ಸಮತೆ ಸಾರಿದ ಗುರು ಕೊಟ್ಟೂರೇಶ್ವರರು

ಸಮತೆ ಸಾರಿದ ಗುರು ಕೊಟ್ಟೂರೇಶ್ವರರು

ಭಾರತ ಪುಣ್ಯ ಭೂಮಿ. ಇಲ್ಲಿ ಅನೇಕ ವ್ಯಕ್ತಿಗಳು ಜನಿಸಿ, ತಮ್ಮ ಸಮಾಜ ಮುಖಿ ಕಾರ್ಯಗಳಿಂದ ಜನರ ಮಾನಸದಲ್ಲಿ ಅಳಿಯದೇ ಉಳಿದು ಮಹಾತ್ಮರಾಗಿದ್ದಾರೆ,  ಪುಣ್ಯ ಪುರುಷರಾಗಿದ್ದಾರೆ. ಕಾಲಾನಂತರ ಜನರ ಭಕ್ತಿಯ ಪ್ರತೀಕವಾಗಿ ಅವತಾರ ಪುರುಷರಾಗಿ ಅಜರಾಮರರಾಗಿ ಉಳಿದಿದ್ದಾರೆ.  ಇಂತಹ ಅವತಾರ ಪುರುಷರಲ್ಲಿ ಪಂಚಗಣಾಧೀಶ್ವರಲ್ಲಿ ಒಬ್ಬರಾದ ಶ್ರೀ ಕೊಟ್ಟೂರೇಶ್ವರ ಸ್ವಾಮಿಯೂ ಸಹಾ ಒಬ್ಬರು.

ವ್ಯಕ್ತಿ ತನಗಾಗಿ, ತನ್ನ ಕುಟುಂಬಕ್ಕಾಗಿ, ಸ್ವಾರ್ಥಕ್ಕಾಗಿ ಬದುಕಿದರೆ ಅವನಿಗೆ ಅದೇ ಜನ್ಮ ಕೊನೆ.  ಕೆಲವರು ಜೀವಂತವಾಗಿದ್ದಾಗಲೇ ಜನರ ದೃಷ್ಟಿಯಿಂದ ಸತ್ತಂತೆ ಇರುತ್ತಾರೆ.  ಆದರೆ ಪರರಿಗಾಗಿ, ಪರರ ನೋವಿಗಾಗಿ, ನೊಂದವರ ನೋವಿನ ಕಣ್ಣೀರನ್ನು ಒರೆಸಲು ಪ್ರಯತ್ನಿಸಿದ ವ್ಯಕ್ತಿ ಅಜರಾಮರರಾಗಿ ಅಳಿಯದೇ ಉಳಿದುಬಿಡುತ್ತಾರೆ.  ಅವರು ದೈಹಿಕವಾಗಿ ಇಲ್ಲವಾದರೂ ಅವರ ಹೆಸರು ಜನರ ಉಸಿರು ಉಸಿರಿನಲ್ಲೂ ಅಳಿಯದೇ ಚಿರಸ್ತಾಯಿಯಾಗಿಬಿಡುತ್ತದೆ. 

ಪಂಚಗಣಾಧೀಶ್ವರರಲ್ಲಿ ಒಬ್ಬರಾದ ಕೊಟ್ಟೂರೇಶ್ವರರು ಕಷ್ಟದಲ್ಲಿರುವ ವ್ಯಕ್ತಿಗಳಿಗೆ ಸ್ಪಂದಿಸಿ, ಅವರ ನೋವನ್ನು ನಿವಾರಿಸಲು ಶ್ರಮಿಸಿದ ಮಹಾತ್ಮ.  ಇವರು ಜಾತಿಗೆ ಅಂಟಿಕೊಳ್ಳದೇ ಜೀವ ಪ್ರೀತಿಗೆ ಅಂಟಿಕೊಂಡು ಮನಜರೆಲ್ಲರನ್ನೂ ಪ್ರೀತಿ ಯಿಂದ ಅಪ್ಪಿಕೊಂಡಿದ್ದಾರೆ. ತಪ್ಪು ಮಾಡಿದ ವ್ಯಕ್ತಿ ಗಳನ್ನು ದಂಡನೆಗೆ ಗುರಿ ಮಾಡಿ ಶಿಕ್ಷಿಸದೇ, ಅವರನ್ನು ತಪ್ಪಿನ ಅರಿವಿನ ಬೆಳಕನ್ನು ನೀಡಿ ಉದ್ದರಿಸಿದ್ದಾರೆ.  ಇಂತವರಲ್ಲಿ ಮುಸ್ಲಿಂ ದೊರೆಯಾದ ಅಕ್ಬರ್‌ ಮಹಾ ರಾಜನು ಇವರ ಶಕ್ತಿಗೆ ಮಣಿದು ಮಣಿಮಂಚವನ್ನು ನೀಡಿದ್ದಾನೆ.  ಅದು ಇಂದಿಗೂ ಗಚ್ಚಿನ ಮಠದಲ್ಲಿ ವಿರಾಜಮಾನವಾಗಿ ಉಳಿದಿದೆ.  ಸಮಾಜದಿಂದ ನಿರ್ಲಕ್ಷ್ಯಕ್ಕೆ ಒಳಗಾಗಿ ಕುಷ್ಟರೋಗದಿಂದ ಬಳಲು ತ್ತಿರುವ ವ್ಯಕ್ತಿಯನ್ನು ಪ್ರೀತಿಯಿಂದ ಉಪಚರಿಸಿದ ಇವರ ಮಾತೃವಾತ್ಸಲ್ಯ ಮರೆಯುವಂತಿಲ್ಲ. 

ಸಮತೆ ಸಾರಿದ ಗುರು ಕೊಟ್ಟೂರೇಶ್ವರರು - Janathavani

ಈಗಿನ ಕೊಟ್ಟೂರಿಗೆ ಮೊದಲಿದ್ದ ಹೆಸರು ಶಿಖಾಪುರ.  ಶ್ರೀ ಕೊಟ್ಟೂರೇಶ್ವರರು ಶಿಖಾಪುರದಲ್ಲಿ ನೆಲೆಸಿ ಜನರು ಬೇಡಿದ ವರಗಳನ್ನು ಕೊಡುವ ಊರು ಕೊಟ್ಟೂರು ಆಗಿದೆ ಎನ್ನುತ್ತಾರೆ. ಶ್ರೀ ಕೊಟ್ಟೂರೇಶ್ವರ ಸ್ವಾಮಿಯು ಊರೂರು ಸಂಚರಿಸುತ್ತಾ, ಶಿಖಾಪುರಕ್ಕೆ ಬಂದಾಗ ರಾತ್ರಿ ಸಮಯವಾದ್ದರಿಂದ ಆಗ ಶಿಖಾಪುರದಲ್ಲಿ ನೆಲೆಸಿದ್ದ ಶ್ರೀ ವೀರಭದ್ರೇಶ್ವರ ಸ್ವಾಮಿಯ ಬಳಿ ಬಂದು ತಂಗಲು ಸ್ವಲ್ಪ ಸ್ಥಳವನ್ನು ಕೇಳಲಾಗಿ, ಶ್ರೀ ವೀರಭದ್ರೇಶ್ವರರು ತಮ್ಮ ಆಸ್ಥಾನದಲ್ಲಿ ಮಲಗಲು ಸ್ಥಳವನ್ನು ನೀಡುತ್ತಾರೆ. ಬೆಳಗಾಗುವ ಹೊತ್ತಿಗೆ ಸಂಪೂರ್ಣವಾಗಿ ಆಸ್ಥಾನವನ್ನು ಆವರಿಸಿ, ನನಗೆ ಸ್ಥಳ ವಿಲ್ಲದಾಗಿದೆ ಎಂದು ಶ್ರೀ ವೀರಭದ್ರ ಸ್ವಾಮಿ ಕೊಟ್ಟೂರೇಶ್ವರ ಸ್ವಾಮಿಯನ್ನು ಕೇಳಲಾಗಿ,  ನಿನ್ನ ಸ್ಥಳವನ್ನು ನನಗೆ ಕೊಡು, ನೀನು ಕೊಡದಗುಡ್ಡಕ್ಕೆ ಹೋಗಿ ನೆಲೆಸು ಹಾಗು ಆ ಸ್ಥಳವನ್ನು ಯಾರಿಗೂ ಕೊಡಬಾರದು.  ಆ ಕ್ಷೇತ್ರವು ಕೊಡದಗುಡ್ಡ ಎಂದು ಪ್ರಖ್ಯಾತವಾಗುತ್ತದೆ.  ನೀನು ನನಗೆ ಸ್ಥಳ ಕೊಟ್ಟ ಕಾರಣ ಈ ಶಿಖಾಪುರ ಮುಂದೆ ಕೊಟ್ಟೂರು ಎಂದು ಪ್ರಖ್ಯಾತವಾಗಲಿ ಎಂದು ಹರಿಸಿದರಂತೆ. ಅಂದಿನಿಂದ ಶಿಖಾಪುರ ಕೊಟ್ಟೂರಾಗಿ ಪ್ರಖ್ಯಾತವಾಗಿದೆ. 

ಶ್ರೀ ಕೊಟ್ಟೂರೇಶ್ವರರು ಜನರ ನೋವುಗಳಿಗೆ, ದು:ಖಗಳಿಗೆ, ಕಷ್ಟಗಳಿಗೆ ಸ್ಪಂದಿಸಿ ಅವರಿಗೆ ಸಹಾಯ ಹಸ್ತವನ್ನು ನೀಡಿ ಅವರ ಭಯವನ್ನು ನಿವಾರಿಸಿ ಅಭಯವನ್ನು ನೀಡುತ್ತಾ, ಸನ್ಮಾರ್ಗದಲ್ಲಿ ನಡೆಯುವಂತೆ ಜನರಿಗೆ ಧರ್ಮ ಮಾರ್ಗವನ್ನು ತೋರಿಸಿದ್ದರಿಂದ ಜನರ ಮನದಲ್ಲಿ ಅವರು ಶಾಶ್ವತವಾಗಿ ಉಳಿದಿದ್ದಾರೆ.  ಜನರಲ್ಲಿ ಭೇದವನ್ನು ಎಣಿಸದೇ ಎಲ್ಲರನ್ನೂ ಪ್ರೀತಿಯಿಂದ ನೋಡುತ್ತಾ, ಅವರ ಇಷ್ಟಾರ್ಥಗಳನ್ನು ಈಡೇರಿಸುತ್ತಾ ಬಂದಿದ್ದರಿಂದ ಕಾಲಾನಂತರ ಜನರು ಅವರಿಗೆ ಭಕ್ತಿಭಾವದಿಂದ ಕೃತಜ್ಞತೆಯನ್ನು ಅರ್ಪಿಸುತ್ತಾ ಬಂದು, ಮುಂದೆ ಪವಾಡ ಪುರುಷರಾಗಿ ಶಾಶ್ವತವಾಗಿ ಉಳಿದಿದ್ದಾರೆ.  ಇಂತಹ ಮಹಾಮಹಿಮರ ಜಾತ್ರಾ ಮಹೋತ್ಸವಕ್ಕೆ ನೂರಾರು ಕಿ.ಮೀ. ದೂರದ ಊರುಗಳಿಂದ ಸುಡು ಬಿಸಿಲನ್ನೂ ಲೆಕ್ಕಿಸದೇ ಜನರು ಪಾದಯಾತ್ರೆಯ ಮೂಲಕ ದೇಹವನ್ನು ದಂಡಿಸುತ್ತಾ, ಹರ್ಷದಿಂದ ತಮ್ಮ ಭಕ್ತಿಯ ಸೇವೆಯನ್ನು ಅರ್ಪಿಸುತ್ತಿದ್ದಾರೆ.  ಕೊರೊನಾ ನಿಮಿತ್ಯ ಪಾದಯಾತ್ರಿಗಳಿಗೆ ಕ್ಷೇತ್ರಕ್ಕೆ ಬಾರದಂತೆ ಸಾಕಷ್ಟು ಪ್ರಚಾರ ನೀಡಿದ್ದರೂ ಸಹಾ ಭಕ್ತಿಯಲ್ಲಿ ಮಿಂದೆದ್ದ ಜನ ಪ್ರತಿವರ್ಷ ಬರುವುದಾಗಿ ಹರಕೆ ಹೊತ್ತಿದ್ದೇವೆ, ಬಾರದೇ ಇದ್ದರೆ ಹರಕೆ ಅಪೂರ್ಣವಾಗುತ್ತದೆ ಎನ್ನುವ ಕಾರಣಕ್ಕೆ ಬಂದಿದ್ದೇವೆ ಎಂದು ಪಾದಯಾತ್ರಿಗಳು ಹೇಳುವುದನ್ನು ನೋಡಿದರೆ ಭಕ್ತರಲ್ಲಿ ಭಕ್ತಿಗೆ ಬರ ಇಲ್ಲವೆಂಬಂತೆ ಪಾದ ಯಾತ್ರೆಯ ಮೂಲಕ ಆಗಮಿಸುತ್ತಿರು ವುದು, ದಾರಿಯ ಉದ್ದಗಲಕ್ಕೂ ಪ್ರತಿಯೊಂದು ಊರುಗಳಲ್ಲಿ ಅವರಿಗೆ ಪ್ರಸಾದ, ಕುಡಿಯುವ ನೀರು, ಎಳೆನೀರು, ಮಜ್ಜಿಗೆ, ಹಣ್ಣು ಹಂಪಲು ನೀಡಿ ಸತ್ಕರಿಸುವುದು ನಾಡಿನ ಸಂಸ್ಕೃತಿಯನ್ನು ತೋರಿಸುತ್ತಿದೆ.  ದಣಿದ ಭಕ್ತರಿಗೆ, ಸಂಕಷ್ಟದಲ್ಲಿರುವ ಜನರಿಗೆ ಶ್ರೀ ಕೊಟ್ಟೂರೇಶ್ವರರು ಮುಂದಿನ ದಿನಗಳಲ್ಲಿ ಸಕಾಲದಲ್ಲಿ ಮಳೆ ಬೆಳೆಯನ್ನು ನೀಡಿ, ಕೊರೊನಾ ಸಂಕಷ್ಟವನ್ನು ಪರಿಹರಿಸಲಿ ಎಂದು ಭಿನ್ನವಿಸುತ್ತೇನೆ.

ಹೆತ್ತ ತಾಯಿಯನ್ನು ಮನೆಯಲ್ಲಿ ಬಿಟ್ಟು ಹೋಗುವ, ಇಲ್ಲವೇ ವೃದ್ದಾಶ್ರಮಕ್ಕೆ ದೂಡುವ ಇಂದಿನ ನಾವೆಲ್ಲಿ, ಮಕ್ಕಳಿಲ್ಲೆಂದು ಕೊರಗುತ್ತಿದ್ದ ನೆಂಬಕ್ಕನಿಗೆ ಸ್ವತ: ಮಗನಾಗಿ, ಮಕ್ಕಳಿಲ್ಲ ಎನ್ನುವ ನೋವನ್ನೂ ನೀಗಿಸಿ ಆ ತಾಯಿಯ ಮುಖದಲ್ಲಿ ಸಂತೋಷವನ್ನು ತಂದ ಕೊಟ್ಟೂರೇಶ್ವರರು ಶ್ರೇಷ್ಠರಾಗುತ್ತಾರೆ.

ಸಂತರು, ಶರಣರು ಈ ಲೋಕದ ಕಣ್ಣಿಗೆ ಹುಚ್ಚರಂತೆ ಕಾಣುತ್ತಿರುತ್ತಾರೆ.  ಏಕೆಂದರೆ ಅವರು ಅಂತರ್ಮುಖಿಗಳಾಗಿ ಚಿಂತಿಸುತ್ತಾ, ಲೋಕದ ನೋವನ್ನು ಕಳೆಯುತ್ತಿರುತ್ತಾರೆ.  ಅದೇ ರೀತಿ 

ಶ್ರೀ ಕೊಟ್ಟೂರೇಶ್ವರರು ಸಹಾ ಜನರ ದೃಷ್ಟಿಯಲ್ಲಿ ಹುಚ್ಚರಂತೆ ಕಂಡುಬಂದು, ಜನರಲ್ಲಿನ ಮೋಹದ, ಲೋಭದ, ಕಾಮದ ಹುಚ್ಚನ್ನು ಬಿಡಿಸುವ ವೈದ್ಯರಾಗಿ ಕಂಗೊಳಿಸಿದ್ದಾರೆ. 

ಭಕ್ತರು ಭಕ್ತಿಯ ಭರದಲ್ಲಿ ಕೊರೊನಾ ರೋಗದ ಬಗ್ಗೆ ಮರೆಯಬಾರದು.  ಅದು ತಂದು ಒಡ್ಡಿದ ಸಾವು-ನೋವಿನ ದಿನಗಳ ಬಗ್ಗೆ ಮೈಮರೆತು ಎಚ್ಚರ ತಪ್ಪಿದರೆ ಅಪಾಯ ಕಟ್ಟಿಟ್ಟ ಬುತ್ತಿ.  ಆದ್ದರಿಂದ ಭಕ್ತರು ಈ ಬಗ್ಗೆ ಅಗತ್ಯ ಎಚ್ಚರಿಕೆಯನ್ನು ಕೈಗೊಂಡು ಸಹಕರಿಸಬೇಕೆಂಬುದೇ ನಮ್ಮ ಮನವಿ.


– ಸಿ.ಮ. ಗುರುಬಸವರಾಜ,  ಹವ್ಯಾಸಿ ಬರಹಗಾರರು

error: Content is protected !!