ಕನ್ನಡಿಗರೂ ಪತ್ರಿಕೆ, ಪುಸ್ತಕಗಳಿಗೆ ಹಣ ಖರ್ಚು ಮಾಡಬೇಕು

ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಸಂಸ್ಕೃತ ವಿ.ವಿ. ಮಾಜಿ ಕುಲಪತಿ ಪ್ರೊ. ವೆಂಕಟೇಶ್

ಹರಿಹರ, ಮಾ. 18 – ಕೇರಳದವರಂತೆ ಕನ್ನಡಿಗರೂ ದಿನ ಪತ್ರಿಕೆ ಹಾಗೂ ಪುಸ್ತಕಗಳಿಗೆ ಹಣ ಖರ್ಚು ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕೆಂದು ಬೆಂಗಳೂರು ಸಂಸ್ಕೃತ ವಿ.ವಿ. ಮಾಜಿ ಕುಲಪತಿ ಪ್ರೊ.ಮಲ್ಲೇಪುರಂ
ಜಿ.ವೆಂಕಟೇಶ್ ಅಭಿಪ್ರಾಯಪಟ್ಟರು.

ನಗರದ ಸಿದ್ದೇಶ್ವರ ಪ್ಯಾಲೇಸ್‍ನ ಹೆಳವನಕಟ್ಟೆ ಗಿರಿಯಮ್ಮ ಹಾಗೂ ಪ್ರೊ.ಬಿ.ಕೃಷ್ಣಪ್ಪ ವೇದಿಕೆಯಲ್ಲಿ ಸೋಮವಾರ ನಡೆದ 13ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಅವರು ಸಮ್ಮೇಳನದ ಪ್ರಧಾನ ಭಾಷಣ ಮಾಡಿದರು.

ಕೇರಳದವರು ತಮ್ಮ ದುಡಿಮೆಯಲ್ಲಿ ಸ್ವಲ್ಪ ಪ್ರಮಾಣವನ್ನು ದಿನ ಪತ್ರಿಕೆ, ಪುಸ್ತಕಗಳನ್ನು ಖರೀದಿಸಲು ಹಣ ಮೀಸಲು ಇಡುತ್ತಾರೆ. ಇದೇ ರೀತಿ ಕನ್ನಡಿಗರೂ ಮಾಡಿದರೆ ಕನ್ನಡದ ಪ್ರಕಾಶಕರು, ಲೇಖಕರು ಬೆಳೆಯುವ ಜೊತೆಗೆ ಕನ್ನಡವೂ ಬೆಳೆಯುತ್ತದೆ ಎಂದರು.

ಮಹಾನಗರಗಳಲ್ಲಿ ಕನ್ನಡ ಭಾಷೆ ಮಾತನಾಡಿದರೆ ಕೀಳಾಗಿ ಕಾಣುವ ಸ್ಥಿತಿ ಇದೆ. ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಕನ್ನಡದ ಕಂಪು ಉಳಿದಿದೆ. ಈ ವಾತಾವರಣವನ್ನು ಬದಲಾಯಿಸುವ ಶಕ್ತಿ ಮತ್ತು ಜವಾಬ್ದಾರಿ ಕನ್ನಡಿಗರಾದ ನಮ್ಮ ಮೇಲೆಯೇ ಇದೆ ಎಂದರು.

12ನೇ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸರ್ವಾಧ್ಯಕ್ಷರಾಗಿದ್ದ ಯುಗಧರ್ಮ ರಾಮಣ್ಣ ನೂತನ ಸರ್ವಾಧ್ಯಕ್ಷ ಪ್ರೊ.ಸಿ.ವಿ.ಪಾಟೀಲರಿಗೆ ಕನ್ನಡದ ಧ್ವಜವನ್ನು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಮಣ್ಣ, ಶಿಕ್ಷೆ ಮತ್ತು ಶಿಕ್ಷಣ ಕನ್ನಡದಲ್ಲಿರಬೇಕು. ಸಾಧನೆ ಮಾಡುವ ಜೊತೆಗೆ ಸಾಕ್ಷಾತ್ಕಾರ ಮಾಡಿಸಬೇಕು. 1ನೇ ತರಗತಿಯಲ್ಲಿ 5 ಬಾರಿ ಫೇಲ್ ಆದ ನನ್ನಂತಹ ವ್ಯಕ್ತಿಗೆ 12ನೇ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿದ್ದು ಸಂತಸ ಉಂಟು ಮಾಡಿದೆ ಎಂದರು.

ಸಮ್ಮೇಳನದ ಸರ್ವಾಧ್ಯಕ್ಷ ಪ್ರೊ.ಸಿ.ವಿ.ಪಾಟೀಲ್ ಅವರು ಮಾತನಾಡಿ, ಒಂದು ಮೂರ್ತಿ ದೇವರಿಬ್ಬರು ಎಂಬ ಹಿರಿಮೆ ಹೊಂದಿರುವ ಹರಿಹರೇಶ್ವರ ದೇವಾಲಯ ಹರಿಹರದ ಐತಿಹಾಸಿಕ ಹಿನ್ನೆಲೆಯನ್ನು ವ್ಯಕಪಡಿಸುತ್ತದೆ ಎಂದರು.

ನಾಡಿನ ಖ್ಯಾತ ಸಾಹಿತಿಗಳಾದ ತ.ರಾ.ಸು., ನಾಡಿಗೇರ್ ಕೃಷ್ಣರಾಯರು, ದಾಶರತಿ ದೀಕ್ಷಿತರು, ಪ್ರೊ.ಎಚ್.ಎಂ.ಶಂಕರ ನಾರಾಯಣರು, ಡಾ.ಪೋಲಂಕಿ ರಾಮಮೂರ್ತಿ, ಪಿ.ಲಂಕೇಶ್‍ರ ಪೂರ್ವಜರು ಹರಿಹರದವರಾಗಿದ್ದಾರೆ ಎಂದರು.

ಹರಿಹರದಲ್ಲಿ ನದಿ ಇದ್ದರೂ ಬೇಸಿಗೆಯಲ್ಲಿ ನೀರಿನ ಕೊರತೆ ಎದುರಾಗುತ್ತಿದ್ದು ಅಗಸನಕಟ್ಟೆ ಕೆರೆಯನ್ನು ಪರ್ಯಾಯ ನೀರಿನ ಮೂಲವಾಗಿ ಅಭಿವೃದ್ಧಿಪಡಿಸಬೇಕು. ಭೈರನಪಾದ ನೀರಾವರಿ ಯೋಜನೆ ಕೈಗೂಡಬೇಕು, ಕೈಗಾರಿಕಾ ಘಟಕ ಗಳನ್ನು, ಜವಳಿ ಪಾರ್ಕ್, ಪವನ ವಿದ್ಯುತ್ ಸ್ಥಾವರ ಘಟಕಗಳ ಸ್ಥಾಪನೆಯಾಗಿ ನಗರವು ಸಮೃದ್ಧವಾಗ ಬೇಕು. ಈ ದಿಸೆಯಲ್ಲಿ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ತರಲಿ ಎಂದರು.

ಸಮ್ಮೇಳನವನ್ನು ಉದ್ಘಾಟಿಸಿದ ಎಸ್.ಎಸ್.ಲೈಫ್ ಕೇರ್ ಟ್ರಸ್ಟ್‍ನ ಟ್ರಸ್ಟಿ ಡಾ.ಪ್ರಭಾ ಮಲ್ಲಿಕಾರ್ಜುನ ಮಾತನಾಡಿ, ಕನ್ನಡ ಭಾಷೆ ಉಳಿದರೆ ಕನ್ನಡಿಗರು ಉಳಿಯುತ್ತಾರೆ. ಬೇರೆ ರಾಜ್ಯ ಗಳಲ್ಲಿ ಶಿಕ್ಷಣ ಪಡೆದು ಮರಳಿದ ನನ್ನ ಹಿರಿಯ ಪುತ್ರನಿಗೆ, ನನ್ನ ಕಿರಿಯ ಪುತ್ರನೇ ಗುರುವಾಗಿ ಕನ್ನಡ ಭಾಷೆಯನ್ನು ಕಲಿಸುತ್ತಿದ್ದಾನೆ ಎಂದರು.

ನಿವೃತ್ತ ಬ್ಯಾಂಕ್ ಅಧಿಕಾರಿ ಎನ್.ಟಿ.ಎರ್ರಿಸ್ವಾಮಿ ರಚಿತ `ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜೀವನ ಚರಿತ್ರೆ’, ಸೀತಾ ಎಸ್.ನಾರಾಯಣ ರಚಿತ ಜ್ಞಾನವಾರದಿ ಪ್ರಬಮಧ, ಹೆಚ್.ಎನ್.ಶಿವಕುಮಾರ್ ರಚಿತ ಶ್ರಾವಣ ಸಂಭ್ರಮ ಕವನ ಸಂಕಲನಗಳನ್ನು ಲೋಕಾರ್ಪಣೆ ಮಾಡಲಾಯಿತು.

ಸಂಗಮ ಸಿರಿ ಸ್ಮರಣ ಸಂಚಿಕೆ ಕುರಿತು ಸಂಚಿಕೆಯ ಸಂಪಾದಕ ಪ್ರೊ.ಎಚ್.ಎ.ಭಿಕ್ಷಾವರ್ತಿ ಮಠ ಮಾತನಾಡಿದರು. 

ಕಸಾಪ ಪದಾಧಿಕಾರಿಗಳಾದ ಬಿ.ದಿಳ್ಯಪ್ಪ ಸ್ವಾಗತಿಸಿದರು, ರೇವಣಸಿದ್ದಪ್ಪ ಅಂಗಡಿ ಮತ್ತು ಕೆ.ರಾಘವೇಂದ್ರ ನಾಯರಿ ನಿರೂಪಿಸಿದರು, ಜಿಗಳಿ ಪ್ರಕಾಶ್ ವಂದಿಸಿದರು. ಹಾಲಿವಾಣ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಕಂಸಾಳೆ ನೃತ್ಯ ಪ್ರದರ್ಶಿಸಿದರು.

error: Content is protected !!