ಇಂದು ವಿನಯ್ ಕುಮಾರ್ ನಾಮಪತ್ರ ಸಲ್ಲಿಕೆ

ದಾವಣಗೆರೆ, ಏ.16-  ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ನಾಳೆ ದಿನಾಂಕ 17ರ ಬುಧವಾರ ನಾಮಪತ್ರ ಸಲ್ಲಿಸುವುದಾಗಿ ಜಿ.ಬಿ.ವಿನಯ್ ಕುಮಾರ್ ತಿಳಿಸಿದ್ದಾರೆ.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಡಿದ್ದು ದಿನಾಂಕ 18ರಂದು ನಾಮಪತ್ರ ಸಲ್ಲಿಸಲು ತೀರ್ಮಾನಿಸಲಾಗಿತ್ತು. ಆದರೆ, ಅಂದು ಕಾಂಗ್ರೆಸ್ ರಾಲಿ ಇದ್ದು, ಮೆರವಣಿಗೆಯಲ್ಲಿ ಗೊಂದಲ ಸೃಷ್ಟಿಯಾಗಬಾರದೆಂದು 17ರಂದು ರಾಲಿ  ನಡೆಸಲಾಗುತ್ತದೆ ಎಂದು ಹೇಳಿದರು.

 ಬುಧವಾರ ಬೆಳಿಗ್ಗೆ 10ಕ್ಕೆ ಶ್ರೀ ದುರ್ಗಾಂಬಿಕಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ದರ್ಗಾಕ್ಕೆ ತೆರಳಿ ಹೊದಿಕೆ ಸಲ್ಲಿಸಿ, ನಂತರ ಶ್ರೀ ಬೀರಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಬಹಿರಂಗ ಸಭೆ ನಡೆಸಿ ಪಿ.ಬಿ.ರಸ್ತೆಯ ಮೂಲಕ ಜಿಲ್ಲಾಧಿಕಾರಿಗಳ ಕಛೇರಿವರೆಗೆ ಬೃಹತ್ ರಾಲಿಯೊಂದಿಗೆ ತೆರಳಲಾಗುವುದು.

ಮಾರ್ಗ ಮಧ್ಯೆ ಬರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ, ದೇವರಾಜ ಅರಸು ಪ್ರತಿಮೆ ಸೇರಿದಂತೆ ಇತರೆ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಲಾಗುವುದು ಎಂದು ವಿನಯ್ ಕುಮಾರ್ ವಿವರಿಸಿದರು.

ಯಾವ ಕಾರಣಕ್ಕೂ ನಾನು ನಾಮಪತ್ರ ಹಿಂಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ನಾನು ಯಾರನ್ನೂ ಸೋಲಿಸಲು ರಾಜಕೀಯಕ್ಕೆ ಬಂದಿಲ್ಲ. ಹೊಸ ಮುಖದ ಅವಶ್ಯಕತೆ ಜನರಿಗೆ ಇದೆ. ಕೆಲಸ ಮಾಡಲು ವಿನಯ ಪಡೆ ಸಿದ್ದವಾಗಿದೆ. 1946 ಬೂತ್‌ಗಳಲ್ಲಿ ಸ್ವಯಂ ಪ್ರೇರಿತರಾಗಿ ಕೆಲಸ ಮಾಡಲು ಮುಂದೆ ಬಂದಿದ್ದಾರೆ. ಒಟ್ಟಾರೆ ದಾವಣಗೆರೆ ಲೋಕಸಭಾ ಚುನಾವಣೆಯಲ್ಲಿ ಅಕ್ಕೋರ್ ನೋಟು, ವಿನಯ್ ಕುಮಾರ್ ಗೆ ಓಟು ಎನ್ನುವ ಪರಿಸ್ಥಿತಿ ನಿರ್ಮಾಣ ಆಗಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಆಮ್ ಆದ್ಮಿ ಪಕ್ಷದ ಚಂದ್ರು ಬಸವಂತ್, ಹಾಲಸ್ವಾಮಿ, ರಾಜಶೇಖರ, ಬಸವರಾಜ್, ಅನಂತ ರಾಜ್ ಹೊಳಲು, ಪುರಂದರ ಲೋಕಿಕೆರೆ ಇತರರು ಇದ್ದರು.

error: Content is protected !!