ಮಾಜಿ ಶಾಸಕ ಹೆಚ್.ಪಿ. ರಾಜೇಶ್ ಬಿಜೆಪಿಗೆ ಸೇರ್ಪಡೆ

ಮಾಜಿ ಶಾಸಕ ಹೆಚ್.ಪಿ. ರಾಜೇಶ್ ಬಿಜೆಪಿಗೆ ಸೇರ್ಪಡೆ

ಜಗಳೂರು, ಮಾ. 14- ಲೋಕಸಭಾ ಚುನಾವಣೆಗೆ ದಿನಾಂಕ ಪ್ರಕಟಗೊಳ್ಳುವ ಕ್ಷಣಗಣನೆ ದಿನಗಳಲ್ಲಿ ಜಗಳೂರು ಕ್ಷೇತ್ರದಲ್ಲಿ ರಾಜಕೀಯ ದೃವೀಕರಣ ಆರಂಭಗೊಂಡಿದ್ದು, ಕಾಂಗ್ರೆಸ್ ಮಾಜಿ ಶಾಸಕ ಎಚ್.ಪಿ. ರಾಜೇಶ್ ಇಂದು ತಮ್ಮ ಬೆಂಬಲಿಗರೊಂದಿಗೆ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.

ಬೆಂಗಳೂರಿನ ಬಿಜೆಪಿ ಪಕ್ಷದ ಕಾರ್ಯಾ ಲಯದಲ್ಲಿ ಇಂದು ನಡೆದ ಸಮಾರಂಭದಲ್ಲಿ ರಾಜ್ಯಾಧ್ಯಕ್ಷ ವಿಜಯೇಂದ್ರ, ರಾಜೇಶ್ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. 

ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಸಿ.ಟಿ. ರವಿ, ಸುನಿಲ್ ಕುಮಾರ್, ಶಾಸಕ ಬಿ.ಪಿ.ಹರೀಶ್, ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ, ಎಂ.ಎಲ್.ಸಿ ರವಿಕುಮಾರ್, ಮಾಜಿ ಶಾಸಕ ಎಸ್.ವಿ. ರಾಮಚಂದ್ರ ಸೇರಿದಂತೆ ಜಿಲ್ಲೆಯ ಅನೇಕ ಮುಖಂಡರು ಸಭೆಯಲ್ಲಿ ಹಾಜರಿದ್ದರು.

ಮಾಜಿ ಶಾಸಕ ಎಸ್.ವಿ ರಾಮಚಂದ್ರ ಅವರ ವಿರುದ್ಧ 5 ಚುನಾವಣೆಗಳಲ್ಲಿ ನೇರ ನೇರ ಪೈಪೋಟಿ ನಡೆಸಿ, ಒಮ್ಮೆ ಮಾತ್ರ ಶಾಸಕರಾ ಗಿರುವ ರಾಜೇಶ್ ಅವರ ಸೇರ್ಪಡೆಗೆ ಆರಂಭ ದಲ್ಲಿ ಶಾಸಕ ಎಸ್.ವಿ ರಾಮಚಂದ್ರ ವಿರೋಧ ವ್ಯಕ್ತಪಡಿಸಿದ್ದರು ಎಂಬ ಸುದ್ದಿಗಳು ಹರಿದಾಡಿದ್ದವು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ರಾಷ್ಟ್ರೀಯ ಪಕ್ಷಗಳಿಗೆ ಸರಿಸಮನಾಗಿ ಮತಗಳನ್ನು ಪಡೆದು ಗಮನ ಸೆಳೆದಿದ್ದ ರಾಜೇಶ್ ಅವರ ಸಂಘಟನಾ ಶಕ್ತಿಯನ್ನು ಲೋಕಸಭಾ ಚುನಾವಣೆಯಲ್ಲಿ ಬಳಸಿಕೊಳ್ಳುವ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದ ಚುನಾವಣಾ ತಂತ್ರಗಾರಿಕೆಯ ಭಾಗವಾಗಿ
ಎಸ್.ವಿ. ರಾಮಚಂದ್ರ ಅವರು ರಾಜೇಶ್ ಅವರ ಸೇರ್ಪಡೆಗೆ ಸಮ್ಮತಿಸಿದ್ದಾರೆ ಎಂದು ಹೇಳಲಾಗಿದೆ.

 ಜಗಳೂರು ವಿಧಾನಸಭಾ ಕ್ಷೇತ್ರದಲ್ಲಿ 3 ಬಾರಿ ಶಾಸಕರಾಗಿ ನಿಗಮ, ಮಂಡಳಿಯ ಅಧ್ಯಕ್ಷರಾಗಿ ಕ್ಷೇತ್ರದಲ್ಲಿ ತಮ್ಮದೇ ಆದ ಜನ ಪ್ರಿಯತೆ ಗಳಿಸಿಕೊಂಡಿರುವ ಎಸ್.ವಿ ರಾಮ ಚಂದ್ರ ರಾಜೇಶ್ ಅವರ ಪಕ್ಷ ಸೇರ್ಪಡೆ ಸಮಾ ರಂಭದಲ್ಲಿ ಹಾಜರಿದ್ದುದು ವಿಶೇಷವಾಗಿತ್ತು.

2008ರಲ್ಲಿ ಜಗಳೂರು ವಿಧಾನಸಭಾ ಕ್ಷೇತ್ರ ಎಸ್.ಟಿ ಮೀಸಲು ಆದಾಗ ಎಚ್.ಪಿ. ರಾಜೇಶ್  ಬಿಜೆಪಿಯಿಂದ ಸ್ಪರ್ಧಿಸಿದ್ದರು. ಆಗ ಕಾಂಗ್ರೆಸ್ ಪಕ್ಷದ ಎಸ್.ವಿ. ರಾಮಚಂದ್ರ ಗೆಲುವು ಸಾಧಿಸಿದ್ದರು.

2011ರಲ್ಲಿ ಶಾಸಕ ಸ್ಥಾನಕ್ಕೆ ಎಸ್.ವಿ ರಾಮಚಂದ್ರ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರು. ಆಗ ನಡೆದ ಉಪಚುನಾವಣೆಯಲ್ಲಿ ಎಚ್.ಪಿ. ರಾಜೇಶ್ ಅವರು ಪಕ್ಷೇತರರಾಗಿ ಸ್ಪರ್ಧಿಸಿ ಸೋಲು ಅನುಭವಿಸಿದ್ದರು, ರಾಮಚಂದ್ರ ಗೆಲುವು ಸಾಧಿಸಿದ್ದರು.

2013ರಲ್ಲಿ ಕಾಂಗ್ರೆಸ್ ಪಕ್ಷ ಸೇರಿದ್ದ
ಎಚ್. ಪಿ. ರಾಜೇಶ್ ಅವರು 2018ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ವಿ. ರಾಮಚಂದ್ರ ಅವರನ್ನು ಸೋಲಿಸಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು.

2023ರ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್ ಪಕ್ಷದಲ್ಲಿದ್ದರೂ ರಾಜೇಶ್ ಅವರಿಗೆ ಟಿಕೆಟ್  ಸಿಗಲಿಲ್ಲ.
ಬಿ.ದೇವೇಂದ್ರಪ್ಪ ಅವರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿತ್ತು. ಇದರಿಂದ ಪಕ್ಷದ ವಿರುದ್ಧ ಬಂಡಾಯವೆದ್ದು ಪಕ್ಷೇತರರಾಗಿ ಸ್ಪರ್ಧಿಸಿದ್ದ ಎಚ್‌ಪಿ ರಾಜೇಶ್, ಎರಡೂ ರಾಜಕೀಯ ಪಕ್ಷಗಳಿಗೆ ಸರಿಸಮನಾಗಿ ಮತಗಳನ್ನು ಪಡೆದ ಪರಿಣಾಮವಾಗಿ  ರಾಮಚಂದ್ರ ಅಲ್ಪ ಮತಗಳ ಅಂತರದಲ್ಲಿ ಸೋಲು ಅನುಭವಿಸಿ ಕಾಂಗ್ರೆಸ್‌ ಪಕ್ಷದ ದೇವೇಂದ್ರಪ್ಪ  ಗೆಲುವು ಸಾಧಿಸಿದ್ದರು.

error: Content is protected !!