ಹರಪನಹಳ್ಳಿ : ಮಾದಿಗ ಸಮುದಾಯದ ಆತ್ಮ ಶಕ್ತಿ ಕೆಣಕ ಬೇಡಿ

ಹರಪನಹಳ್ಳಿ : ಮಾದಿಗ ಸಮುದಾಯದ ಆತ್ಮ ಶಕ್ತಿ ಕೆಣಕ ಬೇಡಿ

ಹರಪನಹಳ್ಳಿ, ಮಾ. 27 –  ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವು ಸಚಿವ ಕೆ.ಎಚ್. ಮುನಿಯಪ್ಪ ಅವರು ಸೂಚಿಸುವ ವ್ಯಕ್ತಿಗೆ ಟಿಕೆಟ್ ನೀಡಬೇಕು. ಇಲ್ಲದಿದ್ದರೆ ರಾಜ್ಯದಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ. ಮಾದಿಗ ಸಮುದಾಯದ ಆತ್ಮಸಾಕ್ಷಿ ಕೆಣಕುವುದಕ್ಕೆ ಕೈ ಹಾಕಬೇಡಿ ಎಂದು ಕೆ.ಎಚ್. ಮುನಿಯಪ್ಪ ವಿರೋಧಿಗಳಿಗೆ ಹರಪನಹಳ್ಳಿ ತಾಲ್ಲೂಕು ಮಾದಿಗ ಸಮುದಾಯದ ಮುಖಂಡರು ಎಚ್ಚರಿಸಿದರು.

ತಾಲ್ಲೂಕು ಪಂಚಾಯತ್ ಮಾಜಿ ಸದಸ್ಯರಾದ ಹುಲಿಕಟ್ಟಿ ಚಂದ್ರಪ್ಪ ಮಾತನಾಡಿ, ಕೆ.ಎಚ್. ಮುನಿಯಪ್ಪ ಅವರು ನಮ್ಮ ಸಮುದಾಯದ ಬಹುದೊಡ್ಡ ನಾಯಕರು. ನಮ್ಮ ಸಮಾಜವನ್ನು ಪ್ರತಿನಿಧಿಸುತ್ತಿದ್ದಾರೆ. 7 ಬಾರಿ ಕೋಲಾರ ಸಂಸದ ಹಾಗೂ ಕೇಂದ್ರದಲ್ಲಿ ಸಚಿವರೂ ಆಗಿದ್ದರು ಎಂದರು.

ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ಮೈದೂರು ಓ. ರಾಮಪ್ಪ ಮಾತನಾಡಿ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಡಗೈ ಬಲಗೈ ಎಂಬ ತಾರತಮ್ಯ ಇರಲಿಲ್ಲ. ನಮ್ಮ ಒಗ್ಗಟ್ಟನ್ನು ನಾಶ ಮಾಡುವ ಉದ್ದೇಶದಿಂದಲೇ ಕೆಲ ರಾಜಕಾರಣಿಗಳು ಟಿಕೆಟ್ ಘೋಷಣೆ ಮಾಡುವ ಸಂದರ್ಭದಲ್ಲಿ ಎಡ ಬಲ ಎನ್ನುತ್ತಿದ್ದಾರೆ. ಮಾದಿಗರು ಸೇರಿದಂತೆ ಪರಿಶಿಷ್ಟ ಜಾತಿ ಮತ್ತು ಪಂಗಡದವರು ಯಾರ ಪರವಾಗಿ ಇರುತ್ತಾರೊ ಅವರು ಅಧಿಕಾರಕ್ಕೆ ಬರುತ್ತಾರೆ ಎನ್ನುವುದನ್ನು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಅವರು ತಿಳಿಯಬೇಕು ಎಂದರು.

ಕಾಂಗ್ರೆಸ್ ಮುಖಂಡ ಮೈದೂರು ರಾಮಣ್ಣ ಮಾತನಾಡಿ, ರಾಜ್ಯ ಮತ್ತು ದೇಶದ ರಾಜಕಾರಣದಲ್ಲಿ ಕೆ.ಎಚ್. ಮುನಿಯಪ್ಪ ಅವರ ಕುಟುಂಬ ಮಾತ್ರವೇ ಇಲ್ಲ. ಕೋಲಾರ ಮತ್ತು ಚಿಕ್ಕಬಳ್ಳಾಪುರದ ಎಲ್ಲ ಮಾಹಿತಿ ಅವರ ಬಳಿ ಇದೆ. ಆದ್ದರಿಂದ ಅವರು ಸೂಚಿಸುವ ಅಭ್ಯರ್ಥಿಗೆ ಟಿಕೆಟ್ ನೀಡಬೇಕು. ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಬಲಗೈ ಸಮುದಾಯಕ್ಕೆ ಟಿಕೆಟ್ ನೀಡಿದ್ದಾರೆ. ಕೋಲಾರದಲ್ಲಿ ಎಡಗೈ ಸಮುದಾಯಕ್ಕೆ ಟಿಕೆಟ್ ನೀಡಬೇಕು. ಕಾಂಗ್ರೆಸ್‍ನ ಕೆಲವರು ಎಡ ಬಲ ನಮ್ಮ ನಡುವೆ ಒಡಕು ತಂದಿದ್ದಾರೆ ಎಂದು ದೂರಿದರು.

ಈ ವೇಳೆ ಅಂಬೇಡ್ಕರ್ ಸಂಘದ ಅಧ್ಯಕ್ಷ ನಿಚ್ಚವ್ವನಹಳ್ಳಿ ಭೀಮಪ್ಪ ಅಂಬೇಡ್ಕರ್ ಸಂಘದ ಪ್ರಧಾನ ಕಾರ್ಯದರ್ಶಿ ಓ. ಮಹಾಂತೇಶ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಯರಬಾಳು ಹನುಮಂತಪ್ಪ, ಕಲ್ಲಹಳ್ಳಿ ಹನುಮಂತಪ್ಪ, ಪೂಜಾರಿ ಮರಿಯಪ್ಪ, ವಕೀಲರು ಬಸವರಾಜ್, ಅಶೋಕ್ ಹಿರೇಮೇಗಳಗೇರಿ, ರಾಜಪ್ಪ, ಶಾಸಪ್ಪ, ನೀಲಗುಂದ ಸಣ್ಣಪ್ಪ, ಬಾಗಳಿ ಚನ್ನಬಸಪ್ಪ, ಕಣಿವಳ್ಳಿ ಚೌಡಪ್ಪ, ಅರಸನಾಳ ಸೋಮಪ್ಪ, ಕುಂಚೂರು ಸಂಜೀವಪ್ಪ, ಹಲವಾಗಲು ಚಂದ್ರಪ್ಪ, ಮಂಜಪ್ಪ, ಹನುಮಂತಪ್ಪ ಸೇರಿದಂತೆ ಮಾದಿಗ ಸಮಾಜದ ಆನೇಕ ಮುಖಂಡರು ಆಗ್ರಹಿಸಿದರು.

error: Content is protected !!