ಕುಟುಂಬ ರಾಜಕೀಯ ಮುಕ್ತಗೊಳಿಸಲು ಬಿಜೆಪಿ ಗೆಲ್ಲಿಸೋಣ

ಕುಟುಂಬ ರಾಜಕೀಯ ಮುಕ್ತಗೊಳಿಸಲು ಬಿಜೆಪಿ ಗೆಲ್ಲಿಸೋಣ

ದಾವಣಗೆರೆ, ಮಾ.12- ಹಿಂದಿನ ಬಿಜೆಪಿ ಸರ್ಕಾರ ಪ.ಪಂಗಡಕ್ಕೆ ಶೇ.7ರಷ್ಟು ಮಿಸಲಾತಿ ಕೊಡುವ ಜತೆಗೆ ವಾಲ್ಮೀಕಿ ಸಮಾಜದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದೆ. ಆದ್ದರಿಂದ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ  ಮೋದಿ ಅವರನ್ನು ಗೆಲ್ಲಿಸಬೇಕು  ಎಂದು ರಾಜ್ಯ ಬಿಜೆಪಿ ಎಸ್ಟಿ ಮೋರ್ಚಾ ಅಧ್ಯಕ್ಷ ಬಂಗಾರು ಹನಮಂತು ತಿಳಿಸಿದರು.

ನಗರದ ದಾವಣಗೆರೆ-ಹರಿಹರ ಅರ್ಬನ್ ಬ್ಯಾಂಕ್ ಸಮುದಾಯ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪರಿಶಿಷ್ಟ ಪಂಗಡಗಳ ಮುನ್ನಡೆ ಸಮಾವೇಶದಲ್ಲಿ ಅವರು ಮಾತನಾಡಿದರು.

ನಮ್ಮ ಸಮಾಜವು ಮೀಸಲಾತಿ ಪಡೆಯಲು 30ವರ್ಷಗಳ ಕಾಲ  ಹೋರಾಟ ನಡೆಸಿತ್ತು. ಆದರೆ ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ   ಶೇ.7ರ ಮಿಸಲಾತಿ ನೀಡಿ ಸಮಾಜದ ಹಿತ ಕಾಪಾಡಿದೆ ಎಂದು ಹೇಳಿದರು.

ಬಿಜೆಪಿಯು ನಮ್ಮದೇ ಪಂಗಡದ ದ್ರೌಪತಿ ಮುರ್ಮು ಅವರಿಗೆ ರಾಷ್ಟ್ರಪತಿ ಸ್ಥಾನ ನೀಡಿದೆ. ಪ.ಪಂಗಡಕ್ಕೆ ಪ್ರತ್ಯೇಕ ಪಟ್ಟಿ, ಸಮುದಾಯ ಭವನ  ಸೇರಿದಂತೆ ಅನೇಕ ಸೌಲಭ್ಯವನ್ನು ನಮ್ಮ ಸಮಾಜಕ್ಕೆ ಕಲ್ಪಿಸಿದೆ ಎಂದರು.

ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ್ ಖರ್ಗೆ ನೀಡಿದ್ದ ಹೇಳಿಕೆಯಂತೆ, ಬಿಜೆಪಿಯು 400ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ತಿಳಿಸಿದರು.

ಜಿಲ್ಲೆಯ ಬಿಜೆಪಿಯಲ್ಲಿ ಯಾವುದೇ ಬಣ ರಾಜಕೀಯ ನಡೆಯುತ್ತಿಲ್ಲ ಎಂದು ಸ್ಪಷ್ಟೀಕರಿಸಿದ ಅವರು,  ಇಲ್ಲಿನ ಕುಟುಂಬ ರಾಜಕೀಯಕ್ಕೆ ವಿರಾಮ ನೀಡುವ ಮೂಲಕ ಬರುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸಿ ಎಂದು ಮನವಿ ಮಾಡಿದರು.

ಸಂಸದ ಜಿ.ಎಂ ಸಿದ್ದೇಶ್ವರ ಮಾತನಾಡಿ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಯಲ್ಲಿಯೇ ಬಹುದೊಡ್ಡ ಸಮಾಜ ಇದಾಗಿದೆ. ರಾಜರಾದ ಭರಮಪ್ಪ ನಾಯಕರು 80ಕ್ಕೂ ಹೆಚ್ಚು ಕೆರೆ ನಿರ್ಮಿಸಿದ್ದಾರೆ ಎಂದು ಹೇಳಿದರು.

ನಾಯಕ ಸಮಾಜದ ಶೇ.75ರಷ್ಟು ಜನ  ನಮ್ಮ ಪಕ್ಷವನ್ನು ಬೆಂಬಲಿಸುತ್ತಿದ್ದಾರೆ. ಇದಕ್ಕೆ ಋಣಿಯಾಗಿ ಬಿಜೆಪಿಯೂ ಸಹ ತನ್ನ ಅಧಿಕಾರದಲ್ಲಿ ಎಸ್ಟಿ ನಿಗಮ ಸ್ಥಾಪಿಸಿ, ಸಾಕಷ್ಟು ಅನುದಾನ ಕೊಟ್ಟಿದೆ ಎಂದು ತಿಳಿಸಿದರು.

500 ವರ್ಷದ ಕನಸಾದ ಅಯೋಧ್ಯೆ ರಾಮ ಮಂದಿರ ಲೋಕಾರ್ಪಣೆ ಮಾಡಿದ್ದಾರೆ. ಮತ್ತು ಅಲ್ಲಿನ  ವಿಮಾನ ನಿಲ್ದಾಣಕ್ಕೆ ಮಹರ್ಷಿ ವಾಲ್ಮೀಕಿ ಅವರ ಹೆಸರು ಸೂಚಿಸಿ, ಸಮಾಜಕ್ಕೆ ಗೌರವಿಸಿದ್ದಾರೆ ಎಂದರು.

ಕಳೆದ 10 ವರ್ಷಗಳ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡುವ ಜತೆಗೆ ಗಡಿ ಭದ್ರತೆಗೂ ಹೆಚ್ಚಿನ ಗಮನಹರಿಸಿದ್ದಾರೆ. ಆದ್ದರಿಂದ ಮತ್ತೊಮ್ಮೆ ಮೋದಿ ಅವರನ್ನು ಗೆಲ್ಲಿಸುವ ಮೂಲಕ ದೇಶವನ್ನು ರಕ್ಷಿಸೋಣ ಎಂದು ಹೇಳಿದರು.

ಶಾಸಕ ಬಿ.ಪಿ. ಹರೀಶ್‌ ಮಾತನಾಡಿ, ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಎಸ್ಟಿಗೆ ಮೀಸಲಾಗಿದ್ದ 15 ಕ್ಷೇತ್ರಗಳಲ್ಲಿ ಸೋತಿದ್ದೇವೆ. ಆದ್ದರಿಂದ ಬರುವ ಚುನಾವಣೆಯಲ್ಲಿ ಈ ತಪ್ಪನ್ನು ಸರಿಪಡಿಸಿಕೊಂಡು ಚುನಾವಣಾ ಅಭ್ಯರ್ಥಿಯನ್ನು ಬೆಂಬಲಿಸೋಣ ಎಂದರು.

ವಾಲ್ಮೀಕಿ ಸಮುದಾಯಕ್ಕೆ ಬಿಜೆಪಿಯ ಕೊಡುಗೆಯನ್ನು ಪಿಪಿಟಿಯ ಮೂಲಕ ವಾದಿರಾಜ್ ವಿವರಿಸಿದರು.

ವಿಧಾನ ಪರಿಷತ್‌ ಸದಸ್ಯೆ ಹೇಮಲತಾ ನಾಯ್ಕ್‌, ಮಾಜಿ ಸಚಿವ ಎಸ್.ವಿ ರವೀಂದ್ರ, ಬಿಜೆಪಿ ಜಿಲ್ಲಾಧ್ಯಕ್ಷ ಎನ್. ರಾಜಶೇಖರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧನಂಜಯ್ ಕಡ್ಲೆಬಾಳ್, ಅನಿಲ್ ಕುಮಾರ್ ನಾಯ್ಕ್, ಮಾಜಿ ಶಾಸಕರಾದ ಎಸ್.ವಿ ರಾಮಚಂದ್ರ,
ಮಾಡಾಳ್‌ ವಿರೂಪಾಕ್ಷಪ್ಪ, ಬಸವರಾಜ್ ನಾಯ್ಕ್, ಮಾಜಿ ವಿ.ಮು.ಸಚೇತಕ ವಿವೇಕ್ ಸ್ವಾಮಿ, ರಾಜ್ಯ ಯುವ ಮೋರ್ಚಾದ ಉಪಾಧ್ಯಕ್ಷ ಶ್ಯಾಮ್, ಕಾರ್ಯಕಾರಿಣಿ ಸದಸ್ಯ ಗುಮ್ಮನೂರು ಶ್ರೀನಿವಾಸ್,  ಹನುಮಂತಪ್ಪ, ರಾಜ್ಯ ಬಿಜೆಪಿ ಎಸ್ಟಿ ಮೋರ್ಚಾದ ಉಪಾಧ್ಯಕ್ಷ ಶ್ರೀನಿವಾಸ್ ದಾಸಕರಿಯಪ್ಪ, ಕಾರ್ಯಕಾರಿಣಿ ಸದಸ್ಯ ದುರ್ಗೇಶ್, ಬಿಜೆಪಿ ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಲೋಹಿತ್ ಕುಮಾರ್, ಜಿಪಂ ಮಾಜಿ ಅಧ್ಯಕ್ಷ  ಎಂ. ಲೋಕೇಶಪ್ಪ, ರಾಜ್ಯ ಕೋಶಾಧ್ಯಕ್ಷ ಮಣಿಕಂಠ, ಕೆ.ಬಿ. ಕೊಟ್ರೇಶ್, ಮಂಜುನಾಥ್, ನವೀನ್ ಸೇರಿದಂತೆ ಪ್ರಮುಖರು ಇದ್ದರು.

error: Content is protected !!