ಪಂಚ ಜನ ಕಲ್ಯಾಣ ಯೋಜನೆ ಕೈ ಗೆಲುವಿಗೆ ಶ್ರೀರಕ್ಷೆ : ಹೆಚ್. ಆಂಜನೇಯ

ಪಂಚ ಜನ ಕಲ್ಯಾಣ ಯೋಜನೆ ಕೈ ಗೆಲುವಿಗೆ ಶ್ರೀರಕ್ಷೆ : ಹೆಚ್. ಆಂಜನೇಯ

ದಾವಣಗೆರೆ, ಏ. 29- ಸಿದ್ಧರಾಮಯ್ಯ ಸರ್ಕಾರದ ಪಂಚ ಜನ ಕಲ್ಯಾಣ ಯೋಜನೆಗಳು ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಕಾರಣವಾಗಲಿದೆ ಎಂದು ಮಾಜಿ ಸಚಿವ ಹೆಚ್.ಆಂಜನೇಯ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಸಮರ್ಥ ಅಭ್ಯರ್ಥಿಯಾಗಿದ್ದು, ಅವರು ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಹೇಳಿದರು. ಕಳೆದ ಮೂರು ದಿನಗಳಿಂದ ತಾವು ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿದ್ದು, ಎಲ್ಲೆಡೆ ಉತ್ತಮ ಒಲವು ವ್ಯಕ್ತವಾಗುತ್ತಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದ ಭರವಸೆಗಳನ್ನು ಈಡೇರಿಸದೇ ವಚನ ಭ್ರಷ್ಟರಾಗಿದ್ದಾರೆ. ಬಡವರ ಹಾಗೂ ರೈತರ ಕಣ್ಣೀರು ಒರೆಸುವ ಕೆಲಸ ಮಾಡದೆ, ದೊಡ್ಡ ಮಾಲೀಕರ ಪರವಾಗಿದ್ದಾರೆ. ಸಾಮಾಜಿಕ ನ್ಯಾಯದ ಪರಿಚಯವಾಗಲೀ ಸಮಾನತೆಯ ಅರಿವಾಗಲೀ ಅವರಿಗಿಲ್ಲ ಎಂದು ಆರೋಪಿಸಿದರು.

ಬಿಜೆಪಿಯವರು ದೇವರು-ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವುದು ಸಾಕು. ಬಡವರಿಗೆ ತಿನ್ನಲು ಅನ್ನ ಬೇಕಿದೆ ಎಂದ ಅವರು, ಸಮಾನತೆ, ಸಹಬಾಳ್ವೆ ಕಾಂಗ್ರೆಸ್‌ ನಿಂದ ಮಾತ್ರ ಸಾಧ್ಯ ಎಂದರು.

ನಿಧನರಾದ ಕೇಂದ್ರದ ಮಾಜಿ ಸಚಿವ, ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅವರು ಅಪ್ರತಿಮ, ಶ್ರೇಷ್ಠ, ಸ್ವಾಭಿಮಾನಿ ರಾಜಕಾರಣಿ ಎಂದು ಇದೇ ವೇಳೆ ಹೇಳಿದ ಆಂಜನೇಯ, ಅವರ ಅಗಲಿಕೆಯಿಂದ ಶೋಷಿತ ಸಮುದಾಯಕ್ಕೆ ನೋವುಂಟಾಗಿದೆ. ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರು ಗಳಾದ ಬಿ.ಹೆಚ್. ವೀರಭದ್ರಪ್ಪ, ಎಲ್.ಡಿ. ಗೋಣೆಪ್ಪ, ಎನ್. ನೀಲಗಿರಿಯಪ್ಪ, ಎಸ್. ಮಲ್ಲಿಕಾರ್ಜುನ್, ಹೆಚ್.ಉದಯಕುಮಾರ್, ಪಿ.ರಮೇಶ್, ಚಿರಂಜೀವಿ, ಕುಮಾರ್, ಶಂಕರ್, ಉಚ್ಚೆಂಗಪ್ಪ, ವೆಂಕಟೇಶ್ ಇತರರಿದ್ದರು.

error: Content is protected !!