`ಈಚಲು’ ನುಂಗಿದ `ಅರಳಿ’

`ಈಚಲು’ ನುಂಗಿದ `ಅರಳಿ’

‘ಕೋಡಗನ ಕೋಳಿ ನುಂಗಿತ್ತಾ’ ಎಂಬುದು ಸಂತ ಶಿಶುನಾಳ ಷರೀಫರ ತತ್ವ ಪದ್ಯ. ಸಾಮಾನ್ಯ ಜನರ ನಿಲುವಿಗೆ ಬಾರದ ಪಾರ ಮಾರ್ಥದ ವಿಷಯ. ಆದರೆ ಇದರ ವ್ಯಾವಹಾರಿಕ ಅರ್ಥ ಬರುವಂತೆ ಇಲ್ಲೊಂದು ಅರಳಿ ಮರ – ಈಚಲು ಮರವನ್ನು ನುಂಗಿದೆ. 

ಸಾಮಾನ್ಯವಾಗಿ ಅರಳಿ, ಆಲ, ಬಸರಿ ಮರದ ಬೀಜಗಳು ಗೋಡೆ ಸಂದಿಯಲ್ಲಿ, ಸೇತುವೆಯಲ್ಲಿನ ಬಿರುಕುಗಳಲ್ಲಿ ಅಥವಾ ನೀರಿನ ಟ್ಯಾಂಕ್‍ನ ಸಂದಿಗಳಲ್ಲಿ ಬಿದ್ದು-ಮೊಳೆತು ಮರವಾಗುವ ಕ್ಷಮತೆ ಪಡೆದಿವೆ. ಸಾಸಿವೆಗಿಂತ ಸಣ್ಣದಾದ ಬೀಜದಲ್ಲಿ ಅದೆಂತಹ ಶಕ್ತಿ ಅಡಗಿದೆ. ದಾವಣಗೆರೆಯಲ್ಲಿ ಕೆಲ ವರ್ಷಗಳ ಹಿಂದೆ ಅಲಂಕಾರಿಕ ಸಸ್ಯವಾಗಿ ರಸ್ತೆ ಬದುವಿನಲ್ಲಿ ಈಚಲು ಮರಗಳನ್ನು ನೆಡಲಾಗಿತ್ತು. ಅದರಲ್ಲಿ ಕೆಲವು ಬೆಳೆದು ಹಣ್ಣು ಬಿಟ್ಟರೆ ಮತ್ತೆ ಕೆಲವು ಒಣಗಿ ಸತ್ತವು. ಇಲ್ಲಿನ ವರ್ತುಲ ರಸ್ತೆಯಲ್ಲಿ ಇಂತಹದ್ದೇ ಒಂದು ಈಚಲು ಮರ ಸತ್ತು ಒಣಗಿದ ಕಾಂಡವನ್ನಷ್ಟೆ ಇರಿಸಿಕೊಂಡಿತ್ತು. 

ಎಲ್ಲಿಂದಲೋ ಗಾಳಿ ಅಥವಾ ಹಕ್ಕಿಯ ಪಿಕ್ಕೆಯಲ್ಲಿ ಬಂದು ಬಿದ್ದ ಅರಳಿ ಮರದ ಬೀಜಕ್ಕೆ ಆಶ್ರಯ ನೀಡಿ ಮರವಾಗುವಂತೆ ಮಾಡಿದೆ. ಈಚಲು ಮರದ ಸಂದುಗಳಲ್ಲಿ ಶೇಖರವಾದ ಧೂಳು ಮತ್ತು ನೀರನ್ನು ಪಡೆದು ದಿನೇದಿನೇ ಎತ್ತರಕ್ಕೆ ಬೆಳೆಯುತ್ತಿರುವ ಅರಳಿ ಮರ ತನ್ನ ಅದಮ್ಯ ಶಕ್ತಿಯ ಪ್ರದರ್ಶನ ಮಾಡುತ್ತಿದೆಯಲ್ಲವೇ ? ಅಂತೆಯೇ ಕನಿಷ್ಟ ಸಾರವುಂಡು ಗರಿಷ್ಟ ಮಟ್ಟಕ್ಕೆ ಬೆಳೆಯುವ ಎದೆಗಾರಿಕೆ ಈ ಮರದ್ದು. 


– ಡಾ. ಎಸ್. ಶಿಶುಪಾಲ, ಪ್ರಾಧ್ಯಾಪಕರು, ದಾವಣಗೆರೆ ವಿಶ್ವವಿದ್ಯಾಲಯ, ಮೊ : 8792674905,  ಇಮೇಲ್: [email protected]

error: Content is protected !!