ಮೊದಲ ಚುನಾವಣೆಯೂ… ಮಹಾ ಪ್ರಯೋಗವೂ…

ಮೊದಲ ಚುನಾವಣೆಯೂ… ಮಹಾ ಪ್ರಯೋಗವೂ…

ನವದೆಹಲಿ, ಫೆ. 26 – ಭಾರತದಂತಹ ಬೃಹತ್ ದೇಶದಲ್ಲಿ ಚುನಾವಣೆ ನಡೆಸುವುದು ಬೃಹತ್ ಸವಾಲೇ ಸರಿ. ಆದರೆ, 1951-52ರ ವೇಳೆ ಆಗಷ್ಟೇ ಭಾರತ ವಿಭಜನೆಯಿಂದ ಹೊರ ಬಂದ ಸಂದರ್ಭ, ಬಹುತೇಕ ಮತದಾರರು ಅನಕ್ಷರಸ್ಥರು, ಅದರಲ್ಲೂ ಚುನಾವಣೆಯಲ್ಲಿ ಪಾಲ್ಗೊಂಡು ಅನುಭವವೇ ಇಲ್ಲದಾಗ ಆ ಸವಾಲು ಹತ್ತಾರು ಪಟ್ಟು ಹೆಚ್ಚಾಗಿತ್ತು.

ದೇಶದ ಮೊದಲ ಲೋಕಸಭಾ ಚುನಾವಣೆಯಲ್ಲಿ 17.3 ಕೋಟಿ ಮತದಾರರು ಸೇರಿಕೊಂಡು 1,874 ಅಭ್ಯರ್ಥಿಗಳ ಹಣೇಬರಹ ನಿರ್ಧರಿಸಬೇಕಿತ್ತು. ಆಗಿನ 489 ಲೋಕಸಭಾ ಕ್ಷೇತ್ರಗಳಿಗೆ ಕೇವಲ ಒಂದು ವರ್ಷ ಹಳೆಯ ಚುನಾವಣಾ ಆಯೋಗ ಚುನಾವಣೆ ನಡೆಸಿತ್ತು.

ದುರ್ಗಮ ಪ್ರದೇಶಗಳಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಹಾಗೂ ಧಾರ್ಮಿಕ ಹಿನ್ನೆಲೆಯ ಚುನಾವಣೆಯನ್ನು ಹಲವಾರು ಸಾಗಣೆ ಸಮಸ್ಯೆಗಳ ನಡುವೆ ನಡೆಸುವ ಹೊಣೆ ಚುನಾವಣಾ ಆಯೋಗದ್ದಾಗಿತ್ತು.

1951-52ರಲ್ಲಿ ನಡೆಸಲಾದ ಮೊದಲ ಲೋಕಸಭಾ ಚುನಾವಣೆಯು ಆಗ ವಿಶ್ವದ ಅತಿ ದೊಡ್ಡ ಪ್ರಜಾಸತ್ತಾತ್ಮಕ ಕಸರತ್ತಾಗಿತ್ತು ಎಂದು ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ. ಕುರೇಶಿ ತಿಳಿಸುತ್ತಾರೆ.

ಮೊದಲ ಮುಖ್ಯ ಚುನಾವಣಾ ಆಯುಕ್ತರಾಗಿದ್ದ ಸುಕುಮಾರ್ ಸೇನ್ ಅವರು ಶೂನ್ಯದಿಂದ ಚುನಾವಣಾ ಪ್ರಕ್ರಿಯೆ ಆರಂಭಿಸಿ, ಅತ್ಯುತ್ತಮ ಕಾರ್ಯನಿರ್ವಹಿಸಿದ್ದರು. ಯಾವುದೇ ಅನುಭವ ಇಲ್ಲದೇ, ಯಾವುದೇ ಮೂಲಭೂತ ಸೌಲಭ್ಯ ಇಲ್ಲದೇ ಚುನಾವಣಾ ಕಸರತ್ತು ನಡೆಸುವುದು ಸುಲಭದ ಮಾತಾಗಿರಲಿಲ್ಲ ಎಂದು ಕುರೇಶಿ ಹೇಳುತ್ತಾರೆ.

ಭಾರತ ನಡೆಸಿದ ಚುನಾವಣಾ ಪ್ರಕ್ರಿಯೆಯು ಒಂದು ರೀತಿ ಮಹಾ ಪ್ರಯೋಗವೇ ಆಗಿತ್ತು. ಆ ಸಂದರ್ಭದಲ್ಲಿ ವಾಸ್ತವ ಚುನಾವಣೆ ನಡೆಸುವುದಕ್ಕೆ ಮುಂಚೆ ಅಣಕು ಚುನಾವಣೆಗಳನ್ನೂ ನಡೆಸಲಾಗಿತ್ತು.

ಅಕ್ಟೋಬರ್ 25, 1951ರಲ್ಲಿ ಲೋಕಸಭೆಗೆ ಮೊದಲ ಹಂತದ ಮತದಾನ ಆರಂಭವಾಗಿತ್ತು. ನಾಲ್ಕು ತಿಂಗಳ ಕಾಲ ಚುನಾವಣಾ ಪ್ರಕ್ರಿಯೆ ನಡೆದಿತ್ತು. 17 ದಿನಗಳಲ್ಲಿ ಮತದಾನ ನಡೆಸಲಾಗಿತ್ತು.

ಮೊದಲ ಚುನಾವಣೆಯ ಸಂದರ್ಭದಲ್ಲಿ ತೆಗೆದುಕೊಳ್ಳಲಾದ ಹಲವಾರು ನಿರ್ಧಾರಗಳು ನಂತರದಲ್ಲಿ ಚುನಾವಣಾ ಪ್ರಕ್ರಿಯೆಯ ಅವಿಭಾಜ್ಯ ಅಂಗಗಳಾದವು. ಇದರಲ್ಲಿ ಮತದಾರರ ಬೆರಳಿಗೆ ಅಳಿಸಲಾಗದ ಶಾಯಿ ಅಂಟಿಸುವುದೂ ಸೇರಿದೆ ಎಂದು ದೆಹಲಿಯ ಮಾಜಿ ಮುಖ್ಯ ಚುನಾವಣಾ ಅಧಿಕಾರಿ ಚಂದ್ರ ಭೂಷಣ್  ಕುಮಾರ್ ಹೇಳಿದ್ದಾರೆ.

ಮೊದಲಿನ ಚುನಾವಣೆಯಲ್ಲಿ ಪ್ರತಿಯೊಬ್ಬ ಅಭ್ಯರ್ಥಿಗೂ ಪ್ರತ್ಯೇಕ ಮತಪೆಟ್ಟಿಗೆಗಳನ್ನು ಇರಿಸಲಾಗುತ್ತಿತ್ತು. ಈ ಪೆಟ್ಟಿಗೆಗಳಿಗೆ ಬೇರೆ ಬೇರೆ ಬಣ್ಣ ಬಳಿಯಲಾಗುತ್ತಿತ್ತು. ಮತದಾರರು ತಾವು ಬಯಸಿದ ಅಭ್ಯರ್ಥಿಯ ಹೆಸರಿರುವ ಪೆಟ್ಟಿಗೆಗೆ ಮತ ಹಾಕಬೇಕಿತ್ತು.

ಚುನಾವಣೆಗಾಗಿ 1.32 ಲಕ್ಷ ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಹಿಮಾಚಲ ಪ್ರದೇಶದಲ್ಲಿ ಮೊದಲ ಮತದಾನ ನಡೆದಿತ್ತು. ಹಿಮಪಾತ ಆರಂಭವಾಗುವ ಮುಂಚೆ ಮತದಾನ ಪೂರ್ಣಗೊಳಿಸುವ ಸಲುವಾಗಿ ಈ ರಾಜ್ಯಕ್ಕೆ ಮೊದಲ ಹಂತದಲ್ಲಿ ಚುನಾವಣೆ ನಡೆಸಲಾಗಿತ್ತು.

ರಾಜಸ್ಥಾನದ ಮರು ಭೂಮಿಯಲ್ಲಿ ಚುನಾವಣೆ ನಡೆಸುವುದು ಆಯೋಗಕ್ಕೆ ದೊಡ್ಡ ಸವಾಲಾಗಿತ್ತು. ಇಲ್ಲಿನ ದುರ್ಗಮ ಪ್ರದೇಶಗಳಲ್ಲಿ ರಸ್ತೆಗಳೂ ಇರಲಿಲ್ಲ, ಸಂಪರ್ಕ ಸೌಲಭ್ಯವೂ ಇರಲಿಲ್ಲ.

ಜೋಧಪುರ, ಜೈಸಲ್ಮಾರ್ ಮುಂತಾದ ಕಡೆಗಳಲ್ಲಿ ಮತಗಟ್ಟೆ ಸಿಬ್ಬಂದಿಯನ್ನು ಒಂಟೆಯ ಮೇಲೆ ಕರೆ ತರಲಾಗಿತ್ತು. ದೊಡ್ಡ ಸಂಖ್ಯೆಯಲ್ಲಿ ಒಂಟೆಗಳನ್ನು ಬಾಡಿಗೆಗೆ ಪಡೆಯಲಾಗಿತ್ತು. ಮತಗಟ್ಟೆ ಸಿಬ್ಬಂದಿ ತೆರಳುವುದೂ ಒಂದು ರೀತಿ ಮೆರವಣಿಗೆಯಂತೆ ಕಾಣುತ್ತಿತ್ತು.

ಸಾರ್ವಜನಿಕ ಕಟ್ಟಡಗಳು ಲಭ್ಯವಿಲ್ಲದ ಕಡೆಗಳಲ್ಲಿ ಅಂಚೆ ಕಚೇರಿಗಳು ಹಾಗೂ ಖಾಸಗಿ ಕಟ್ಟಡಗಳನ್ನೂ ಮತದಾನಕ್ಕೆ ಬಳಸಲಾಗಿತ್ತು.

ಮೊದಲ ಚುನಾವಣೆ ಕೆಟ್ಟ ಅನುಭವ ಎಂದೇ ಹಲವಾರು ವಿದೇಶಿ ಟೀಕಾಕಾರರು ಹೇಳಿದ್ದರು. ಆ ಸಮಯದಲ್ಲಿ ದೇಶದಲ್ಲಿ ಶೇ.84ರಷ್ಟು ಜನರು ಅನಕ್ಷರಸ್ಥರಾಗಿದ್ದರು. ಚುನಾವಣೆ ವಿಫಲವಾಗಲಿದೆ ಎಂದೇ ಅವರು ಭಾವಿಸಿದ್ದರು ಎಂದು ಮಾಜಿ ಮುಖ್ಯ ಚುನಾವಣಾ ಆಯುಕ್ತ ಕುರೇಶಿ ಹೇಳುತ್ತಾರೆ.

ಅನಕ್ಷರತೆ, ಬಡತನ, ಸಾಮಾಜಿಕ ವಿಭಜನೆ, ಕೋಮು ವಿಭಜನೆಗಳು ಆಗ ಹೆಚ್ಚಾಗಿದ್ದವು. ಈ ಸಂದರ್ಭದಲ್ಲಿ ಮೊದಲ ಚುನಾವಣೆ ನಡೆಸುವುದೇ ತಪ್ಪು ಎಂಬ ಭಾವನೆಯೂ ಅವರಲ್ಲಿತ್ತು.

17.32 ಕೋಟಿ ಮತದಾರರ ಪೈಕಿ 8.86 ಕೋಟಿ ಜನರು ಮೊದಲ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಿದ್ದರು. ಶೇ.51.15ರಷ್ಟು ಮತದಾನವಾಗಿದ್ದು, ಯಾವ ದೃಷ್ಟಿಯಿಂದಲೂ ಕಡಿಮೆಯಲ್ಲ ಎಂದು ಕುರೇಶಿ ಹೇಳುತ್ತಾರೆ.

ಇಷ್ಟು ದೊಡ್ಡ ಪ್ರಮಾಣದ ಚುನಾವಣಾ ಕಸರತ್ತು ಹಿಂದೆಂದೂ ನಡೆಸಿರಲಿಲ್ಲ. ಭಾರತದ ಪ್ರಜಾಪ್ರಭುತ್ವದ ಭವಿಷ್ಯ ಈ ಮೊದಲ ಚುನಾವಣೆ ಮೇಲೆ ಹೆಚ್ಚಾಗಿ ಅವಲಂಬಿಸಿತ್ತು. ಈ ಚುನಾವಣೆಯಲ್ಲಿ ಜನರು ಉತ್ಸಾಹದಿಂದ ಪಾಲ್ಗೊಂಡಿದ್ದು, ಭಾರತದಲ್ಲಿ ಪ್ರಜಾಪ್ರಭುತ್ವ ಬಲಪಡಿಸಲು ದೊಡ್ಡ ಪ್ರಮಾಣದಲ್ಲಿ ನೆರವಾಯಿತು.

error: Content is protected !!