ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಗ್ರಾಮೀಣ ಭಾಗಗಳಲ್ಲಿ ಉಳಿದಿದೆ

ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಗ್ರಾಮೀಣ ಭಾಗಗಳಲ್ಲಿ ಉಳಿದಿದೆ

ಹರಪನಹಳ್ಳಿ ತಾಲ್ಲೂಕು ಕಸಾಪ ದತ್ತಿ ಉಪನ್ಯಾಸದಲ್ಲಿ ಪ್ರಾಂಶುಪಾಲ ಪ್ರಕಾಶ್

ಹರಪನಹಳ್ಳಿ, ಮಾ. 18 – ಗ್ರಾಮೀಣ ಭಾಗಗಳಲ್ಲಿ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ  ಉಳಿದಿದೆ ಎಂದು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯ ಜಿ. ಪ್ರಕಾಶ್‌ ಹೇಳಿದರು

ತಾಲ್ಲೂಕಿನ ಅನಂತನಹಳ್ಳಿ ಬಳಿ ಇರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ದಿ. ಹೆಚ್. ಬಸಪ್ಪ ದತ್ತಿ. ದಿ. ಕೊಟ್ರಪ್ಪ ಶ್ರೀಮತಿ ಹೆಚ್. ಬಸಮ್ಮ ದತ್ತಿ. ಶಿವಮೊಗ್ಗದ ನಾಗರಾಜಪ್ಪ ದತ್ತಿ. ದಿ. ಡಾ.ಎನ್. ರಾಮಪ್ಪ ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಭಾಷೆಯೊಂದು ಜೀವಂತವಾಗಿ ಉಳಿಯುವುದು ನಮ್ಮ ಮಕ್ಕಳು ಕಲಿಯುವುದರಿಂದ, ಮಾತನಾಡುವುದ ರಿಂದಲೇ ಹೊರತು ಭಾಷಾಭಿಮಾನದ ವೀರಾವೇಶದ ಮಾತುಗಳು ಮತ್ತು ಉಗ್ರ ಹೋರಾಟಗಳಿಂದಲ್ಲ. ಇವತ್ತು ನಮ್ಮ ಮಕ್ಕಳಿಗೆ ಕನ್ನಡ ಕಲಿಸದೇ ಇದ್ದರೆ ಮುಂದೊಂದು ದಿನ ಕರ್ನಾಟಕದಲ್ಲಿ ಕನ್ನಡದ ಬೋರ್ಡುಗಳನ್ನು ಎಷ್ಟು ದಪ್ಪ ಅಕ್ಷರಗಳಲ್ಲಿ ಬರೆದು ಹಾಕಿದರೂ ಓದುವುದಕ್ಕೂ ಜನ ಗತಿ ಇರುವುದಿಲ್ಲ ಎಂದರು.

ಎಸ್.ಯು.ಜೆ.ಎಂ. ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಎಚ್. ಮಲ್ಲಿಕಾರ್ಜುನ್ ಮಾತನಾಡಿ, ನಮ್ಮ ಭಾಷೆಯ ಅಳಿವು-ಉಳಿವು ನಮ್ಮ ಮೇಲೆ ನಿಂತಿದೆಯೇ ಹೊರತು ಅನ್ಯ ಭಾಷಿಕರ ಮೇಲೆ ದ್ವೇಷ ಕಾರುವುದರಿಂದಲ್ಲ. ಎಷ್ಟೋ ವರ್ಷ ಇಲ್ಲೇ ನೆಲೆಸಿರುವವರು ಕನ್ನಡ ಕಲಿಯುವುದು ಧರ್ಮ. ಆದರೆ ಅನ್ಯಭಾಷಿಕರು ಕನ್ನಡ ಕಲಿಯುವಂತೆ, ಕನ್ನಡ ಸಂಸ್ಕೃತಿಯ ಒಳಗೆ ಬರುವಂತೆ ನಾವೇನಾದರೂ ಗಮನಾರ್ಹ ಪ್ರಯತ್ನ ಮಾಡಿದ್ದೇವೆಯೇ? ಹಾಗೆ ಪ್ರಯತ್ನ ಮಾಡಿದ್ದೂ ಅನ್ಯಭಾಷಿಕರು ಕನ್ನಡ ಕಲಿಯದಿದ್ದರೆ ಆಗ ಅದು ಅವರ ತಪ್ಪು. ಕರ್ನಾಟಕದಲ್ಲಿ ಕನ್ನಡ ಅನ್ನದ, ಅರಿವಿನ ಭಾಷೆಯಾದಾಗ ಮಾತ್ರ ಉಳಿಯುತ್ತದೆ, ಇಲ್ಲದಿದ್ದರೆ ಎಂತಹ ಉಗ್ರ ಹೋರಾಟಗಳು ನಡೆದರೂ ಅಳಿಯುತ್ತದೆ ಎಂದರು.

ಆದರ್ಶ ವಿದ್ಯಾಲಯದ ಮುಖ್ಯ ಶಿಕ್ಷಕ ಹೆಚ್.ಕೆ.ಚಂದ್ರಪ್ಪ ಹಾಗೂ ದತ್ತಿ ದಾನಿಗಳಾದ ಅಂಬುಜಾ ರಾಮಪ್ಪ  ಮಾತನಾಡಿ,  1915ರ ಸುಮಾರಿಗೆ ಕರ್ನಾಟಕ ಸಾಹಿತ್ಯ ಪರಿಷತ್ತು ಸ್ಥಾಪನೆಯಾಯಿತು. ಆಗ ಮೈಸೂರು ಅರಸ ರಾಗಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಪರಿಷತ್ತಿನ ಸ್ಥಾಪನೆಗೆ ಚಾಲನೆ ನೀಡಿದರು. ಮುಂದೆ 1935 ರಲ್ಲಿ ಈ ಹೆಸರನ್ನು ಕನ್ನಡ ಸಾಹಿತ್ಯ ಪರಿಷತ್ತು ಎಂದು ಬದಲಾಯಿಸಿದರು ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಅಧ್ಯಕ್ಷ  ಕೆ.ಉಚ್ಚಂಗೆಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಉಪನ್ಯಾಸಕರಾದ ಚೇತನ, ಬಸವರಾಜ, ರವಿಕುಮಾರ, ಗುರುಬಸವರಾಜ, ನವೀನಕುಮಾರ, ಹೊನ್ನಪ್ಪ, ಕನ್ನಡ ಸಾಹಿತ್ಯ ಪರಿಷತ್ತ್‌ ಗೌರವ ಕಾರ್ಯದರ್ಶಿ ಜಿ. ಮಹಾದೇವಪ್ಪ ಸೇರಿದಂತೆ ಇತರರು ಇದ್ದರು.

error: Content is protected !!