ದಣಿದವರಿಗೆ ಮಜ್ಜಿಗೆ: ದೇವರು ಸಂತೃಪ್ತಿ

ದಣಿದವರಿಗೆ ಮಜ್ಜಿಗೆ: ದೇವರು ಸಂತೃಪ್ತಿ

ಮಜ್ಜಿಗೆ  ವಿತರಣಾ ಕಾರ್ಯಕ್ರಮದಲ್ಲಿ  ಶ್ರೀ ಬಸವಪ್ರಭು ಸ್ವಾಮೀಜಿ

ದಾವಣಗೆರೆ, ಮಾ. 27- ಕಾಣದಿರುವ ದೇವರನ್ನು ಹುಡುಕಿಕೊಂಡು ಹೋಗಿ ಕಲ್ಲುಗಳಿಗೆ ಬೆಣ್ಣೆ, ತುಪ್ಪದ ಅಭಿಷೇಕ, ಪೂಜೆ, ಅರ್ಚನೆ ಮಾಡುತ್ತೇವೆ. ಅದರ ಬದಲು ದಣಿವಾರಿ ಬಂದವರಿಗೆ ಮಜ್ಜಿಗೆ, ನೀರು, ಊಟ ಕೊಟ್ಟರೆ ಅದು ನಿಜವಾಗಿಯೂ ದೇವರಿಗೆ ಸಂತೃಪ್ತಿ ಕೊಡುತ್ತದೆ ಎಂದು ಚಿತ್ರದುರ್ಗ ಮುರುಘಾ ಮಠದ ಉಸ್ತುವಾರಿ ಶ್ರೀ ಬಸವಪ್ರಭು ಸ್ವಾಮೀಜಿ ತಿಳಿಸಿದರು.

ನಗರದ ಶ್ರೀ ಜಯದೇವ ಮುರುಘರಾಜೇಂದ್ರ ವೃತ್ತದಲ್ಲಿ ಕರುಣಾ ಜೀವ ಕಲ್ಯಾಣ ಟ್ರಸ್ಟ್‌ನ ವತಿಯಿಂದ ಇಂದು ಏರ್ಪಡಿಸಿದ್ದ ಉಚಿತ ಮಜ್ಜಿಗೆ ಮತ್ತು ನೀರು ವಿತರಣಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

ಬಸವಣ್ಣನವರು ಮಾನವನಲ್ಲಿ ದೇವರಿದ್ದಾನೆ. ತೀರ್ಥ ಕ್ಷೇತ್ರಗಳಲ್ಲಿಲ್ಲ. ಭಿಕ್ಷುಕರಲ್ಲಿ, ಹಸಿದವರಲ್ಲಿ, ಬಡವರಲ್ಲಿ, ಅಸಹಾಯಕರಲ್ಲಿ, ಸಾಮಾನ್ಯ ಜನರಲ್ಲಿ ದೇವರನ್ನು ಕಾಣಬಹುದು ಎಂದಿದ್ದಾರೆ. ಅದರಂತೆ ಬದ್ದತೆಯಿಂದ ಪ್ರಾಮಾಣಿಕವಾಗಿ ಕರುಣಾ ಟ್ರಸ್ಟ್ ಕಾರ್ಯವೆಸಗುತ್ತಿದೆ. ಎಲ್ಲಿ ಪ್ರಾಮಾಣಿಕವಾಗಿ ಕೆಲಸ ನಡೆಯುತ್ತದೆಯೋ ಅಲ್ಲಿ ತಮ್ಮ ಹಣ ಸತ್ಕಾರ್ಯಗಳಿಗೆ ಸದುಪಯೋಗವಾಗುತ್ತದೆ  ಎಂಬುದು  ಜನರಿಗೆ ಮನವರಿಕೆಯಾಗುತ್ತದೆ. ಎಲ್ಲಾ ಸೇವಾ ಸಂಸ್ಥೆಗಳಿಗೆ ಕರುಣಾ ಟ್ರಸ್ಟ್ ಮಾದರಿಯಾಗಿದೆ ಎಂದ ಶ್ರೀಗಳು,  ಟ್ರಸ್ಟಿನ ಸತ್ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವುದರ ಜೊತೆಗೆ ಇನ್ನೂ ಹೆಚ್ಚಿನ ಸತ್ಕಾರ್ಯಗಳು ಟ್ರಸ್ಟಿನ ವತಿಯಿಂದ ನಡೆಯುವಂತಾಗಲಿ ಎಂದು ಹಾರೈಸಿದರು.

ಕರುಣಾ ಜೀವ ಕಲ್ಯಾಣ ಟ್ರಸ್ಟ್ ಕಾರ್ಯ ದರ್ಶಿ ಶಿವನಕೆರೆ ಬಸವಲಿಂಗಪ್ಪ ಮಾತನಾಡಿ, ಪ್ರಸ್ತುತ ತುಂಬಾ ಬಿಸಿಲು ಇರುವ ಕಾರಣ ನೀರಿನ ಅಂಶ ಕಡಿಮೆಯಾಗಿ ನಿರ್ಜಲೀ ಕರಣ ಉಂಟಾಗಿ ಬ್ರೈನ್ ಸ್ಟ್ರೋಕ್ ಆಗುವ ಸಾಧ್ಯತೆಗಳು ಹೆಚ್ಚಾಗಿರು ವುದರಿಂದ ಮಜ್ಜಿಗೆ, ನೀರಿನ ಅವಶ್ಯಕತೆ ತುಂಬಾ ಇರುತ್ತದೆ. ಸಂಘ-ಸಂಸ್ಥೆಗಳು, ಸಾರ್ವಜನಿಕ ಸೇವಾ ಸಂಸ್ಥೆಗಳು, ದೇವಸ್ಥಾನಗಳಲ್ಲಿ, ರಾಜಕೀಯ ಪಕ್ಷಗಳು, ಮಠಗಳಲ್ಲಿ ಮನೆ-ಮನೆಗಳ ಮುಂದೆ, ಅಂಗಡಿಗಳ ಮುಂದೆ ಮುಂತಾದ ನೂರಾರು ಕಡೆಯಲ್ಲಿ ಮಜ್ಜಿಗೆ, ನೀರನ್ನು ಇಟ್ಟು ಬಾಯಾರಿ ದವರಿಗೆ ನೀಡಲಿ ಎಂದು ವಿನಂತಿಸಿದರು.

ಶ್ರೀಮತಿ ಮಂಜುಳಾ ಬಸವಲಿಂಗಪ್ಪ, ಪ್ರೊ. ಎಂ. ಬಸವರಾಜ್ ಮಾತನಾಡಿದರು.          

ಕಾರ್ಯಕ್ರಮದಲ್ಲಿ ದಾನಿಗಳಾದ ಶ್ರೀಮತಿ ಮಂಜುಳಾ ಸಿದ್ದಪ್ಪ, ಶ್ರೀಮತಿ ರೇಖಾ ಸುದರ್ಶನ್, ನಿರ್ದೇಶಕರಾದ ಮಧುಸೂದನ್ ರವರು ಉಪಸ್ಥಿತರಿದ್ದರು.

error: Content is protected !!