ಥಕಾ..ಥಕಾ…ಶಥಕಾ!

ಈರ: ಕೊಟ್ರಾ ಕೋವಿಡ್ ಸೆಂಚುರಿ ಬಾರಿಸೇ ಬಿಟ್ತಲ್ಲೋ ನಮ್ಮೂರಾಗೇ! ಅದು ಔಟಾಗೋದು ಯಾವಾಗ?

ಕೊಟ್ರ: ಈರಾ. ಕೊರೊನಾನ ಔಟ್ ಮಾಡಕ್ಕೆ ಆಗೋಲ್ಲಾ. ಪ್ರಪಂಚದಾಗಿರೋ ವಿಜ್ಞಾನಿಗಳೇ ಹೇಳಿ ಬಿಟ್ಟಾರೆ. ಈಗ ಏನಿದ್ರೂ ನಾವು ಔಟಾಗದೇ ಇರಬೇಕು ಅಷ್ಟೇ.

ಈರ: ಅದೆಂಗೋ?.

ಕೊಟ್ರ : ನೋಡಪಾ. ನಿರ್ಲಕ್ಷ್ಯದ ಕಿಡಿ ಮನೆಯನ್ನೇ ಸುಡುತ್ತೆ.
ಅನ್ನೋ ಗಾದೆ ಮಾತಿದೆ. ವೇದ ಸುಳ್ಳಾಗಬಹುದು ಗಾದೆ ಸುಳ್ಳಾಗಲ್ಲ. ಈಗಿನ ಪರಿಸ್ಥಿತಿಯಲ್ಲಿ ನಿರ್ಲಕ್ಷ್ಯದ ಕೊರೊನಾ ಮನುಷ್ಯ ಸಂಕುಲವನ್ನೇ ಸುಡುತ್ತೆ. ಯಾವ ಕಾರಣಕ್ಕೂ ನಾವು ಈ ಕೊರೊನಾನ ನೆಗ್ಲೆಕ್ಟ್ ಮಾಡಂಗಿಲ್ಲ. ಅದು ನಮ್ಮನ್ನ ಟಚ್ ಮಾಡ್ಲಿಲ್ದಂಗೆ ನೋಡ್ಕ್ಯಬೇಕು. ಸ್ವಚ್ಛವಾಗಿರಬೇಕು. ಸಾಮಾಜಿಕ ಅಂತರ ಕಾಪಾಡ್ಕ್ಯಬೇಕು. ಸೋಪಿನ ನೀರಲ್ಲಿ ಕೈ ತೊಳ್ಕೋಬೇಕು. ಇತ್ಯಾದಿಗಳನ್ನು ಮಾಡಬೇಕು.

ಈರ : ಹೇ ಪ್ರತಿದಿನ ಒಂದು ಇಪ್ಪತ್ತು ಜನಕ್ಕೆ ಫೋನ್ ಮಾಡ್ದಾಗಲೆಲ್ಲಾ ತಿರುಗಾಂಬೊರಗಾ ಒಂದು ಹೆಂಗಸು ಅದನ್ನು ಹೇಳೋದನ್ನ ಕೇಳಿ ಕೇಳಿ ಬಾಯಿ ಪಾಠ ಆಗಿ ಬಿಟ್ಟೇತಿ.

ಕೊಟ್ರ: ಬರೀ ಗಟ್ಟಿ ಹೊಡದ್ರೇ ಸಾಲದು. ಅದನ್ನು ಪಾಲಿಸಬೇಕು.

ಥಕಾ..ಥಕಾ...ಶಥಕಾ! - Janathavaniಈರ: ಹೌದೂ ನಮ್ಮ ಮಂಡ್ಯಾದ ಗತಿ ಏನಪಾ? ಅಲ್ಲಿ ಕೊರೊನಾ ಕೆಂಡ ನಿಗಿ ನಿಗಿ ಅಂತಾ ಐತಿ.

ಕೊಟ್ರ: ಲೇ ಮಂಡ್ಯಕ್ಕೇ ಮುಂಬೈ ಎಕ್ಸ್‌ಪ್ರೆಸ್‌ನಲ್ಲಿ ಕೊರೊನಾ ತನ್ನ ಹಿಂಡು ಕಟ್ಟಿಕೆಂಡು ಬಂದು ಇಳಕಂಡು ಬಿಟ್ಟೇತಿ. ಕೆಲವರು ಮಹಾರಾಷ್ಟ್ರದ ಯಾವುದೋ ಜಾತ್ರೆಗೆ ಹೋಗಿದ್ದರಂತೆ. ದೇವರು ಅವರ ಪಾತ್ರೆಯೊಳಗೆ ಕೆ.ಜಿ.ಗಟ್ಟಲೇ ಕೊರೊನಾ ಪ್ರಸಾದ ಇಟ್ಟು ಕಳುಹಿಸ್ಯಾನ.

ಈರ: ಅಯ್ಯಪ್ಪಾ ಈಗ ಗುಂಪಿನಲ್ಲಿ ಜಾತ್ರೆ, ಪೂಜೆ, ಪ್ರಾರ್ಥನೆ ಏನು ಮಾಡಿದ್ರೂ ಕಷ್ಟ ಐತಿ ನೋಡು.

ಕೊಟ್ರ :  ಹೌದು. ನಮ್ಮ ಪ್ರಾರ್ಥನೆಗೆ ದೇವರು ಒಲಿತಾನೋ ಬಿಡ್ತಾನೋ ಗೊತ್ತಿಲ್ಲ. ಕೊರೊನಾ ಅಂತೂ ಗ್ಯಾರಂಟಿಯಾಗಿ ಒಲಿತತಿ. ಗುಂಪು ಆದ್ರೆ ಗೋವಿಂದಾ!

ಈರ: ಅದು ನಿಜ. ಈಗ ನಮ್ಮ ಟಿ.ವಿ. ಚಾನಲ್‌ನವರು. ಸರ್ಕಾರ ಹಂಗೆ ಮಾಡಬೇಕಿತ್ತು. ಹಿಂಗೆ ಮಾಡಬೇಕಿತ್ತು. ನಾವು ಮೊದಲೇ ಎಚ್ಚರಿಕೆ ಕೊಟ್ಟಿದ್ವಿ. ನಮ್ಮ ಮಾತು ಕೇಳಬೇಕಿತ್ತು ಅಂತಾ ಲೌಡ್ ಸ್ಪೀಕರ್ ಹಾಕ್ಯಂಡು ಕೂಗಾಡ್ತರಲ್ಲಾ. ಈ ಸರ್ಕಾರದೋರು ಸುಮ್ಮನೇ ಅವರು ಹೇಳಿದಂಗೆ ಯಾಕೆ ಕೇಳಬಾರದು?

ಕೊಟ್ರ: ಆಲ್ ರೈಟ್. ನಮ್ಮ ಪತ್ರಕರ್ತ ಪರಮೇಶಣ್ಣ, ಮಾಧ್ಯಮದ ಮಲ್ಲೇಶಣ್ಣ ಹೇಳ್ತಿದ್ರು. ಈ ಕೆಲವು ಟಿ.ವಿ. ನ್ಯೂಸ್ ನಿರ್ವಾಹಕರನ್ನೇ
ಸಿ.ಎಂ., ಆರೋಗ್ಯ ಮಂತ್ರಿ, ವೈದ್ಯಕೀಯ ಶಿಕ್ಷಣ ಮತ್ತು
ಗೃಹ ಮಂತ್ರಿಗಳನ್ನಾಗಿ ಮಾಡಿಬಿಟ್ಟರೆ ಒಳ್ಳೆಯದು ಅಂತಾ.

ಈರ: ಹೌದಲ್ಲೋ ಒಳ್ಳೆಯ ಐಡಿಯಾ. ನಾವೆಲ್ಲರೂ ಹಂಗೇ ಯಾಕೆ ಮಾಡಬಾರದು?

ಕೊಟ್ರ: ಆಲ್ ರೈಟ್. ನಾನೂ ಅವರಿಗೆ ಅದನ್ನೇ ಕೇಳಿದೆ.

ಈರ: ಅದಕ್ಕೆ ಅವರು ಏನಂತಾರೆ?

ಕೊಟ್ರ: ಅವರೆಲ್ಲಾ ಬರೀ ಮಾತಿನಲ್ಲೇ ಕೊರೊನಾ ಕಂಟ್ರೋಲ್ ಮಾಡೋದರಿಂದ ಯಾವ ಸಮಸ್ಯೆನೂ ಇರೋಲ್ಲ. ಪತ್ರಿಕೆಯಲ್ಲಿ ನಮಗೆ ಕೊರೊನಾ ಬಗ್ಗೆ ಬರೆಯೋಕೂ ಆಗೋಲ್ಲ.

ಈರ: ಅಂದ್ರೇ !?

ಕೊಟ್ರ: ಬರೆಯೋಕೆ ಪತ್ರಕರ್ತರು ಇರೋಲ್ಲ. ಟಿ.ವಿ. ನ್ಯೂಸ್ ಓದೋಕೆ ನಿರ್ವಾಹಕರೂ ಇರೋಲ್ಲ. ನೋಡೋಕೆ ಜನಾನೇ ಇರೋಲ್ಲ !

ಈರ: ಹಂಗಾದ್ರೇ ಎಲ್ಲರೂ?

ಕೊಟ್ರ: ಕೋವಿಡಾಯ ನಮಃ !!!

ಥಕಾ..ಥಕಾ...ಶಥಕಾ! - Janathavani

ಆರ್.ಟಿ. ಅರುಣ್‌ಕುಮಾರ್
[email protected]

error: Content is protected !!