ಪಣೆ ನಡೆಸಿದರೆ, ಆಂಜನೇಯ ಸ್ವಾಮಿ ದೇವಸ್ಥಾನ ಆವರಣದಲ್ಲಿ ಗ್ರಾಮ ಸಹಾಯಕ ರಂಗನಾಥ್, ಧರ್ಮರಾಜ್, ಚಮನ್‌ಸಾಬ್ ಮತ್ತು ಸಂಗಡಿಗರು ಸೇರಿ 4ನೇ ವರ್ಷದ ಅನ್ನ ಸಂತರ್ಪಣೆ ಏರ್ಪಡಿಸಿದ್ದರು.

ಗ್ರಾಮದ ಉದ್ಯೋಗಸ್ಥ ಯುವಕರು ಜನರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದರು. ರಂಗನಾಥ ಸ್ವಾಮಿಗೆ ಮಾಡಲಾಗಿದ್ದ ವಿಶೇಷ ಅಲಂಕಾರ ಗಮನ ಸೆಳೆಯಿತು. ಸಂಜೆ ಜಾತ್ರೆಯ ನಂತರ ಓಕುಳಿ ಹಾಗೂ ಕಂಕಣ ವಿಸರ್ಜನೆ ಮಾಡಲಾಯಿತು.

ನಾಳೆ ಸೋಮವಾರ ಬೆಳಿಗ್ಗೆ ವಿವಿಧ ಕಾರ್ಯಕ್ರಮಗಳ ನಂತರ ಸಂಜೆ 7.30 ರಿಂದ ಶ್ರೀ ರಂಗನಾಥ ಸ್ವಾಮಿ, ಬೀರಲಿಂಗೇಶ್ವರ ಹಾಗೂ ಬೇವಿನಹಳ್ಳಿ ಆಂಜನೇಯ ಸ್ವಾಮಿ ಸಮ್ಮುಖದಲ್ಲಿ ಭೂತನ ಸೇವೆ ಮತ್ತು ಉತ್ಸವ ನಡೆಯಲಿದೆ. ನಾಡಿದ್ದು ಮಂಗಳವಾರ ಚೌಡಮ್ಮ ದೇವಿಯ ಹಬ್ಬ ಜರುಗಲಿದೆ.

error: Content is protected !!