ಹರಪನಹಳ್ಳಿ : ಕೊನೆ ಉಸಿರಿರುವ ತನಕ ಕನ್ನಡ ಪರ ಹೋರಾಟ

ಹರಪನಹಳ್ಳಿ : ಕೊನೆ ಉಸಿರಿರುವ ತನಕ ಕನ್ನಡ ಪರ ಹೋರಾಟ

ಕನ್ನಡದ ಹಬ್ಬ ಕಾರ್ಯಕ್ರಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡ

ಹರಪನಹಳ್ಳಿ, ಮಾ.15- ಕನ್ನಡಿಗರಿಗೆ, ಕನ್ನಡ ನುಡಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ನಾವು ಯಾರ ಅಡಿಯಾಳೂ ಅಲ್ಲ. ನಮಗೆ ನಮ್ಮದೇ ಆದ ಸಂಸ್ಕೃತಿ ಪರಂಪರೆ ಇದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ  ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡ ಹೇಳಿದರು.

ಪಟ್ಟಣದ ಹಳೇಬಸ್ ನಿಲ್ದಾಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಆಶ್ರಯದಲ್ಲಿ 67ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡದ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈ ನೆಲಕ್ಕೆ ಕೋಟಿ ಇತಿಹಾಸವಿದೆ. ವಿಜಯನಗರ ಸಾಮ್ರಾಜ್ಯದ ನೆಲೆ, ಪುಣ್ಯರುಷರ, ಸಾಧು-ಸಂತರ, ಶರಣರ ನಾಡಿನಲ್ಲಿ ದಿ. ಎಂಪಿ ಪ್ರಕಾಶ್ ಅವರು ಸರಳ, ಸಜ್ಜನ ರಾಜಕಾರಣಿ.  ಸಾಂಸ್ಕೃತಿಕ ರಾಯಭಾರಿಯಾಗಿ ಈ ನಾಡಿನಲ್ಲಿ ತಮ್ಮದೇ ಆದ ಚಾಪು ಮೂಡಿಸಿದ್ದಾರೆ. ಕನ್ನಡ ನಾಡು-ನುಡಿ ಉಳಿಸುವ  ಹೋರಾಟಗಾರರಿಗೆ ಸರ್ಕಾರ ನೀಡಿರುವ ಕೊಡುಗೆ ಜೈಲು ಶಿಕ್ಷೆ. ರಾಜ್ಯದ ರಾಜಧಾನಿ ಭಾಷಾ ಅಲ್ಪಸಂಖ್ಯಾತರ ಕಪಿ ಮುಷ್ಟಿಯಲ್ಲಿದೆ. ಶೇ.75ರಷ್ಟು ಜನ ಹೊರಗಿನಿಂದ ಬಂದವರು ಇದ್ದಾರೆ. ಬೆಂಗಳೂರಿನಲ್ಲಿ ದಪ್ಪ ದಪ್ಪ ಅಕ್ಷರಗಳಲ್ಲಿ ಕನ್ನಡದ ಬೋರ್ಡ್ ಇದೆ. ಈಗಾಗಲೇ ಶೇ.90 ರಷ್ಟು ಕನ್ನಡಮಯವಾಗಿದೆ ಎಂದರು.

ನಾರಾಯಣಗೌಡರ ಧ್ವನಿ ಅಡಗಿಸಲು ಸಾಕಷ್ಟು ಪ್ರಯತ್ನಗಳು ನಡೆದಿವೆ.  ರಾಜಕಾರಣಿಗಳಿಗೆ ನಾನು ಎಂದೂ ಮಣಿಯುವುದಿಲ್ಲ. ಕೊನೆಯವರೆಗೂ  ನಾನು ಹೋರಾಟ ಮಾಡಿ ಸಾಯುತ್ತೇನೆ. ನಾನು ಎಂದಿಗೂ ತಲೆ ತಗ್ಗಿಸುವುದಿಲ್ಲ. ರಾಜ್ಯದ ಹಲವಾರು ಇಲಾಖೆಗಳಲ್ಲಿ ಕನ್ನಡದವರಿಗೆ ಕೆಲಸ  ಸಿಗುವಂತೆ ಮಾಡಿದ ಕೀರ್ತಿ ಕರ್ನಾಟಕ ರಕ್ಷಣಾ ವೇದಿಕೆಗೆ ಸಲ್ಲುತ್ತದೆ ಎಂದರು.

ಬಸವಣ್ಣನವರನ್ನು ಸಾಂಸ್ಕೃತಿಕ ರಾಯಭಾರಿ ಎಂದು ಸರ್ಕಾರ ಘೋಷಣೆ ಮಾಡಿದ್ದು, ನಿಜವಾಗಿ ಬಸವಣ್ಣನವರ ತತ್ವಗಳನ್ನು ಪಾಲನೆ ಮಾಡುತ್ತಿದೆ ಎಂಬುದನ್ನು ಸಾಬೀತು ಪಡಿಸಲಿ. ಮಠ – ಮಾನ್ಯಗಳು ವ್ಯಾಪಾರದ ಕೇಂದ್ರ ಗಳಾಗಿವೆ ಎಂದು ವಿಷಾದ ವ್ಯಕ್ತಪಡಿಸಿದರು.

ನೀಲಗುಂದ ಗುಡ್ಡದ ವಿರಕ್ತ ಮಠದ ಶ್ರೀ ಚನ್ನಬಸವ ಶಿವಯೋಗಿಗಳು  ಸಾನ್ನಿಧ್ಯ ವಹಿಸಿ ಮಾತನಾಡಿ, ಕನ್ನಡ ಸುಲಿದ ಬಾಳೆಹಣ್ಣು ಇದ್ದ ಹಾಗೆ, ಕಬ್ಬಿನ ರಸದಂತೆ ಕನ್ನಡ ಭಾಷೆ ನಿರಂತರವಾಗಿ ದಿನನಿತ್ಯ ಜನಬಳಕೆ ಆಗಲಿ ಎಂದರು.

ಎಂ.ಪಿ.ಪ್ರಕಾಶ ಸಮಾಜ ಮುಖಿ ಟ್ರಸ್ಟ್ ಅಧ್ಯಕ್ಷರಾದ ಎಂ.ಪಿ.ವೀಣಾ ಮಹಾಂತೇಶ ಮಾತನಾಡಿ, ಹಿಂದಿ ಹಾಗೂ ಇಂಗ್ಲಿಷ್ ಭಾಷೆಯ ನಡುವೆ ಕನ್ನಡ  ನಲುಗಿ ಹೋಗಿದೆ. ಕರ್ನಾಟಕದ ಗಡಿಭಾಗಗಳಲ್ಲಿ ಕನ್ನಡದ ಉಳಿವಿಗಾಗಿ ನಿರಂತರ ಹೋರಾಟ ನಡೆಯುತ್ತಿದ್ದು, ಕನ್ನಡ ಶಾಸನಗಳಿಂದ ಕನ್ನಡ ಪುರಾತನ ಭಾಷೆಯಾಗಿದೆ ಎಂಬುದನ್ನು ನಾವು ನೋಡಬಹುದಾಗಿದೆ. ಹರಪನಹಳ್ಳಿ ಪುರಾತನ ಇತಿಹಾಸ ಹೊಂದಿರುವ ಪ್ರದೇಶವಾಗಿದ್ದು, ಬಾಗಳಿಯಲ್ಲಿ 101 ಶಾಸನಗಳು ಸಿಕ್ಕ ಇತಿಹಾಸವಿದೆ ಎಂದರು.

ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಗಿರಜ್ಜಿ ನಾಗರಾಜ ಮಾತನಾಡಿ, ಬೀಚಿ ನಾಡಿನಲ್ಲಿ ನಾಡು, ನುಡಿ,  ನೆಲ, ಜಲ, ಕನ್ನಡ ನಾಡಿನ ಬಗ್ಗೆ ಸಾಕಷ್ಟು ಶ್ರಮವಹಿಸಿ ಜನಪರ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ ಎಂದು ಹೇಳಿದರು.

ವಾಲ್ಮೀಕಿ ಸಮಾಜದ  ತಾಲ್ಲೂಕು ಘಟಕದ ಮಹಿಳಾ ಅಧ್ಯಕ್ಷರಾದ ಹೆಚ್.ಟಿ.ವನಜಾಕ್ಷಮ್ಮ, ಪರಿವರ್ತನ ಶಾಲೆಯ ನಿಕಟ ಪೂರ್ವ ಅಧ್ಯಕ್ಷ ರವಿ ಅಧಿಕಾರ್,  ಕರ್ನಾಟಕ ರಕ್ಷಣಾ ವೇದಿಕೆ ವಿಜಯನಗರ ಜಿಲ್ಲಾ ಅಧ್ಯಕ್ಷ ತಾರಿಹಳ್ಳಿ ಹನುಮಂತಪ್ಪ, ದಾವಣಗೆರೆ ಜಿಲ್ಲಾ ಅಧ್ಯಕ್ಷ ಎಂ.ಎಸ್.ರಾಮೇಗೌಡ, ಹಾವೇರಿ ಜಿಲ್ಲಾ ಅಧ್ಯಕ್ಷ ಗಿರೀಶ್ ಬಾರ್ಕಿ, ತಾಲೂಕು ಅಧ್ಯಕ್ಷ ಗಿರಜ್ಜಿ ನಾಗರಾಜ, ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಅಧ್ಯಕ್ಷ ಕೆ.ಉಚ್ಚೆಂಗೆಪ್ಪ, ಕರ್ನಾಟಕ ರಕ್ಷಣಾ ವೇದಿಕೆಯ ನಂದೀಶ ಆಚಾರಿ, ಬಸವರಾಜ ಭಂಡಾರಿ, ಹೆಚ್. ಬಾಲಾಜಿ ಸೇರಿದಂತೆ  ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!