ಅಭಿವೃದ್ಧಿ ನೋಡಿ ಬಿಜೆಪಿಗೆ ಮತ ನೀಡಿ : ಗಾಯತ್ರಿ ​

ಅಭಿವೃದ್ಧಿ ನೋಡಿ ಬಿಜೆಪಿಗೆ ಮತ ನೀಡಿ : ಗಾಯತ್ರಿ ​

ಹೊನ್ನಾಳಿ ವಿಧಾನಸಭಾ ಕ್ಷೇತ್ರದಲ್ಲಿ ಮತ ಪ್ರಚಾರ

ಹೊನ್ನಾಳಿ, ಏ. 29- ಬಿಜೆಪಿ ಸರ್ಕಾರದ 10 ವರ್ಷಗಳ ಆಡಳಿತ, ಕಾಂಗ್ರೆಸ್​ ಸರ್ಕಾರದ 60 ವರ್ಷಗಳ ಆಡಳಿತ ತುಲನೆ ಮಾಡಿ ಜನ ಬಿಜೆಪಿಯನ್ನು ಒಪ್ಪಿಕೊಂಡಿದ್ದಾರೆ. ದೇಶದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ​ ಭವಿಷ್ಯ ನುಡಿದರು.

ಹೊನ್ನಾಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹನುಮಸಾಗರ, ಎಚ್.ಗೋಪಗೊಂಡನಹಳ್ಳಿ, ಹತ್ತೂರು ಗ್ರಾಮಗಳಲ್ಲಿ ಮತಯಾಚನೆ ಮಾಡಿ ಮಾತನಾಡಿದ ಅವರು, ಇಡೀ ದೇಶದಲ್ಲಿ ಎನ್​ಡಿಎ ಪರ, ಮೋದಿ ಜೀ ಪರ, ಅಭಿವೃದ್ಧಿ ಪರ ಅಲೆ ಇದೆ. ದಾವಣಗೆರೆಯಲ್ಲಿ ಈಗಾಗಲೇ ನಮ್ಮ ಗೆಲುವು ಖಚಿತವಾಗಿದೆ. ನಿನ್ನೆ ಮೋದಿ ಜೀ ಕಾರ್ಯಕ್ರಮಕ್ಕೆ ಬಂದಿದ್ದ ಜನಸ್ತೋಮ ನೋಡಿ ಕಾಂಗ್ರೆಸ್​ಗೆ ನಡುಕ ಉಂಟಾಗಿದ್ದು, ಠೇವಣಿ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಬರ ತಾಂಡವವಾಡುತ್ತದೆ. ಬರ ಪರಿಹಾರ ನೆಪದಲ್ಲಿ ಕಾಂಗ್ರೆಸ್​ ಕೋಟಿ ಕೋಟಿ ಲೂಟಿ ಮಾಡುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್​.ಮಲ್ಲಿಕಾರ್ಜುನ್​ ಒಂದು ದಿನವೂ ಬರ ಪರಿಹಾರ ಸಭೆ ನಡೆಸಲಿಲ್ಲ, ಗ್ರಾಮೀಣ ಭಾಗಕ್ಕೆ ಹೋಗಿ ಜನರ ಸಂಕಷ್ಟ ಆಲಿಸಲಿಲ್ಲ. ಈಗ ಪತ್ನಿ ಅಭ್ಯರ್ಥಿ ಎಂದು ಊರು ಊರು ಸುತ್ತುತ್ತಿದ್ದಾರೆ. ಅದು ರಾಜಕೀಯಕ್ಕಾಗಿ ಬಿಟ್ಟರೆ ಜನರ ಸಂಕಷ್ಟ ಆಲಿಸಲು ಅಲ್ಲ. ರಾಜ್ಯದಲ್ಲಿ ನಮ್ಮ ಸರ್ಕಾರ ಇಲ್ಲದಿದ್ದರೂ ಬಿಜೆಪಿ ರಾಜ್ಯ ಘಟಕ ತಂಡ ತಂಡ ಮಾಡಿಕೊಂಡು ಗ್ರಾಮೀಣ ಭಾಗದಲ್ಲಿ ಬರ ಅಧ್ಯಯನ ಮಾಡಿದೆ. ಅದರಲ್ಲಿ ಸಂಸದ
ಜಿ.ಎಂ.ಸಿದ್ದೇಶ್ವರ ಅವರು ತಂಡದ ಸದಸ್ಯರಾಗಿ ದಾವಣಗೆರೆ, ಚಿತ್ರದುರ್ಗ, ಹಾವೇರಿ ಜಿಲ್ಲೆಗಳ ಬರ ಅಧ್ಯಯನ ಮಾಡಿ ಕೇಂದ್ರಕ್ಕೆ ವರದಿ ಸಲ್ಲಿಸಿದ್ದಾರೆ. ಜನ ಇದನ್ನು ಮರೆಯಬಾರದು. ಈ ಚುನಾವಣೆ ಯಲ್ಲಿ ಕಾಂಗ್ರೆಸ್​ಗೆ ಬುದ್ಧಿ ಕಲಿಸಬೇಕು ಎಂದರು.

ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಕೇಂದ್ರದಲ್ಲಿ ಮೋದಿ, ದಾವಣಗೆರೆಯಲ್ಲಿ  ಗಾಯತ್ರಿ ಸಿದ್ದೇಶ್ವರ​ ಎಂದು ಲೋಕಸಭಾ ಕ್ಷೇತ್ರದ ಜನ ತೀರ್ಮಾನ ಮಾಡಿದ್ದಾರೆ. ಆ ತೀರ್ಮಾನದ ಫಲಿತಾಂಶ ಜೂನ್​ 7 ಕ್ಕೆ ಬರಲಿದೆ. ಅದು ಇಡೀ ಭಾರತ ದೀಪಾವಳಿ ಮಾಡಲಿದೆ. ಅದು ಇಡೀ ವಿಶ್ವವೇ ಮತ್ತೊಮ್ಮೆ ಭಾರತದ ಕಡೆ ತಿರುಗಿ ನೋಡುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.

ಮೋದಿ ಜೀ ಪ್ರಧಾನಿಯಾದ ಮೇಲೆ ಆತಂಕ ವಾದಿಗಳಿಗೆ ಎಲ್ಲಿಯೂ ಅವಕಾಶ ಇಲ್ಲದಂತಾಗಿದೆ. ಹೀಗಾಗಿ ಪಿಎಫ್​ಐ ಮತ್ತು ನಿಷೇಧಿತ ಸಂಘಟನೆ ಗಳು ಕಾಂಗ್ರೆಸ್​ ಜೊತೆ ಕೈ ಜೋಡಿಸಿ ಕಾಂಗ್ರೆಸ್ ಅದನ್ನು ಅಧಿಕಾರಕ್ಕೆ ತರಲು ಪ್ರಯತ್ನಿಸುತ್ತಿವೆ. ಆತಂಕವಾದಿಗಳು ಮತ್ತೆ ಮುನ್ನೆಲೆಗೆ ಬಂದರೆ ಭಯೋತ್ಪಾದಕರ, ಮಾನವ ಬಾಂಬರ್‌ಗಳ, ಜಿಹಾದಿಗಳ ಅಟ್ಟಹಾಸ ಹೆಚ್ಚಾಗುತ್ತದೆ. ನಮ್ಮ ಮಕ್ಕಳಿಗೆ ಭವಿಷ್ಯ ಇಲ್ಲದಂತಾಗುತ್ತದೆ. ಇದನ್ನು ಪ್ರತಿಯೊಬ್ಬರೂ ಗಮನದಲ್ಲಿಟ್ಟುಕೊಂಡು ಬಿಜೆಪಿಗೆ ಮತ ಹಾಕಿಸಬೇಕು ಎಂದು ಕರೆ ನೀಡಿದರು.

ಮಂಡಲ ಅಧ್ಯಕ್ಷ ಸುರೇಶ್, ದ್ರಾಕ್ಷಾಯಿಣಿ ಸಂಗಮೇಶ್ ನಿರಾಣಿ, ಋತು, ಬಿಜೆಪಿ ಮುಖಂಡ ಮಹೇಶ್, ಶಾಂತರಾಜ್ ಪಾಟೀಲ್, ಕುಬೇರಪ್ಪ, ಸಂತೋಷ ಕುಮಾರ್, ಎಲ್.ಕೆ. ಮಂಜಪ್ಪ, ಹನುಮಂತಪ್ಪ, ಅರೆಕೆರೆ ನಾಗರಾಜ್, ರಂಗನಾಥ್, ಸುರೇಂದ್ರ, ಯೋಗೇಶ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!