ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆಗೆ ಮತ್ತೊಂದು ಚಿನ್ನದ ಗರಿ `ಬಾಪೂಜಿ ಎದೆ ಹಾಲಿನ ಭಂಡಾರ’

ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆಗೆ ಮತ್ತೊಂದು ಚಿನ್ನದ ಗರಿ `ಬಾಪೂಜಿ ಎದೆ ಹಾಲಿನ ಭಂಡಾರ’

* ದಾವಣಗೆರೆ ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ ಹಾಗೂ ಸಂಶೋಧನಾ ಕೇಂದ್ರದ ವಿನೂತನ ಪ್ರಯತ್ನ. 

 * ಮಾ. 7ರಿಂದ ಸಂಸ್ಥೆಯ ಆವರಣದಲ್ಲಿ ಆರಂಭ.  

* ತಾಯಂದಿರಿಂದ ಸಂಗ್ರಹಿಸಿದ ಹಾಲನ್ನು  ಅವಶ್ಯಕತೆಯಿರುವ ಮಗುವಿಗೆ ಉಚಿತ ವಿತರಣೆ.

ಬಾಪೂಜಿ ಎದೆಹಾಲಿನ ಭಂಡಾರವು ಇದೇ ದಿನಾಂಕ 7ರಂದು ಗುರುವಾರ.   ಉದ್ಘಾಟನೆ ಗೊಳ್ಳಲಿದೆ. ಇದೊಂದು ವೈದ್ಯಕೀಯ ವಿಭಾಗದಲ್ಲಿ ವಿನೂತನವಾದ ಸೇವೆಯಾಗಿದ್ದು, ದಾವಣಗೆರೆಗೊಂದು ಹೆಮ್ಮೆಯ ಸಂಗತಿಯಾಗಿದೆ.

ದಾವಣಗೆರೆಯ ಸುತ್ತಮುತ್ತಲಿನ ಜಿಲ್ಲೆಗಳಿಗೆ ಇದು ಪ್ರಥಮ ಎದೆಹಾಲಿನ ಭಂಡಾರವಾಗಿದ್ದು,  ವಿಶಾಲವಾದ ಪ್ರದೇಶದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿ ಅನ್ವಯ ಅಚ್ಚುಕಟ್ಟಾಗಿ ನಿರ್ಮಾಣವಾಗಿದ್ದು, ನವಜಾತ ಶಿಶುಗಳ ಬಗ್ಗೆ ಹೆಚ್ಚಿನ ಕಾಳಜಿಯುಳ್ಳದ್ದಾಗಿದೆ.

ತಾಯಂದಿರು ತಮ್ಮ ಮಗುವಿಗೆ ಎದೆಹಾಲುಣಿಸಿ, ಹೆಚ್ಚಾದ ಹಾಲನ್ನು ಈ ಭಂಡಾರಕ್ಕೆ ಬಂದು ದಾನವಾಗಿ ನೀಡುತ್ತಾರೆ. ಆ ಹಾಲನ್ನು ಅವಶ್ಯಕತೆ ಇರುವ 6 ತಿಂಗಳ ಒಳಗಿನ ಮಗುವಿಗೆ ನೀಡಲಾಗುವುದು. ಎದೆ ಹಾಲನ್ನು ಕೊಡುವುದು ಹಾಗೂ ಪಡೆಯುವುದು ಸಂಪೂರ್ಣವಾಗಿ ಉಚಿತವಾಗಿರುತ್ತದೆ.

ಎದೆಹಾಲನ್ನು ಪಡೆಯುವ ಮೊದಲು ತಾಯಂದಿರಿಗೆ ಯಾವುದೇ ಕಾಯಿಲೆಗಳಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ. (HIV 1&2, hepatitis B, syphilis) ಇಲ್ಲವೆಂದ ಬಳಿಕ) ಹಾಗೆಯೇ ತಾಯಿಯ ಹಾಗೂ ಆಕೆಯ ಗಂಡನ ವೈದ್ಯಕೀಯ ಇತಿಹಾಸವನ್ನು ಪಡೆದು, ಗಂಡನಿಗೂ ಕೂಡ ಯಾವುದೇ ಅಪಾಯಕಾರಿ ಚಟುವಟಿಕೆಗಳಿಲ್ಲವೆಂದ ಮೇಲೆಯೇ  ತಾಯಿಯಿಂದ ಎದೆಹಾಲನ್ನು ಪಡೆಯಲಾಗುವುದು. ಪಡೆದ ಹಾಲನ್ನು ಲ್ಯಾಬ್‌ಗೆ ಪರೀಕ್ಷೆಗೆ ಕಳುಹಿಸಲಾಗುವುದು. ಲ್ಯಾಬ್‌ಗೆ ರಿಪೋರ್ಟ್‌ ನೆಗೆಟಿವ್‌ ಬಂದ ನಂತರವೇ ಹಾಲನ್ನು ಸಂಸ್ಕರಿಸಲಾಗುವುದು. ಸಂಸ್ಕರಿಸಿದ ಹಾಲನ್ನು ಮತ್ತೆ ಲ್ಯಾಬ್‌ಗೆ ಪರೀಕ್ಷೆಗೆ ಕಳುಹಿಸಲಾಗುವುದು. ಎರಡು ಸಾರಿಯೂ ರಿಪೋರ್ಟ್‌ ನೆಗೆಟಿವ್‌ ಬಂದ ನಂತರವೇ ಹಾಲನ್ನು 6 ತಿಂಗಳವರೆಗೂ ಶೇಖರಿಸಬಹುದು.

ಇದರ ಜೊತೆಗೆ ಯಾವ ತಾಯಿಗೆ ಆಪ್ತ ಸಮಾಲೋಚನೆಯ ಅವಶ್ಯಕತೆ ಇರುತ್ತದೆಯೋ ಅವರೊಂದಿಗೆ ಆಪ್ತ ಸಮಾಲೋಚನೆ ಕೂಡ ಮಾಡಲಾಗುವುದು. ಚೊಚ್ಚಲ ತಾಯಂದಿರಿಗೆ ಮಾಹಿತಿಯ ಕೊರತೆ ಇರಬಹುದು, ಎದೆ ಹಾಲುಣಿಸುವ ಕಾರ್ಯನಿರತ ಮಹಿಳೆಯ ಸಮಸ್ಯೆ, ಶಸ್ತ್ರಚಿಕಿತ್ಸೆಯಿಂದ ಮಗುವನ್ನು ಹೊರತೆಗೆದಾಗ ಬರುವ ಸಮಸ್ಯೆ, ಅವಳಿ-ಜವಳಿ ಮಕ್ಕಳಿಗೆ ಎದೆಹಾಲುಣಿಸುವ ಸಮಸ್ಯೆ, ಎದೆತೊಟ್ಟಿನ ಸಮಸ್ಯೆ ಇರಬಹುದು, ಎದೆ ಬಾವು, ಎದೆ ಹಾಲುಣಿಸುವಾಗ ಬರುವ ಸೋಂಕುರಹಿತ ಗಂಟುಗಳು/ ಸೋಂಕು ಸಹಿತವಾದ ಗಂಟುಗಳಿರಬಹುದು. ಇಂತಹ ಸಮಸ್ಯೆಗಳಿಗೆ ಈ ಕೇಂದ್ರದಲ್ಲಿ ಆಪ್ತ ಸಮಾಲೋಚನೆ ನಡೆಸಲಾಗುವುದು.

ಇದೊಂದು ಶಿಶು ಸ್ನೇಹಿ ಆಸ್ಪತ್ರೆಯಾಗಿದ್ದು, ಮಗುವಿನ ಸರ್ವತೋಮುಖ ಬೆಳವಣಿಗೆಗೆಂದೇ ಈ ಕೇಂದ್ರವನ್ನು ತೆರೆಯಲಾಗಿದ್ದು, ಸಾರ್ವಜನಿಕರು ಇದರ ಉಪಯೋಗ ಪಡೆಯುವುದರೊಂದಿಗೆ, ಇದನ್ನು ಯಶಸ್ವಿಗೊಳಿಸಲು ಸಹಕರಿಸಬೇಕಾಗಿದೆ.


ಡಾ . ಜಿ. ಗುರುಪ್ರಸಾದ್‌
ನಿರ್ದೇಶಕರು, ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರ,  

ಶ್ರೀಮತಿ ಅನಿತಾ.ಬಿ., ಲ್ಯಾಕ್ಟಿಷನಲ್‌ ಕೌನ್ಸೆಲರ್

error: Content is protected !!