ಮಾಲಾಧಾರಿಗಳಲ್ಲಿ ಶ್ರದ್ಧೆ, ಭಕ್ತಿ ಮುಖ್ಯ

ಮಾಲಾಧಾರಿಗಳಲ್ಲಿ ಶ್ರದ್ಧೆ, ಭಕ್ತಿ ಮುಖ್ಯ

ಜಗಳೂರು:  ಶ್ರೀ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಕಿವಿಮಾತು

ಜಗಳೂರು, ಮಾ.31- ಮಾಲಾಧಾರಿಗಳು ಶ್ರದ್ಧೆ-ಭಕ್ತಿಯಿಂದ ನಡೆದುಕೊಳ್ಳಬೇಕು. ಮದ್ಯ ಸೇವನೆ, ಗುಟ್ಕಾ ಚಟಗಳಿಂದ ದೂರವಿರಬೇಕು ಎಂದು ಕಣ್ವಕುಪ್ಪೆ ಗವಿಮಠದ ಶ್ರೀ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ತಾಲ್ಲೂಕಿನ ಸಂತೆ ಮುದ್ದಾಪುರ ಗ್ರಾಮದ ಶ್ರೀ ಸಂಜೀವ ಮೂರ್ತಿ, ಶ್ರೀ ಬೇಡಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ  ಮಾಲಾಧಾರಿಗಳಿಗೆ ಮಾಲಾಧಾರಣೆ ಮಾಡಿ, ಶ್ರೀಗಳು ಆಶೀರ್ವಚನ ನೀಡಿದರು.

ಮೊದಲು ನೀವು ತಂದೆ-ತಾಯಿಗಳಿಗೆ ಗೌರವ ನೀಡಬೇಕು. ಮಾಲೆಯನ್ನು ಧರಿಸಿದವರು ಮುಂಜಾನೆ ನಾಲ್ಕು ಗಂಟೆಗೆ ಏಳಬೇಕು. ಹನುಮಾನ್ ಚಾಲೀಸ್, ದೇವರ ಜಪ ಮಾಡಬೇಕು. ಸಾವು ಎಲ್ಲರಿಗೂ ಸಹಜ. ಆದರೆ ನಾವು ಮಾಡಿದ ಪುಣ್ಯದ ಕೆಲಸಗಳು ಮಾತ್ರ ನಮ್ಮನ್ನು ಕಾಪಾಡುತ್ತವೆ ಎಂದರು.

ಈ ಸಂಜೀವಮೂರ್ತಿ, ಬೇಡಿ ಆಂಜನೇಯ ಸ್ವಾಮಿಗೆ  ಐತಿಹಾಸಿಕ ಹಿನ್ನೆಲೆ ಇದೆ. ಇಲ್ಲಿ ಸಂತೆ ಮುದ್ದಾಪುರ ಎಂದು ಹೆಸರು ಬರಲು ಈ ಸ್ಥಳದಲ್ಲಿ ವಜ್ರ, ವೈಢೂರ್ಯದ ವ್ಯಾಪಾರ ಮಾಡುತ್ತಿದ್ದರು ಎನ್ನುವ ಇತಿಹಾಸ ಇದೆ.  ಇಂತಹ ಮೂರ್ತಿಗಳು ಸಿಗುವುದು ಭಾರತ ದೇಶದಲ್ಲಿ ಅತಿ ವಿರಳ ಎಂದು ಹೇಳಿದರು.

ಭಗವಂತ ಎಲ್ಲರಿಗೂ ಅವಕಾಶವನ್ನು ನೀಡುತ್ತಾನೆ. ಅದನ್ನು ನಾವು ಬಳಸಿಕೊಳ್ಳಬೇಕು. ಎಲ್ಲರೂ ನಿಯಮ ಪಾಲನೆಗಳನ್ನು ಮಾಡಬೇಕು. ಯಾರನ್ನೂ ಹೀಯಾಳಿಸಬಾರದು. ಯಾರಿಗೂ ಅಪಮಾನ ಮಾಡಬಾರದು. ಒಂದು ಪಕ್ಷ ಮಾಡಿದ್ದಲ್ಲಿ ಅವರ ಮುಂದೆ ಕೈಕಟ್ಟಿ ನಿಲ್ಲುವ ಪ್ರಸಂಗ ನಿಮಗೂ ಬರಬಹುದು. ಮಾಲಾಧಾರಣೆ ಮಾಡುವುದರಿಂದ ನಾವು ಸಿದ್ಧಿಯನ್ನು ಪಡೆಯಬಹುದು ಎಂದು   ಶ್ರೀಗಳು ಹೇಳಿದರು.

ಸಮಾರಂಭದಲ್ಲಿ ದೇವಸ್ಥಾನದ ಅರ್ಚಕ ಅಂಬರೀಶ್ ಮತ್ತು  ಇತರರು ಭಾಗವಹಿಸಿದ್ದರು.

error: Content is protected !!