ಧರ್ಮ, ದೇಶ ಉಳಿಸಲು ಮತ್ತೆ ಮೋದಿ

ಧರ್ಮ, ದೇಶ ಉಳಿಸಲು ಮತ್ತೆ ಮೋದಿ

ಯುವ ಸಮಾವೇಶದಲ್ಲಿ ಮೈಸೂರು ಸಂಸದ ಪ್ರತಾಪ್ ಸಿಂಹ ಪ್ರತಿಪಾದನೆ

ದಾವಣಗೆರೆ, ಏ. 16 – ಹಿಂದುತ್ವ ಉಳಿದರೆ ಮಾತ್ರ ದೇಶ ಉಳಿಯಲು ಸಾಧ್ಯ. ಧರ್ಮ ಮತ್ತು ದೇಶ ಉಳಿಸಲು ಮೂರನೇ ಅವಧಿಗೆ ಮೋದಿ ನೇತೃತ್ವದ ಸರ್ಕಾರ ಬರಬೇಕು ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ಕರೆ ನೀಡಿದ್ದಾರೆ.

ನಗರದ ರೇಣುಕ ಮಂದಿರದಲ್ಲಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ವತಿಯಿಂದ ಆಯೋಜಿಸಲಾಗಿದ್ದ ಯುವ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಯು.ಪಿ.ಎ. ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಸರಣಿ ಬಾಂಬ್ ಸ್ಫೋಟಗಳು ಸಂಭವಿಸಿದ್ದವು. ಮುಂಬೈ ಮೇಲೆ ಉಗ್ರವಾದಿ ದಾಳಿ ನಡೆದಿತ್ತು. ಹಿಂದೂಗಳಿಗೆ ಉಳಿಗಾಲವೇ ಇಲ್ಲ ಎಂಬ ರೀತಿಯ ಭಯದ ವಾತಾವರಣ ಉಂಟಾಗಿತ್ತು ಎಂದು ಹೇಳಿದರು.

ಆದರೆ, ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಚೀನಾಗೆ ರಕ್ಷಣಾ ಪಡೆಗಳು ದಿಟ್ಟ ಉತ್ತರ ನೀಡುತ್ತಿವೆ. ಇದಕ್ಕೆ ಮೋದಿ ಅವರನ್ನು ದೇಶದ ಜನ ಗೆಲ್ಲಿಸಿದ್ದೇ ಕಾರಣ ಎಂದು ಪ್ರತಾಪ್ ಸಿಂಹ ಹೇಳಿದರು.

ಈಗ ವಿಶ್ವದ ದಿಗ್ಗಜ ದೇಶಗಳ ಜೊತೆ ಭಾರತ ಭೂ ರಾಜಕೀಯ ಪರಿಸ್ಥಿತಿಯ ಕುರಿತು ನಿರ್ಣಯಿಸುವ ಹಂತಕ್ಕೆ ಬಂದಿದೆ. ವಿಶ್ವದ ಐದನೇ ಅತಿ ದೊಡ್ಡ ಆರ್ಥಿಕತೆಯಾಗಿದೆ ಎಂದು ಪ್ರತಾಪ್ ಸಿಂಹ ಹೇಳಿದರು.

2004ರಲ್ಲಿ ಕಾರ್ಯಕರ್ತರು ಮೈ ಮರೆತ ಕಾರಣ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಸೋಲಬೇಕಾಯಿತು. ಈ ಬಾರಿಯೂ ನಾವು ಕೆಲಸ ಮಾಡದಿದ್ದರೆ ಪಕ್ಷಕ್ಕೇ ಅಷ್ಟೇ ಅಲ್ಲ ದೇಶಕ್ಕೆ ಅನ್ಯಾಯ ಆಗುತ್ತದೆ. ಟಿಕೆಟ್ ಯಾರಿಗೆ ಕೊಟ್ಟಿದ್ದಾರೆ ಎಂಬುದನ್ನು ಪರಿಗಣಿಸದೇ, ಮೋದಿ ಅವರನ್ನು ಗೆಲ್ಲಿಸಲು ಶ್ರಮಿಸಬೇಕು ಎಂದವರು ಕರೆ ನೀಡಿದರು.

ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ಕಳೆದ ಒಂದು ವರ್ಷದ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ರಸ್ತೆಯ ಗುಂಡಿ ಮುಚ್ಚಲೂ ಹಣವಿಲ್ಲದಂತಾಗಿದೆ. ನೀರಿನ ಹಾಹಾಕಾರ ಹೆಚ್ಚಾಗಿದ್ದು, ಹೊಸ ಬೋರ್ ಕೊರೆಸಲೂ ಸರ್ಕಾರದ ಬಳಿ ಹಣವಿಲ್ಲ ಎಂದು ಟೀಕಿಸಿ ದರು. ಕೇಂದ್ರದಲ್ಲಿ ಮೋದಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದೆ. ಇಲ್ಲಿಯೂ ಬಿಜೆಪಿ ಅಭ್ಯರ್ಥಿ ಗೆದ್ದಲ್ಲಿ, ದಾವಣಗೆರೆ ಯನ್ನು ಮಾದರಿ ಜಿಲ್ಲೆಯಾಗಿ ರೂಪಿಸಲಾಗುವುದು ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಎನ್. ರಾಜಶೇಖರ್ ಮಾತನಾಡಿ, ಬಿಜೆಪಿ ಯುವ ಮೋರ್ಚಾ ಪಕ್ಷದ ಆತ್ಮ ಇದ್ದಂತೆ. ಯುವ ಮೋರ್ಚಾದಲ್ಲಿ ಕಾರ್ಯ ನಿರ್ವಹಿಸಿದವರು ಉನ್ನತ ಸ್ಥಾನಗಳಿಗೆ ತಲುಪಿದ್ದಾರೆ. ಯುವ ಕಾರ್ಯಕರ್ತರು ನಿಸ್ವಾರ್ಥದಿಂದ ದೇಶಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಹೇಳಿದರು.

ರಾಜ್ಯ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಜಿ.ಎಸ್. ಶ್ಯಾಮ್ ಮಾತನಾಡಿ, ಕಾಂಗ್ರೆಸ್ ಪಕ್ಷದವರು ದೇಶ ವಿಭಜನೆಯ ಮಾತನಾಡುತ್ತಿದ್ದಾರೆ. ಇಂಥವರಿಗೆ ಯುವ ಶಕ್ತಿ ಚುನಾವಣೆಯಲ್ಲಿ ಉತ್ತರ ನೀಡಬೇಕಿದೆ ಎಂದು ಹೇಳಿದರು.

ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಆರ್.ಎಲ್. ಶಿವಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ ಒಂದು ವರ್ಷದಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಸ್ಥಗಿತವಾಗಿದೆ. ಇದೇ ಪರಿಸ್ಥಿತಿ ದೇಶದಲ್ಲೂ ಬರಬಾರದು ಎಂದು ಹೇಳಿದರು.

ಕಾರ್ಯಕ್ರಮದ ವೇದಿಕೆ ಮೇಲೆ ಬಿಜೆಪಿ ಮುಖಂಡರಾದ ಶ್ರೀನಿವಾಸ ದಾಸಕರಿಯಪ್ಪ, ಯಶವಂತರಾವ್ ಜಾಧವ್, ರಾಜನಹಳ್ಳಿ ಶಿವಕುಮಾರ್, ಜಿ.ಎಸ್. ಅನಿತ್, ಜಿ.ಎನ್. ರಾಜೀವ್, ಎ.ವೈ. ಪ್ರಕಾಶ್, ಚಂದ್ರಶೇಖರ್ ಪೂಜಾರ್‌, ಐರಣಿ ಅಣ್ಣೇಶ್, ಅನಿಲ್, ಉಪ ಮೇಯರ್ ಯಶೋಧ ಹೆಗ್ಗಪ್ಪ, ಪಾಲಿಕೆ ವಿಪಕ್ಷ ನಾಯಕ ಪ್ರಸನ್ನ ಕುಮಾರ್, ಪಾಲಿಕೆ ಸದಸ್ಯರಾದ ಎಸ್.ಟಿ. ವೀರೇಶ್, ಶಿವಾನಂದ್, ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!