ಬಿಕೋ ಅನ್ನುತ್ತಿದ್ದ ರಾಣೇಬೆನ್ನೂರು

ರಾಣೇಬೆನ್ನೂರು, ಜು.12- ಕೊರೊನಾ ತಡೆಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಜಾರಿಗೊಳಿಸಿದ ಭಾನುವಾರದ ಕರ್ಫ್ಯೂಗೆ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಉತ್ತಮ ಸ್ಪಂದನೆ ದೊರೆತಿದೆ.

ಕರ್ಫ್ಯೂ ಹಿನ್ನೆಲೆಯಲ್ಲಿ ಬೆಳಿಗ್ಗೆಯಿಂದಲೇ ಕೇವಲ ಔಷಧಿ ಅಂಗಡಿಗಳು ಹಾಗೂ ಪೆಟ್ರೊಲ್ ಬಂಕ್‌ಗಳು ಮಾತ್ರ ತೆರೆದಿದ್ದವು. ಪ್ರಮುಖ ಮಾರುಕಟ್ಟೆ ಪ್ರದೇಶಗಳು ಸೇರಿದಂತೆ ನಗರದ ಎಲ್ಲಾ ಕಡೆಗಳಲ್ಲಿ ಅಂಗಡಿ ಮುಂಗಟ್ಟುಗಳ ಬಾಗಿಲು ಹಾಕಲಾಗಿತ್ತು. ಜನ ಸಂಚಾರ ತುಂಬಾ ವಿರಳವಾಗಿತ್ತು. 

ಕರ್ಫ್ಯೂ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸೇವೆಯನ್ನು ಬಂದ್ ಮಾಡಿದ್ದರಿಂದ ಬಸ್‌ನಿಲ್ದಾಣ ಸಂಪೂರ್ಣ ಖಾಲಿಯಾಗಿತ್ತು. ಕರ್ಫ್ಯೂ ಸಮಯದಲ್ಲಿ ಅನಗತ್ಯವಾಗಿ ಬೈಕ್‌ಗಳಲ್ಲಿ ಸಂಚರಿಸುವವರ ನಿಯಂತ್ರಣಕ್ಕಾಗಿ ನಗರದ ಪ್ರಮುಖ ಸ್ಥಳಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. 

ಆದರೂ ಕೂಡ ಕೆಲವು ಬೈಕ್ ಸವಾರರು ಔಷಧಿ ಚೀಟಿ ತೋರಿಸಿ ಪಾರಾಗುವ ಪ್ರಯತ್ನ ಮಾಡುತ್ತಿರುವುದು ಕಂಡುಬಂದಿತು. ನಗರದಲ್ಲಿ ಪ್ರಮುಖ ಸ್ಥಳಗಳಲ್ಲಿ ಕೆಲವು ತರಕಾರಿ ಮಾರುತ್ತಿದ್ದರು. ಇನ್ನೂ ನಗರದ ಎಂ.ಜಿ.ರಸ್ತೆಯಲ್ಲಿ ರಸ್ತೆ ದುರಸ್ತಿ ಕಾರ್ಯ ಅಬಾಧಿತವಾಗಿ ನಡೆದಿದ್ದು, ಕಾರ್ಮಿಕರು ಕೆಲಸದಲ್ಲಿ ನಿರತರಾಗಿದ್ದರು. ಇನ್ನೂ ಕೆಲವು ಕಡೆ ಕಟ್ಟಡ ಕಾರ್ಮಿಕರು ಕೆಲಸ ಮಾಡುವುದು ಕಂಡು ಬಂದಿತ್ತು.

error: Content is protected !!