ಮೋದಿ ಎದುರು ಗ್ಯಾರಂಟಿ ಗೌಣ

ಮೋದಿ ಎದುರು ಗ್ಯಾರಂಟಿ ಗೌಣ

ಬಿಜೆಪಿ-ಜೆಡಿಎಸ್ ಮೈತ್ರಿ ಮುಂದಿನ ಚುನಾವಣೆಗಳಲ್ಲೂ ಮುಂದುವರಿಕೆ : ಯಡಿಯೂರಪ್ಪ ವಿಶ್ವಾಸ

ದಾವಣಗೆರೆ, ಏ. 16 – ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳು ಪರಿಣಾಮ ಬೀರುವುದಿಲ್ಲ. ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ದೊಡ್ಡ ಅಂತರದಲ್ಲಿ ಗೆಲುವು ಸಾಧಿಸಲಿದೆ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಗ್ಯಾರಂಟಿಗಳು ಪರಿಣಾಮ ಬೀರುವುದಿಲ್ಲ. ಪ್ರಧಾನಿ ಮೋದಿ ಎದುರು ಇವು ಗೌಣವಾಗಲಿವೆ. ಹಲವಾರು ಸಮೀಕ್ಷೆಗಳೇ ಈ ವಿಷಯ ತಿಳಿಸುತ್ತಿವೆ ಎಂದರು.

ಕಾಂಗ್ರೆಸ್ ಪಕ್ಷ ತನ್ನ ಪ್ರಧಾನಮಂತ್ರಿ ಅಭ್ಯರ್ಥಿ ಹೆಸರು ಹೇಳುವ ಸ್ಥಿತಿಯಲ್ಲೂ ಇಲ್ಲ. ಕಾಂಗ್ರೆಸ್ ಪಕ್ಷದ ಸ್ನೇಹಿತರು ಬಹಳಷ್ಟು ಮಾತನಾಡುತ್ತಾರೆ. ಅದಕ್ಕೆ ಚುನಾವಣೆಯಲ್ಲಿ ಮತದಾರರು ಉತ್ತರ ಕೊಡುತ್ತಾರೆ ಎಂದು ಯಡಿಯೂರಪ್ಪ ಹೇಳಿದರು.

ನರೇಂದ್ರ ಮೋದಿ ಅವರು 3ನೇ ಬಾರಿ ಪ್ರಧಾನಿಯಾಗಲಿದ್ದು, ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ 5 ವರ್ಷಗಳ ಕಾರ್ಯಕ್ರಮವನ್ನು ಈಗಾಗಲೇ ರೂಪಿಸಲಾಗುತ್ತಿದೆ ಎಂದು ಹೇಳಿದರು.

ರಾಜ್ಯ ಕಾಂಗ್ರೆಸ್ ಸರ್ಕಾರ 11 ಸಾವಿರ ಕೋಟಿ ರೂ.ಗಳ ಎಸ್‌ಸಿಎಸ್‌ಪಿ – ಟಿಎಸ್‌ಪಿ ಹಣವನ್ನು ಬೇರೆ ಉದ್ದೇಶಗಳಿಗೆ ಬಳಸಿದೆ. ಆ ಮೂಲಕ ದಲಿತರಿಗೆ ಅನ್ಯಾಯ ಮಾಡಲಾಗಿದ್ದು, ಕಾಂಗ್ರೆಸ್ ಪಕ್ಷ ದಲಿತ ವಿರೋಧಿಯಾಗಿದೆ ಎಂದು ಟೀಕಿಸಿದರು.

ಬಿಜೆಪಿ ಹಾಗೂ ಜೆಡಿಎಸ್‌ಗಳ ಮೈತ್ರಿ ಕೇವಲ ಲೋಕಸಭಾ ಚುನಾವಣೆಗೆ ಸೀಮಿತವಾಗುವುದಿಲ್ಲ. ಮುಂದಿನ ಚುನಾವಣೆಗಳಲ್ಲೂ ಮೈತ್ರಿ ಮುಂದುವರೆಯಲಿದೆ. ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಬದಿಗೊತ್ತಿ ಹಾಲು ಜೇನಿನಂತೆ ಇರಲಿವೆ ಎಂದೂ ಯಡಿಯೂರಪ್ಪ ಹೇಳಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಅವರ ಆಶಯದಂತೆ ಮೈತ್ರಿ ಮಾಡಿಕೊಳ್ಳಲಾಗಿದೆ. ಎಲ್ಲಾ ಚುನಾವಣೆಗಳಲ್ಲೂ ಮೈತ್ರಿ ಮುಂದುವರೆಯಬೇಕು ಎಂಬುದು ಜನರ ಆಶಯ ಎಂದು ಹೇಳಿದರು.

ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಭಾರತ ರತ್ನ ಪ್ರಶಸ್ತಿ ನೀಡಲಿಲ್ಲ. ದೆಹಲಿಯಲ್ಲಿ ಅವರ ಅಂತ್ಯಕ್ರಿಯೆ ನಡೆಸಲು ಜಾಗವನ್ನೂ ಕೊಡಲಿಲ್ಲ. ಆದರೆ, ಮೋದಿ ಸರ್ಕಾರ ಅಂಬೇಡ್ಕರ್ ಹುಟ್ಟಿದ ಊರು, ದೀಕ್ಷೆ ಪಡೆದ ಜಾಗ, ಲಂಡನ್‌ನಲ್ಲಿ ಅವರು ಅಧ್ಯಯನ ಮಾಡಿದ ಜಾಗಗಳನ್ನು ಅಭಿವೃದ್ಧಿ ಮಾಡಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಬಿ.ಪಿ. ಹರೀಶ್, ಪರಿಷತ್ ಸದಸ್ಯ ಎನ್.ರವಿಕುಮಾರ್, ಮಾಜಿ ಸಚಿವ ಮುರುಗೇಶ್ ನಿರಾಣಿ, ಜೆಡಿಎಸ್ ನಾಯಕ ಹೆಚ್.ಎಸ್. ಶಿವಶಂಕರ್, ಬಿಜೆಪಿ ಜಿಲ್ಲಾಧ್ಯಕ್ಷ ಎನ್. ರಾಜಶೇಖರ್, ಬಿಜೆಪಿ ಮುಖಂಡರಾದ ಯಶವಂತರಾವ್ ಜಾಧವ್, ಗಿರೀಶ್ ಉಪ್ಪಾರ್, ಕೊಳೇನಹಳ್ಳಿ ಸತೀಶ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!