ಬರಿದಾಗುತ್ತಿರುವ ಕೊಮಾರನಹಳ್ಳಿ ಕೆರೆ

ಬರಿದಾಗುತ್ತಿರುವ ಕೊಮಾರನಹಳ್ಳಿ ಕೆರೆ

ಮಲೇಬೆನ್ನೂರು, ಏ. 2- ಕಳೆದ ವರ್ಷ ಉತ್ತಮ ಮಳೆ ಆಗದ ಕಾರಣ ಕೊಮಾರನಹಳ್ಳಿಯ ಹೆಳವನಕಟ್ಟೆ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿಯ ಐತಿಹಾಸಿಕ ಕೆರೆ ಬತ್ತಿ ಬರಿದಾಗುತ್ತಿದ್ದು, ಜನ-ಜಾನುವಾರುಗಳಿಗೆ, ಪ್ರಾಣಿ – ಪಕ್ಷಿಗಳಿಗೆ ಸಂಕಷ್ಟ ಎದುರಾಗಿದೆ.

ಮಳೆಗಾಲದಲ್ಲಿ ಹಸಿರಿನಿಂದ ಕಂಗೊಳಿಸುವ ಗುಡ್ಡಗಳ ನಡುವೆ ಸುಮಾರು 97 ಎಕರೆ ವಿಸ್ತೀರ್ಣ ಹೊಂದಿರುವ ಈ ಕೆರೆ ಹೊಸಪೇಟೆ  -ಶಿವಮೊಗ್ಗ ಹೆದ್ದಾರಿಗೆ ಹೊಂದಿ ಕೊಂಡಿದೆ. ಈ ಕೆರೆ ನೀರಿನಿಂದ ತುಂಬಿದ ವೇಳೆ ರಸ್ತೆ ಪ್ರಯಾಣಿಕರ ಗಮನ ಸೆಳೆಯುವ ಪ್ರವಾಸಿ ತಾಣವೂ ಹೌದು. ಈ ಕೆರೆಗೆ ಭದ್ರಾ ಕಾಲುವೆಯಿಂದ 1 ಕ್ಯೂಸೆಕ್ಸ್ ನೀರು ಹರಿಸುವ ಆದೇಶವಿದ್ದರೂ ಈ ವರ್ಷ ನಾಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನೀರು ಹರಿದು ಬಾರದ ಕಾರಣ ಕೆರೆಗೆ ನೀರು ಹರಿಸಲು ಸಾಧ್ಯವಾಗಲಿಲ್ಲ.

ಕೆರೆ ಖಾಲಿ ಆಗುವ ಹಂತ ತಲು ಪುತ್ತಿರುವುದರಿಂದ ಜನ – ಜಾನು ವಾರಗಳಿಗೆ, ಪ್ರಾಣಿ ಪಕ್ಷಿಗಳಿಗೆ ಅಷ್ಟೇ ಅಲ್ಲದೆ ಕೆರೆ ಕೆಳಭಾಗದ ಮತ್ತು ಕೆರೆ ಹಿಂಭಾಗದ ರೈತರ ಬೋರ್ ವೆಲ್ ಗಳಲ್ಲಿ ನೀರು ಕೂಡಾ ಕಡಿಮೆ ಆಗಿದೆ. ಇದರಿಂದ ತೋಟದ ರೈತರೂ ಆತಂಕ ದಲ್ಲಿದ್ದಾರೆ. ಹೊನ್ನಾಳಿ ತಾಲ್ಲೂಕಿನ 18 ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸುವ ಯೋಜನೆಯಲ್ಲೂ ಈ ಕೆರೆ ಸೇರಿದ್ದು, ನದಿಯಿಂದ ಕೆರೆಗೆ ನೀರು ಪೂರೈಸುವ ಕಾಮಗಾರಿ ಕೂಡಾ ಪೂರ್ಣಗೊಳ್ಳುವ ಹಂತದಲ್ಲಿದೆ. ತುಂಗಭದ್ರಾ ನದಿಯಲ್ಲಿ ಈಗ ಭದ್ರಾ ನದಿ ನೀರು ಬಿಟ್ಟಿರುವುದರಿಂದ  ಕೆರೆಗೆ ನೀರು ಹರಿಸುವ ಪ್ರಾಯೋಗಿಕ ಪರೀಕ್ಷೆ ಮಾಡುವಂತೆ ಎಪಿಎಂಸಿ ಮಾಜಿ ಅಧ್ಯಕ್ಷ ಜಿ. ಮಂಜುನಾಥ್ ಪಟೇಲ್ ಅವರು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಕೆರೆ ಆಳ : ಕೆರೆಯಲ್ಲಿ ನೀರಿನ ಮಟ್ಟ ಇಳಿಕೆ ಆಗುತ್ತಿದ್ದಂತೆಯೇ ಕೊಮಾರನಹಳ್ಳಿ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರು ಕೆರೆ ಮಣ್ಣನ್ನು (ಹೂಳನ್ನು) ಜೆಸಿಬಿ – ಇಟಾಚಿಯಿಂದ ಲಾರಿಗಳಲ್ಲಿ ತುಂಬಿಸಿಕೊಂಡು ತಮ್ಮ ತಮ್ಮ ತೋಟ-ಗದ್ದೆಗಳಿಗೆ ಹಾಕಿಸಿಕೊಂಡಿದ್ದಾರೆ.

ಇದರಿಂದಾಗಿ ಕೆರೆ ಆಳವಾಗಿದ್ದು, ಮುಂದೆ ಕೆರೆಯಲ್ಲಿ ನೀರಿನ ಸಂಗ್ರಹ ಕೂಡಾ ಹೆಚ್ಚಾಗಲಿದೆ ಎಂದು ಗ್ರಾಮದ ಐರಣಿ ಮಹೇಶ್ವರಪ್ಪ ಅಭಿಪ್ರಾಯಪಟ್ಟರು.

ಸದ್ಯ ಕೆರೆಯಲ್ಲಿ ನೀರು ಗುಂಡಿಗಳಲ್ಲಿ ಮಾತ್ರ ಇದ್ದು, ಮಳೆ ಬಾರದಿದ್ದರೆ ಇನ್ನೊಂದು ವಾರದಲ್ಲಿ ಸಂಪೂರ್ಣ ಖಾಲಿ ಆಗುವ ಸಾಧ್ಯತೆ ಇದೆ. ಗುಂಡಿಗಳಲ್ಲಿರುವ ನೀರಿನಲ್ಲಿ ದೊಡ್ಡ ದೊಡ್ಡ ಮೀನುಗಳಿದ್ದು, ಪ್ರತಿದಿನ ಮೀನು ಹಿಡಿಯುತ್ತಿದ್ದಾರೆ.

error: Content is protected !!