ಮಂಗನಬಾವು… ಏನಿದು ?

ಮಂಗನಬಾವು… ಏನಿದು ?

ಇದು ಲಾಲಾರಸ ಗ್ರಂಥಿಗಳಾದ ಪರೋಟಿಡ್, ಸಬ್ ಮಂಡಿಬುಲಾರ್ ಮತ್ತು ಸಬ್ ಮೆಂಟಲ್ ಗ್ರಂಥಿಗಳ ಕಾಯಿಲೆ. ಇದು ಹಲವಾರು ವೈರಸ್ ಮತ್ತು ಬ್ಯಾಕ್ಟೀರಿಯಾಗಳಿಂದ ಹರಡುವುದಾದರೂ ಅತೀ ಸಾಮಾನ್ಯವಾಗಿ ಮಂಪ್ಸ್ ಎಂಬ ವೈರಸ್‌ನಿಂದ ಹರಡುತ್ತದೆ.

ರೋಗ ಲಕ್ಷಣಗಳು  ಮತ್ತು ಚಿಕಿತ್ಸಾ ವಿಧಾನ : ಕಿವಿಯ ಮುಂಭಾಗದಲ್ಲಿ ಇಲ್ಲವೇ ದವಡೆಯ ಕೆಳಭಾಗದಲ್ಲಿ ಊತ, ನೋವು ಕಾಣಿಸಿಕೊಳ್ಳುವುದು, ಜ್ವರ, ಗಂಟಲು ನೋವು, ವಾಂತಿ ಇವು ಇತರೇ ಲಕ್ಷಣಗಳು. ಅನೇಕರಲ್ಲಿ 3-5 ದಿನಗಳಲ್ಲಿ ರೋಗ ಲಕ್ಷಣಗಳು ಹತೋಟಿಗೆ ಬಂದು ಸಂಪೂರ್ಣವಾಗಿ ಚೇತರಿಸಿಕೊಳ್ಳುತ್ತಾರೆ.

ನೋವು, ಜ್ವರದ ಚಿಕಿತ್ಸೆಗೆ ಮಕ್ಕಳಿಗೆ ಪ್ಯಾರಾಸಿಟಮಾಲ್ ಔಷಧಿಯ ಬಳಕೆ ಸೂಕ್ತ. ಆಹಾರದ ಪಥ್ಯದ ಅವಶ್ಯಕತೆ ಇರುವುದಿಲ್ಲ. ಸರಳ ಮನೆ ಆಹಾರದ ಜೊತೆಗೆ ಯಥೇಚ್ಚವಾಗಿ ನೀರು, ಎಳನೀರು, ನಿಂಬೆ ಪಾನಕ, ಓಆರ್‌ಎಸ್, ಮಜ್ಜಿಗೆ ಮುಂತಾದ ದ್ರವಣಗಳನ್ನು ಕೊಡುವುದು ಸೂಕ್ತ.

ವಾಂತಿಯ ನಿಯಂತ್ರಣಕ್ಕೆ ಔಷಧಿ ಪಡೆಯಬಹುದು. ಕೆಲವು ಮಕ್ಕಳಲ್ಲಿ ರೋಗ ಉಲ್ಬಣವಾದಾಗ ವೈದ್ಯರ ಸಲಹೆ ಪಡೆದು ಆಸ್ಪತ್ರೆಗೆ ದಾಖಲಿಸಿ. ಅತಿಯಾದ ವಾಂತಿ, ಹೊಟ್ಟೆನೋವು, ತಲೆನೋವು, ನಿದ್ದೆ ಮಬ್ಬು, ನಿಶ್ಯಕ್ತಿಯ ಲಕ್ಷಣಗಳು ಕಂಡು ಬಂದಲ್ಲಿ ತುರ್ತು ಚಿಕಿತ್ಸೆಯ ಅವಶ್ಯಕತೆ ಇರುತ್ತದೆ. ಯಾವುದೇ ಆಂಟಿಬಯಾಟಿಕ್ಸ್, ನೋವು ಶಮನ ಲೇಪನಗಳು ಪಟ್ಟುಗಳ ಅವಶ್ಯಕತೆ ಇರುವುದಿಲ್ಲ. ಮೂಢನಂಬಿಕೆಗಳಿಂದ ಸರಿಯಾದ ಸಮಯಕ್ಕೆ ಸೂಕ್ತ ವೈದ್ಯಕೀಯ ಸಲಹೆ ಪಡೆಯದೇ ಹೋದರೆ ರೋಗ ಉಲ್ಬಣ ಆಗುವ ಸಾಧ್ಯತೆಗಳಿವೆ.

ಮಂಗನಬಾವು ಸಾಂಕ್ರಾಮಿಕವೇ? – ಹೌದು. ಇದು ಒಂದು ಸಾಂಕ್ರಾಮಿಕ ರೋಗ. ಹತ್ತಿರದ ಸಂಪರ್ಕ, ಸೀನುವಿಕೆ, ಕೆಮ್ಮುವಿಕೆಯಿಂದ ವೈರಾಣು ಗಳು ಹರಡುತ್ತವೆ. ಸಾಮಾನ್ಯವಾಗಿ ಶಾಲಾ ಮಕ್ಕಳಲ್ಲಿ ಕಂಡು ಬರುವ ಮಂಗನಬಾವು ಎಲ್ಲಾ ವಯಸ್ಕರಲ್ಲೂ ಆಗುವ ಸಾಧ್ಯತೆ ಇದೆ. ಊತ ಕಾಣಿಸಿಕೊಂಡು 5 ದಿನಗಳವರೆಗೆ ರೋಗ ಹರಡುವ ಸಾಧ್ಯತೆ ಹೆಚ್ಚು. ಆದ್ದರಿಂದ ಪ್ರತ್ಯೇಕತೆಯು ಸೂಕ್ತ. ಶಾಲೆಗೆ ಹೋಗದಿರುವುದು ಒಳ್ಳೆಯದು. ಪರೀಕ್ಷೆಗಳ ಅನಿವಾರ್ಯತೆ ಇದ್ದಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಶಾಲಾ ಸಿಬ್ಬಂದಿಯೊಂದಿಗೆ ಚರ್ಚಿಸಬೇಕು.

ದೂರದರ್ಶನದಲ್ಲಿ ಮಂಗಬಾವಿನಿಂದ ಸಾವುಂಟಾದ ಬಗ್ಗೆ ಕೇಳಿ ಬಂದಿದೆ ಇದು ನಿಜವೇ? – ಸಾಮಾನ್ಯವಾಗಿ ಮಕ್ಕಳಲ್ಲಿ ಮಂಗನಬಾವು ಯಾವುದೇ ದುಷ್ಪರಿಣಾಮಗಳನ್ನುಂಟು ಮಾಡುವುದಿಲ್ಲ. 5-7 ದಿನಗಳಲ್ಲಿ ಸಂಪೂರ್ಣವಾಗಿ ಚೇತರಿಸಿಕೊಳ್ಳುತ್ತಾರೆ.

ಕೆಲವು ಮಕ್ಕಳಲ್ಲಿ ಮೆದೋಜೀರಕ ಗ್ರಂಥಿಯ ಊತ ಕಾಣಿಸಿಕೊಳ್ಳಬಹುದು. ವಾಂತಿ ಮತ್ತು ಅತಿಯಾದ ಹೊಟ್ಟೆ ನೋವು, ಇದರ ಲಕ್ಷಣಗಳು. ಇನ್ನು ಕೆಲವು ಮಕ್ಕಳಲ್ಲಿ ಮೆದುಳು ಜ್ವರ ಆಗಬಹುದು. ಸಕಾಲಕ್ಕೆ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆಯಾದರೆ ಚೇತರಿಕೆಯಾಗುತ್ತದೆ. ಸಾಮಾನ್ಯ ಲಕ್ಷಣಗಳು ಕಂಡಾಗ ಭಯ ಬೇಡಿ. ಅಸಾಮಾನ್ಯ ಲಕ್ಷಣಗಳು ಕಂಡಲ್ಲಿ ಅಲಕ್ಷೆ ಬೇಡ.

ಇದಕ್ಕೆ ಲಸಿಕೆ ಇಲ್ಲವೇ ? – ಖಂಡಿತಾ ಇದೆ. ಎಂ.ಎಂ.ಆರ್. ಲಸಿಕೆಯನ್ನು ಮಕ್ಕಳಲ್ಲಿ 9 ತಿಂಗಳು, 15 ತಿಂಗಳು ಮತ್ತು 5 ವರ್ಷಕ್ಕೆ ಕೊಡಲಾಗುತ್ತದೆ. ಎಂ.ಆರ್. ಲಸಿಕೆ ಪಡೆದಾಗ ಮಂಗನಬಾವಿನಿಂದ ರಕ್ಷಣೆ ಸಿಗುವುದಿಲ್ಲ. 2 ವರ್ಷದ ಮೇಲಿನ ಮಕ್ಕಳು ಮತ್ತು ವಯಸ್ಕರಲ್ಲಿ ಎಂಎಂಆರ್ ಲಸಿಕೆ ದಾಖಲೆ ಇಲ್ಲದಿದ್ದಾಗ 2 ಲಸಿಕೆಗಳನ್ನು 2 ತಿಂಗಳ ಅಂತರದಲ್ಲಿ ಕೊಡಬಹುದು.


– ಡಾ. ಸ್ನೇಹರೂಪಾ ಪೂಜಾರ್, ಪೂಜಾ ಮಕ್ಕಳ ಆಸ್ಪತ್ರೆ, ದಾವಣಗೆರೆ.

error: Content is protected !!