ಡಾ. ಸದ್ಯೋಜಾತ ಶ್ರೀಗಳ ಆದರ್ಶ ಅನುಕರಣೀಯ

ಡಾ. ಸದ್ಯೋಜಾತ ಶ್ರೀಗಳ ಆದರ್ಶ ಅನುಕರಣೀಯ

 ಡಾ. ಸದ್ಯೋಜಾತ ಶಿವಾಚಾರ್ಯ ಸ್ವಾಮಿಗಳ 15 ನೇ ಸಂಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಅಥಣಿ ವೀರಣ್ಣ

ದಾವಣಗೆರೆ, ಮಾ. 5- ಲಿಂ. ಡಾ. ಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಯವರ ಆದರ್ಶ ಮತ್ತು ಸಂಸ್ಕಾರ ಅನುಕರಣೀಯ ಎಂದು ಬಾಪೂಜಿ ಎಂಬಿಎ ಕಾಲೇಜಿನ ಅಧ್ಯಕ್ಷ ಅಥಣಿ ಎಸ್. ವೀರಣ್ಣ ಹೇಳಿದರು.

ನಗರದ ಡಾ. ಸದ್ಯೋಜಾತ ಶಿವಾ ಚಾರ್ಯ ಮಹಾಸ್ವಾಮಿಗಳ ಹಿರೇಮಠದ ಆವರಣದಲ್ಲಿ ನಿನ್ನೆ ಏರ್ಪಾಡಾಗಿದ್ದ ಡಾ. ಸದ್ಯೋಜಾತ ಶಿವಾಚಾರ್ಯ ಸ್ವಾಮಿಗಳ 15 ನೇ ಸಂಸ್ಮರಣೋತ್ಸವ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.

ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸದ್ಯೋಜಾತ ಶ್ರೀಗಳ ಸೇವೆ ಅನನ್ಯವಾದುದು. ಅವರಲ್ಲಿದ್ದ ಆದರ್ಶ ಪ್ರಾಯ ವ್ಯಕ್ತಿತ್ವ, ಸ್ನೇಹಮಯ ಭಾವನೆ ಯನ್ನು ಯಾರೂ ಮರೆಯುವಂತಿಲ್ಲ. ಅವರ ಧಾರ್ಮಿಕ, ಶೈಕ್ಷಣಿಕ ಹಾಗೂ ಸಮಾಜ ಸೇವಾ ಕ್ಷೇತ್ರಗಳಲ್ಲಿ ಮಾಡಿರುವ ಸಾಧನೆಗಳು ಅವಿಸ್ಮರಣೀಯ ಎಂದರು.

ಜವಳಿ ವರ್ತಕ ಬಿ.ಸಿ. ಉಮಾಪತಿ ಮಾತನಾಡಿ, ಸದ್ಯೋಜಾತ ಶ್ರೀಗಳು ಕೇವಲ ಸ್ವಾಮೀಜಿ ಅಷ್ಟೇ ಅಲ್ಲದೇ ಕಾಯಕ ಯೋಗಿಯಾಗಿದ್ದರು. ಸರಳ ಸ್ವಭಾವ, ಜಾತ್ಯತೀತ ಮನೋಭಾವ ಹೊಂದಿದ ಅವರು ಮಾತೃಹೃದಯಿ ಗಳಾಗಿದ್ದರು ಎಂದು ಹೇಳಿದರು.

ನಿತ್ಯ ಮಠದ ಸ್ವಚ್ಛತೆ, ಅಡುಗೆಯನ್ನು ಶ್ರೀಗಳೇ ಮಾಡಿಕೊಳ್ಳುತ್ತಿದ್ದರು. ಹಿರೇಮಠ ಶಿವಾಚಾರ್ಯರ ತವರು ಮನೆ ಆಗಿತ್ತು. ಧರ್ಮ ಪ್ರಚಾರ ಕಾರ್ಯವನ್ನು ಅತ್ಯಂತ ಪ್ರಾಮಾಣಿಕವಾಗಿ ಮಾಡುತ್ತಿದ್ದರು ಎಂದರು.

ಬಹಳಷ್ಟು ಮಂದಿ ಬಸವಣ್ಣನವರ ಅನುಯಾಯಿಗಳು ಎಂದು ಹೇಳಿ ಬಸವ ತತ್ವವನ್ನು ಅವರೇ ಪಾಲಿಸುವುದಿಲ್ಲ. ಸದ್ಯೋಜಾತ ಸ್ವಾಮೀಜಿ ನುಡಿದಂತೆ ನಡೆದವರು. ಅವರದು ಆದರ್ಶದ ಬದು ಕಾಗಿತ್ತು. ಬೋಧಕರಾಗಿ, ಪ್ರಾಚಾರ್ಯ ರಾಗಿ ಸೇವೆ ಸಲ್ಲಿಸಿದ್ದಾರೆ ಎಂದು ಶ್ರೀಗಳ ಸೇವೆಯನ್ನು ಕೊಂಡಾಡಿದರು.

ದಾವಣಗೆರೆ-ಹರಿಹರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಎನ್.ಎ. ಮುರುಗೇಶ್ ಆರಾಧ್ಯ ಉಪಸ್ಥಿತರಿದ್ದರು. ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಂ. ದಾರುಕೇಶ್ `ಸಮಾಜಕ್ಕೆ ಸ್ವಾಮೀಜಿಗಳ ಕೊಡುಗೆ’ ಕುರಿತು ಮಾತನಾಡಿದರು. 

ಶ್ರೀಮತಿ ವಿಜಯ ಹಿರೇಮಠ ಪ್ರಾರ್ಥಿಸಿದರು. ಬಾಪೂಜಿ ಎಂ.ಬಿ.ಎ. ಕಾಲೇಜು ಪ್ರಾಚಾರ್ಯ ಡಾ. ಸ್ವಾಮಿ ತ್ರಿಭುವಾನಂದ ಸ್ವಾಗತಿಸಿದರು. ಶ್ರೀಮತಿ ಡಿ.ಆರ್. ಕೃಷ್ಣವೇಣಿ ಮತ್ತು ವಾಸವಿ   ಭಜನಾ ಮಂಡಳಿ ಸದಸ್ಯರು ಸಂಗಿತ ಕಾರ್ಯಕ್ರಮ ನಡೆಸಿಕೊಟ್ಟರು.

error: Content is protected !!