ಇಂದು ಬೃಹತ್ ರೋಡ್‌ ಶೋ ಮೂಲಕ ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ

ಇಂದು ಬೃಹತ್ ರೋಡ್‌ ಶೋ ಮೂಲಕ ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ

ದಾವಣಗೆರೆ, ಏ.18- ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರು ನಾಳೆ ದಿನಾಂಕ 19ರಂದು ನಗರದಲ್ಲಿ  ಬೃಹತ್ ರೋಡ್ ಶೋ ನಡೆಸಿ, ಎರಡನೇ ಬಾರಿ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ  ಎನ್. ರಾಜಶೇಖರ್ ತಿಳಿಸಿದ್ದಾರೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು,  ಬೆಳಿಗ್ಗೆ 9.30ಕ್ಕೆ ಏಕಕಾಲಕ್ಕೆ  ನಗರದ ಮೂರು ಕಡೆಗಳಿಂದ ಮೆರವಣಿಗೆ ಆರಂಭವಾಗಲಿದ್ದು, ಪಕ್ಷದ ರಾಜ್ಯ ನಾಯಕರು ಸಹ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಸಚಿವರಾದ ಮಾಧುಸ್ವಾಮಿ, ಭೈರತಿ ಬಸವರಾಜ್, ಮುರುಗೇಶ್ ನಿರಾಣಿ, ಜನಾರ್ದನ ರೆಡ್ಡಿ, ಬಳ್ಳಾರಿ ಸಂಸದ ದೇವೇಂದ್ರಪ್ಪ,  ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಸೇರಿದಂತೆ,   ಪ್ರಮುಖ ನಾಯಕರು ರೋಡ್ ಶೋನಲ್ಲಿ ಭಾಗವಹಿಸಲಿದ್ದಾರೆ.

ಒಂದು ಮೆರವಣಿಗೆ ಹಳೆಪೇಟೆಯ ದುಗ್ಗಮ್ಮ ದೇವಸ್ಥಾನದಿಂದ ಆರಂಭವಾಗಲಿದೆ. ಮೆರವಣಿಗೆಯು ಎಸ್.ಕೆ.ಪಿ. ರಸ್ತೆ, ಕಾಯಿಪೇಟೆ, ಗಡಿಯಾರ ಕಂಬ, ಕೆಳಸೇತುವೆ ಮೂಲಕ ಮಹಾನಗರ ಪಾಲಿಕೆ, ಗಾಂಧಿ ವೃತ್ತದ ಮೂಲಕ ವಾಣಿಹೊಂಡಾ ಶೋ ರೂಂ ಬಳಿ ಆಗಮಿಸಲಿದೆ. ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ, ಮಾಜಿ ಸಚಿವ ಕರುಣಾಕರ ರೆಡ್ಡಿ, ಮಾಜಿ ಶಾಸಕ ಎಸ್.ವಿ. ರಾಮಚಂದ್ರ, ಎಚ್.ಪಿ. ರಾಜೇಶ್, ಯಶವಂತರಾವ್ ಜಾಧವ್, ಅಜಯಕುಮಾರ್, ಶ್ರೀನಿವಾಸ ದಾಸಕರಿಯಪ್ಪ ಇತರರು ಈ ಮೆರವಣಿಗೆಯ ನೇತೃತ್ವ ವಹಿಸಲಿದ್ದಾರೆ.

ಎರಡನೇ ಮೆರವಣಿಗೆ ನಿಟುವಳ್ಳಿ ದುರ್ಗಾಂಬಿಕಾ ದೇವಸ್ಥಾನದಿಂದ ಆರಂಭ ವಾಗಲಿದೆ. ಮೆರವಣಿಗೆಯು ಎಚ್.ಕೆ.ಆರ್. ವೃತ್ತ, ಕೆಟಿಜೆ ನಗರ ಮುಖ್ಯ ರಸ್ತೆ, ಜಯದೇವ ವೃತ್ತ, ಲಾಯರ್ ರೋಡ್, ಜನತಾ ಹೊಟೆಲ್ ರಸ್ತೆ ಮೂಲಕ ಗಾಂಧಿ ವೃತ್ತ ಅಲ್ಲಿಂದ ವಾಣಿ ಹೊಂಡಾ ಶೋ ರೂಂ ಸ್ಥಳ ತಲುಪಲಿದೆ. ಮಾಜಿ ಸಚಿವರಾದ  ರೇಣುಕಾಚಾರ್ಯ, ಎಸ್.ಎ. ರವೀಂದ್ರನಾಥ್, ಮಾಡಾಳ್ ಮಲ್ಲಿಕಾರ್ಜುನ್, ಪ್ರೊ.ಲಿಂಗಣ್ಣ, ಬಸವರಾಜ ನಾಯ್ಕ, ಶಿವನಳ್ಳಿ ರಮೇಶ್ ಇತರರು ಈ ಮೆರವಣಿಗೆಯ ನೇತೃತ್ವ ವಹಿಸಲಿದ್ದಾರೆ.

ಮೂರನೇ ಮೆರವಣಿಗೆಯು ರಾಮ್ ಅಂಡ್ ಕೋ ವೃತ್ತದಿಂದ ಆರಂಭವಾಗಲಿದ್ದು ಚೇತನಾ ಹೋಟೆಲ್, ಅಂಬೇಡ್ಕರ್ ವೃತ್ತ, ಜಯದೇವ ವೃತ್ತ, ಗಾಂಧಿ ವೃತ್ತದ ಮೂಲಕ ವಾಣಿಹೊಂಡಾ ಶೋ ರೂಂ ಸ್ಥಳ ಸೇರಲಿದೆ.  ಶಾಸಕ ಬಿ.ಪಿ. ಹರೀಶ್, ಮಾಜಿ ಶಾಸಕ ಎಚ್.ಎಸ್. ಶಿವಶಂಕರ್, ಜೆಡಿಎಸ್ ಜಿಲ್ಲಾಧ್ಯಕ್ಷ ಚಿದಾನಂದಪ್ಪ, ಚಂದ್ರಶೇಖರ್ ಪೂಜಾರ್, ವೀರೇಶ್ ಹನಗವಾಡಿ, ಐರಣಿ ಅಣ್ಣೇಶ್ ಇನ್ನಿತರರು ಈ ಮೆರವಣಿಗೆಯ ನೇತೃತ್ವ ವಹಿಸಲಿದ್ದಾರೆ ಎಂದು ತಿಳಿಸಿದರು.

ನಗರದ ಮೂರು ಕಡೆಯಿಂದ ಸಂಚರಿಸುವ ಮೆರವಣಿಗೆಗಳು ಏಕಕಾಲಕ್ಕೆ ಹೊರಟು ಗಾಂಧಿ ವೃತ್ತದಲ್ಲಿ ಸಮಾವೇಶಗೊಳ್ಳಲಿವೆ. ಅಲ್ಲಿಂದ ಒಂದೇ ಬೃಹತ್ ಮೆರವಣಿಗೆಯಾಗಿ ವಾಣಿ ಹೊಂಡಾ ಶೋ ರೂಂ ಸ್ಥಳದವರಗೆ ಸಂಚರಿಸಲಿದೆ. ಬಳಿಕ ಅಭ್ಯರ್ಥಿ ಹಾಗೂ ನಾಯಕರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಲಿದ್ದಾರೆ. 

ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಮಾತನಾಡಿ, ಎಲ್ಲಾ ಅಧಿಕಾರವೂ ತಮ್ಮ ಮನೆಯಲ್ಲಿಯೇ ಇರಬೇಕೆಂಬ ಶಾಮನೂರು ಮನೆತನದವರ ಮನಸ್ಥಿತಿಗೆ ಈ ಬಾರಿ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸುತ್ತಾರೆ ಎಂದರು.

ಕಳೆದ ಚುನಾವಣೆಯಲ್ಲಿ  ನನ್ನನ್ನು ಹರಕೆಯ ಕುರಿ ಮಾಡಿಲ್ಲ ಎಂದು ಮಂಜಪ್ಪ ಹೇಳಿದ್ದಾರೆ. ಆದರೆ ಸಚಿವರು, ಶಾಸಕರು ಈಗ ತೋರುತ್ತಿರುವ ಚುನಾವಣಾ ಉತ್ಸಾಹವನ್ನು ಅಂದೇಕೆ ತೋರಿರಲಿಲ್ಲ ಎಂದು ಪ್ರಶ್ನಿಸಿದರು.

ಬಿಜೆಪಿ ಪ್ರಮುಖರಾದ ರಾಜನಹಳ್ಳಿ ಶಿವಕುಮಾರ್, ಶ್ರೀನಿವಾಸ್ ದಾಸಕರಿಯಪ್ಪ, ಬಿ.ಎಂ. ಸತೀಶ್, ಗೋವಿಂದರಾಜು, ಟಿಂಕರ್ ಮಂಜಣ್ಣ, ದಂಡಪಾಣಿ ಇತರರು ಪತ್ರಿಕಾಗೋಷ್ಠಿಯಲ್ಲಿದ್ದರು.

error: Content is protected !!