ದೃಷ್ಟಿ ಚೋರ – ಗ್ಲಾಕೋಮಾ

ದೃಷ್ಟಿ ಚೋರ – ಗ್ಲಾಕೋಮಾ

ಒಂದು ಸಣ್ಣ ಇಣುಕು ನೋಟ

ಗ್ಲಾಕೋಮಾ – ದೇಹದಲ್ಲಿ ರಕ್ತದೊತ್ತಡ (BP) ಇರುವ ಹಾಗೆ, ಕಣ್ಣಿನಲ್ಲಿಯೂ ಸಹ ಒಂದು ಒತ್ತಡವಿರುತ್ತದೆ. ಅದನ್ನು Intraocular pressure(lOP) ಎಂದು ಕರೆಯುತ್ತೇವೆ. ಸರಿಯಾದ (IOP) ನಮ್ಮ ಕಣ್ಣಿನ ಆರೋಗ್ಯ ಹಾಗೂ ಆಕಾರಕ್ಕೆ ಬಹಳ ಮುಖ್ಯ. (IOP) ಒಂದು ಮಿತಿಯನ್ನು ಮೀರಿ ಏರಿದಾಗ,ಕಣ್ಣಿನ ನರದ (Optic nerve) ಶಕ್ತಿಯನ್ನು ಕುಂದಿಸುತ್ತದೆ. ಈ ಸ್ಥಿತಿಯನ್ನು ಗ್ಲಾಕೋಮಾ ಎಂದು ಕರೆಯುತ್ತೇವೆ.

ಈ ಕಾಯಿಲೆ ಯಾರಲ್ಲಿ ಸಾಮಾನ್ಯವಾಗಿ ಕಂಡು ಬರುತ್ತದೆ?

ಗ್ಲಾಕೋಮಾ ಹುಟ್ಟಿದ ಮಗುವಿನಿಂದ ಹಿಡಿದು 70-80ರ ವಯಸ್ಕರ ತನಕ ಕಾಣಬಹುದು. ಸಾಮಾನ್ಯವಾಗಿ 40 ದಾಟಿದವರಲ್ಲಿ ಈ ಕಾಯಿಲೆಯನ್ನು ಹೆಚ್ಚಾಗಿ ಕಾಣಲಾಗುತ್ತದೆ.

ಈ ಕಾಯಿಲೆಯ ಲಕ್ಷಣಗಳೇನು?

ಈ ಕಾಯಿಲೆಯಲ್ಲಿ ವಿವಿಧ ರೀತಿಗಳಿವೆ. ಸೂಕ್ಷ್ಮವಾಗಿ ಗಮನಿಸಿದ್ದಲ್ಲಿ ನೀವು ಕಾಣಬಹುದಾದ

ಲಕ್ಷಣಗಳು : ಪದೇ ಪದೇ ಕನ್ನಡಕದ ನಂಬರ್ ಬದಲಾವಣೆಗೊಳ್ಳುವುದು

ಓದುವುದು, ಮೆಟ್ಟಿಲು ಇಳಿಯುವಾಗ, ವಾಹನ ಚಾಲನೆ ಮಾಡುವಾಗ ತೊಡಕುಗಳುಂಟಾಗುವುದು ಕಣ್ಣಿನ ಒತ್ತಡ(IOP) ಹಠಾತ್ ಏರಿಕೆಯಾದಾಗ ತಲೆನೋವು, ಉಬ್ಬಳಿಕೆ, ವಾಂತಿ, ಕಣ್ಣುನೋವು, ಕಣ್ಣು ಕೆಂಪಾಗುವುದು ಕಾಣಬಹುದು.

ಕಾಯಿಲೆ ಬಹಳ ಮುಂದುವರೆದಾಗ ನಿತ್ಯ ಕೆಲಸಗಳಿಗೆ ಅವಲಂಬಿತವಾಗಬೇಕಾಗಬಹುದು ಹಾಗೂ ಕುರುಡುತನಕ್ಕೆ ಕಾರಣವಾಗಬಹುದು.

ಈ ಕಾಯಿಲೆಯ ಬಗ್ಗೆ ಯಾರು ಹೆಚ್ಚು ಜಾಗರೂಕರಾಗಿರಬೇಕು?

40 ವರ್ಷ ಮೇಲ್ಪಟ್ಟವರು,  ಸಕ್ಕರೆ ಕಾಯಿಲೆ, ಅಧಿಕ, ಪ್ಲಸ್ ಅಥವಾ ಅಧಿಕ ಮೈನಸ್ ನಂಬರ್ ಕನ್ನಡಕ ಧರಿಸುವವರು, ಕಣ್ಣಿಗೆ ಯಾವುದೇ ರೀತಿಯ ಶಸ್ತ್ರ ಚಿಕಿತ್ಸೆ ಅಥವಾ ಪೆಟ್ಟು ಮಾಡಿಕೊಂಡವರು, ಕುಟುಂಬದ ಯಾವುದೇ ಸದಸ್ಯರಿಗೆ ಈ ಕಾಯಿಲೆ ಇರುವುದು.

ಈ ಕಾಯಿಲೆ ನನ್ನ ದೃಷ್ಟಿಯ ಮೇಲೆ ಬೀರುವ ಪರಿಣಾಮವೇನು?

ಗ್ಲಾಕೋಮಾ ನಮ್ಮ ಸುತ್ತಲು ದೃಷ್ಟಿಯನ್ನು ನಿಧಾನವಾಗಿ ಮೊಟಕುಗೊಳಿಸುತ್ತ ಬರುತ್ತದೆ. ಕಾಯಿಲೆಯ ಆರಂಭ ಹಂತದಲ್ಲಿ ನಮ್ಮ ನೇರ ಹಾಗೂ ಮಧ್ಯದ ದೃಷ್ಟಿ ಚೆನ್ನಾಗಿರುವುದರಿಂದ ನಮಗೆ ಈ ಕಾಯಿಲೆಯ ಬಗ್ಗೆ ಸುಳಿವಿರುವುದಿಲ್ಲ. ನಿತ್ಯ ಕಾರ್ಯಗಳಲ್ಲಿ ಸಣ್ಣ ಮಟ್ಟದ ತೊಡಕುಗಳಾದಾಗ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳಬೇಕು.

ನಾನು ಮಾಡಬೇಕಾದದ್ದೇನು?

ನಿಯಮಿತ ಕಣ್ಣಿನ ತಪಾಸಣೆ, ವೈದ್ಯರು ನಿಮ್ಮ ಕಣ್ಣಿನ ಒಳ ಒತ್ತಡ (IOP), ಪಾರದರ್ಶಕ ಪಟಲದ (Cornea) ದಪ್ಪ, ಕಣ್ಣಿನೊಳಗಿನ ದ್ರವದ ಹೊರಹೋಗುವಿಕೆಯ ಮಾಪನೆ (Gonioscopy), ಕಣ್ಣಿನ ನರದ ತಪಾಸಣೆ (Optic nerve examination) ಮಾಡುತ್ತಾರೆ. – ಅನುಮಾನವಿದ್ದಲ್ಲಿ ಕೆಲವು ಉಪಕರಣಗಳಿಂದ ಕಣ್ಣಿನ ನರದ ದೌರ್ಬಲ್ಯವನ್ನು ಪ್ರಮಾಣೀಕರಿಸುತ್ತಾರೆ.

ಈ ಕಾಯಿಲೆಗೆ ಚಿಕಿತ್ಸೆ ಏನು?

ಗ್ಲಾಕೋಮಾದಿಂದ ಹೋದ ದೃಷ್ಟಿಯನ್ನು ಮರು ಸೃಷ್ಟಿಸಲು ಸಾಧ್ಯವಿಲ್ಲ. ಇರುವುದನ್ನು ಉಳಿಸುವುದಷ್ಟೇ ವೈದ್ಯರ ಕೈಯಲ್ಲಿರುವುದು.

ಚಿಕಿತ್ಸೆಯ ಉದ್ದೇಶ, ಕಣ್ಣಿನ ಒತ್ತಡವನ್ನು (OP) ಕಣ್ಣಿನ ದೌರ್ಬಲ್ಯಕ್ಕನುಗುಣವಾಗಿ ನಿಯಂತ್ರಣದಲ್ಲಿಡುವುದು.

ಬಹಳಷ್ಟು ಬಾರಿ ಇದು Eye drops ರೂಪದಲ್ಲಿರುತ್ತದೆ. ಈ ರೋಗ ಜೀವನ ಪರ್ಯಂತ ಇರುವುದರಿಂದ Eye drops ಬಳಕೆ ಸಹ ಜೀವನ ಪರ್ಯಂತ.

Eye drops ಮೂಲಕ (IOP) ನಿಯಂತ್ರಣಕ್ಕೆ ಬಾರದಿದ್ದಲ್ಲಿ, ಶಸ್ತ್ರ ಚಿಕಿತ್ಸೆಯ ಮೂಲಕ ಸಂಭಾಳಿಸಬೇಕಾಗುತ್ತದೆ. ವೈದ್ಯರ ಸಲಹೆಯ ಮೇರೆಗೆ ನಿಯಮಿತವಾಗಿ ಕಾಲ ಕಾಲಕ್ಕೆ ಕಣ್ಣಿನ ತಪಾಸಣೆ ಮಾಡಿಸುವುದು ಬಹಳ ಅವಶ್ಯಕ.

`ಗ್ಲಾಕೋಮಾ ಮುಕ್ತ ಪ್ರಪಂಚಕ್ಕಾಗಿ ಒಗ್ಗೂಡುವಿಕೆ’ 2024 ವರ್ಷದ ವಿಷಯವಾಗಿರುವುದರಿಂದ ನಿಮ್ಮ ಜಾಗರೂಕತೆ, ಜವಾಬ್ದಾರಿ ಈ ನಿಟ್ಟಿನಲ್ಲಿ ಬಹಳ ಮುಖ್ಯ.

  • ಗ್ಲಾಕೋಮಾದಿಂದ ಹೋದ ದೃಷ್ಟಿ ಮರಳಿ ಬರುವುದಿಲ್ಲ
  • ಚಿಕಿತ್ಸೆಯಿಂದ ಇರುವ ದೃಷ್ಟಿಯನ್ನಷ್ಟೇ ಉಳಿಸಲು ಸಾಧ್ಯ.
  • ನಿಯಮಿತ ಕಣ್ಣಿನ ತಪಾಸಣೆ ಬಹು ಮುಖ್ಯ.
  • ಜಾಗರೂಕರಾಗಿರದೆ ಕೊನೆಯ ಹಂತದಲ್ಲಿ ಬಂದು ಅಸಹಾಯಕರಾಗಿರುವ ರೋಗಿಗಳನ್ನು ಬಹಳಷ್ಟು ನೋಡಿದ್ದೇವೆ.

ದೃಷ್ಟಿ ಚೋರ - ಗ್ಲಾಕೋಮಾ - Janathavani– ಡಾ. ರಶ್ಮಿ ಮರಳಹಳ್ಳಿ, ದೃಷ್ಟಿ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ,  ದಾವಣಗೆರೆ.

error: Content is protected !!