ಜನಸಂಖ್ಯಾ ಸ್ಫೋಟ ನಿಲ್ಲಿಸುವುದೂ ಅಪಾಯ..!

ಜನಸಂಖ್ಯಾ ಸ್ಫೋಟ ಎಂಬುದು ಆಗಾಗ ಕೇಳಿ ಬರುವ ಚರ್ಚಾ ವಿಷಯ. ಭಾರತದ ಜನಸಂಖ್ಯೆ ಇನ್ನು ಕೆಲವೇ ವರ್ಷಗಳಲ್ಲಿ ಚೀನಾ ಮೀರಿಸಲಿದೆ, ಹೀಗಾಗಿ ಜನಸಂಖ್ಯೆಗೆ ಕಡಿವಾಣ ಹಾಕಬೇಕು ಎಂಬ ಅಭಿಪ್ರಾಯಗಳು ಆಗಾಗ ಲಘು ಚರ್ಚಾ ವಿಷಯಗಳಾಗಿ, ಅಷ್ಟರಲ್ಲೇ ಮುಗಿಯುತ್ತಿವೆ.

ಆದರೆ, ನಿಜಕ್ಕೂ ಜನಸಂಖ್ಯೆ ನಿಯಂತ್ರಿ ಸುವುದು ಹೇಗೆ? ಪ್ರಶ್ನೆಗೆ ಅಷ್ಟು ಸುಲಭದ ಉತ್ತರವಿಲ್ಲ. ಉದಾಹರಣೆಗೆ, ವಿಶ್ವದಲ್ಲೇ ಅತಿ ಹೆಚ್ಚಿನ ಜನಸಂಖ್ಯೆ ಹೊಂದಿರುವ ಚೀನಾ, ಕುಟುಂಬಕ್ಕೆ ಒಂದೇ ಮಗು ಎಂಬ ನೀತಿ ಜಾರಿಗೆ ತಂದಿತು. ಇದರಿಂದ ಜನಸಂಖ್ಯೆ ನಿಯಂತ್ರಣಕ್ಕೇನೋ ಬಂದಿತಾದರೂ, ಯುವ ಪೀಳಿಗೆಯ ಸಂಖ್ಯೆ ಕಡಿಮೆಯಾಯಿತು. ಇದ ರಿಂದಾಗಿ ಚೀನಾ ವಯಸ್ಸಾದವರೇ ಹೆಚ್ಚಾಗಿ ರುವ ದೇಶವಾಗುವ ಅಪಾಯ ಎದುರಿಸುತ್ತಿದೆ.

ಕೇವಲ ಚೀನಾ ಅಷ್ಟೇ ಅಲ್ಲದೆ, ಜಪಾನ್ ಹಾಗೂ ಜರ್ಮನಿ ಸೇರಿದಂತೆ ಹಲವು ದೇಶಗಳು ಈ ಸಮಸ್ಯೆ ಎದುರಿಸುತ್ತಿವೆ. ಜಪಾನ್, ಜರ್ಮನಿ ಮುಂತಾದ ದೇಶಗಳೇನೂ ಜನಸಂಖ್ಯೆ ಕಡಿವಾಣಕ್ಕೆ ಮುಂದಾಗಿರಲಿಲ್ಲ. ಅಲ್ಲಿನ ಮಹಿಳೆಯರು ವಿದ್ಯಾವಂತರಾಗಿದ್ದು, ಉದ್ಯೋಗಸ್ಥೆಯ ರಾಗಿದ್ದು ಹೆಚ್ಚು ಮಕ್ಕಳನ್ನು ಹೊಂದುವ ಜೀವನ ಪದ್ಧತಿಯನ್ನು ಬದಲಿಸಿತು.

ಜನಸಂಖ್ಯಾ ಸ್ಫೋಟ ನಿಲ್ಲಿಸುವುದೂ ಅಪಾಯ..! - Janathavani

ಭಾರತದಲ್ಲಿ ಜನಸಂಖ್ಯಾ ಸ್ಫೋಟದ ಬಗ್ಗೆ ಮಾತನಾಡಲಾಗುತ್ತದೆಯಾದರೂ, ವಾಸ್ತವ ಬೇರೆಯದೇ ಆಗಿದೆ. ದೇಶದ ಅರ್ಧಕ್ಕೂ ಹೆಚ್ಚು ರಾಜ್ಯಗಳು ಈಗಾಗಲೇ ಜನಸಂಖ್ಯೆಯಲ್ಲಿ ಸ್ಥಿರತೆ ಹೊಂದಿವೆ. ಅಷ್ಟೇ ಅಲ್ಲ, ಮುಂಬರುವ ದಿನಗಳಲ್ಲಿ ಜನಸಂಖ್ಯೆ ಇಳಿಮುಖವಾಗುವ ಸಾಧ್ಯತೆಯೂ ಇದೆ!

ಮನುಷ್ಯನ ಜನಸಂಖ್ಯೆ ಸ್ಥಿರವಾಗಿರಬೇಕಾದರೆ ಕುಟುಂಬದಲ್ಲಿ ಮಕ್ಕಳ ಜನನ ಪ್ರಮಾಣ 2.1ರಷ್ಟಿರಬೇಕು. ಅಂದರೆ ತಂದೆಗೆ ಒಂದು, ತಾಯಿಗೆ ಒಂದು ಮಗು ಇರಬೇಕು. ಅವಘಡದಿಂದ ಸಾವು ಇತ್ಯಾದಿ ಸಂಭವಿಸಿದರೆ ಇರಲಿ ಎಂದು 0.1 ಹೆಚ್ಚುವರಿ ಮಕ್ಕಳಿರಬೇಕು. ಕೇರಳ ಹಾಗೂ ಪಂಜಾಬ್‌ಗಳಲ್ಲಿ ಜನನ ಪ್ರಮಾಣ ಈಗ ಶೇ.1.6ಕ್ಕೆ ಕುಸಿದಿದೆ. ಅಂದರೆ ಈ ರಾಜ್ಯಗಳಲ್ಲಿ ಜನಸಂಖ್ಯೆ ಈಗಾಗಲೇ ಗರಿಷ್ಠ ಮಟ್ಟ ತಲುಪಿದ್ದು, ಮುಂಬರುವ ದಿನಗಳಲ್ಲಿ ಇಳಿಕೆಯಾಗಲಿದೆ.

ಭಾರತದಲ್ಲಿ ಈಗ ಜನಸಂಖ್ಯೆ 137 ಕೋಟಿ ತಲುಪಿದೆ ಎಂದು ಅಂದಾಜಿಸಲಾಗಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ – 4ರ ಪ್ರಕಾರ 2015-16ರಲ್ಲಿ ಭಾರತದ ಜನನ ದರ 2.2ಕ್ಕೆ ತಲುಪಿದೆ. ಇದು ಸ್ಥಿರತೆಯ ಅತ್ಯಂತ ಸಮೀಪವಾಗಿದೆ. ಕೆಲ ರಾಜ್ಯಗಳು ಸ್ಥಿರ ಜನಸಂಖ್ಯೆಯನ್ನು ತಲುಪಿವೆ. ಕರ್ನಾಟಕ ಹಿಮಾಚಲ ಪ್ರದೇಶ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಪಂಜಾಬ್, ತಮಿಳುನಾಡು, ಕೇರಳ ಹಾಗೂ ಆಂಧ್ರ ಪ್ರದೇಶಗಳು ಈಗಾಗಲೇ ಇದಕ್ಕೂ ಕೆಳ ಹಂತಕ್ಕೆ ಹೋಗಿವೆ.

ದೇಶದ 17 ರಾಜ್ಯಗಳು ಹಾಗೂ ಎಂಟು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜನಸಂಖ್ಯೆ ಪ್ರಮಾಣ ಸ್ಥಿರತೆಯಾಗುವ ಹಂತದಲ್ಲಿದೆ. ಮುಂದಿನ ಎರಡು ದಶಕಗಳಲ್ಲಿ ಈ ರಾಜ್ಯಗಳಲ್ಲಿ ಜನಸಂಖ್ಯೆ ತೀವ್ರ ಇಳಿಕೆಯಾಗುವ ಅಂದಾಜಿದೆ. 19 ವರ್ಷ ದೊಳಗಿನವರ ಜನಸಂಖ್ಯೆ ದೇಶಾದ್ಯಂತ ತೀವ್ರ ಇಳಿಕೆ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಶಾಲೆಗಳ ಸಂಖ್ಯೆ ಕಡಿಮೆ ಮಾಡಬೇಕು ಎಂದೂ 2019ರ ಆರ್ಥಿಕ ಸಮೀಕ್ಷೆಯಲ್ಲಿ ಸಲಹೆ ನೀಡಲಾಗಿತ್ತು.

ಶಿಕ್ಷಣವೇ ಜನಸಂಖ್ಯೆಗೆ ಮಾರಕ : ಮಹಿಳೆ ಹೆಚ್ಚು ಶಿಕ್ಷಣ ಪಡೆದಷ್ಟೂ ಹೊಂದುವ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತದೆ ಎಂಬುದು ಅಧ್ಯಯನಗಳು ತಿಳಿಸುತ್ತವೆ. ಬಿಹಾರದಲ್ಲಿ ಮಕ್ಕಳ ಜನನ ಪ್ರಮಾಣ 3.4, ಉತ್ತರಪ್ರದೇಶದಲ್ಲಿ 2.7, ಜಾರ್ಖಂಡ್‌ನಲ್ಲಿ 2.6ರಷ್ಟಿದೆ. ಈ ರಾಜ್ಯಗಳಲ್ಲಿ ಹತ್ತು ವರ್ಷಕ್ಕೂ ಹೆಚ್ಚು ಕಾಲ ಶಾಲೆಗೆ ಹೋದ ಹೆಣ್ಣು ಮಕ್ಕಳ ಸಂಖ್ಯೆ ರಾಷ್ಟ್ರೀಯ ಸರಾಸರಿಗಿಂತ ಸಾಕಷ್ಟು ಕಡಿಮೆ ಇದೆ. ದೇಶಾದ್ಯಂತ ಶಾಲೆಗೆ ಹೋಗದ ಮಹಿಳೆಯರು ಹೊಂದುವ ಸರಾಸರಿ ಮಕ್ಕಳ ಸಂಖ್ಯೆ 3.1 ಆಗಿದ್ದರೆ, 12 ವರ್ಷಕ್ಕೂ ಹೆಚ್ಚು ಕಾಲ ಶಾಲೆಗೆ ಹೋದ ಮಹಿಳೆಯರು ಹೊಂದುವ ಮಕ್ಕಳ ಸರಾಸರಿ 1.7ರಷ್ಟಾಗಿದೆ.

ಮಕ್ಕಳ ಹೆಚ್ಚಿಸುವುದು ಸುಲಭವಲ್ಲ : ಜನಸಂಖ್ಯೆ ನಿಯಂತ್ರಣ ಎಷ್ಟು ಕಷ್ಟವೋ, ಜನಸಂಖ್ಯೆ ಹೆಚ್ಚಳವೂ ಅಷ್ಟೇ ಕಷ್ಟ. ಚೀನಾ ಒಂದು ಮಗುವಿನ ನೀತಿ ಸಡಿಲಿಸಿದೆಯಾದರೂ, ಜನರು ಹೆಚ್ಚು ಮಕ್ಕಳ ಹೊಂದಲು ಬಯಸುತ್ತಿಲ್ಲ. ಏಕೆಂದರೆ, ಇಡೀ ಸಮಾಜ ಕಡಿಮೆ ಮಕ್ಕಳಿಗೆ ಹೊಂದಿಕೊಂಡಿದೆ.

ಜರ್ಮನಿ ಹಾಗೂ ಜಪಾನ್‌ಗಳಲ್ಲೂ ಇದೇ ಪರಿಸ್ಥಿತಿ ಇದೆ. ಜಪಾನ್‌ ಜನಸಂಖ್ಯಾ ಬೆಳವಣಿಗೆ ನಿಂತ ನಂತರ ಅಲ್ಲಿ ಯುವ ಪೀಳಿಗೆ ಕಡಿಮೆಯಾಗಿದೆ. ಇದು ಆರ್ಥಿಕ ಬೆಳವಣಿಗೆಯ ಮೇಲೆ ಕರಾಳ ಪರಿಣಾಮ ಬೀರಿದೆ. ಇದೇ ಪರಿಣಾಮ ಮುಂಬರುವ ದಿನಗಳಲ್ಲಿ ಚೀನಾ ಮೇಲೆ ಆಗಲಿದೆ ಎಂದು ಹೇಳಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಜನಸಂಖ್ಯೆ ನಿಯಂತ್ರಣದ ಕುರಿತು ಸಮಗ್ರ ಹಾಗೂ ಸಮರ್ಪಕ ಚರ್ಚೆಗಳು ನಡೆಯಬೇಕಿದೆ. ಸುಮ್ಮನೆ ಆಗಾಗ ಜನಸಂಖ್ಯಾ ಸ್ಫೋಟ ಎಂದು ಬೊಬ್ಬೆ ಹಾಕಿದರೆ ದೇಶದ ಹಿತ ಮಾಡಿದಂತೆ ಆಗುವುದಿಲ್ಲ. ಬಲಿಷ್ಠ ಭಾರತಕ್ಕಾಗಿ ಕುಟುಂಬಗಳ ಸ್ವರೂಪ ಯಾವ ರೀತಿ ಇರಬೇಕು ಎಂಬ ಬಗ್ಗೆ ರಚನಾತ್ಮಕ ಚರ್ಚೆಗಳ ಗಂಭೀರ ಅಗತ್ಯವಿದೆ.


ಮಕ್ಕಳ ಪಾಲನೆಯನ್ನೂ ಜಿ.ಡಿ.ಪಿ.ಗೆ ಸೇರಿಸಬೇಕೇ…?

ಗೃಹಿಣಿಯರು ಮನೆಯನ್ನು ನಿಭಾಯಿಸುವ ಮೂಲಕ ದೇಶಕ್ಕೆ ನೀಡುವ ಕೊಡುಗೆ ಎಷ್ಟು? ಮಗುವೊಂದನ್ನು ಸಾಕಿ ಸಲಹುವ ತಾಯಿ ದೇಶದ ಜಿ.ಡಿ.ಪಿ.ಗೆ ಎಷ್ಟು ಕೊಡುಗೆ ನೀಡಿದ್ದಾರೆ?

ಜಪಾನ್ ಮುಂತಾದ ದೇಶಗಳಲ್ಲಿ ಜನಸಂಖ್ಯೆ ಸ್ಥಗಿತಗೊಂಡು ದೇಶದ ಬೆಳವಣಿಗೆಯೇ ಮುಗ್ಗರಿಸಿದೆ. ಈ ಹಿನ್ನೆಲೆಯಲ್ಲಿ ನೋಡಿದಾಗ ತಾಯಿಯೊಬ್ಬರು ಮಗವನ್ನು ಸಲಹಿ ಬೆಳೆಸುವುದು ದೇಶದ ಆರ್ಥಿಕ ವ್ಯವಸ್ಥೆಗೆ ಎಷ್ಟು ಮಹತ್ವದ್ದು ಎಂಬುದು ಗೊತ್ತಾಗುತ್ತದೆ.

ಆದರೆ, ಜಿ.ಡಿ.ಪಿ. ಲೆಕ್ಕಾಚಾರ ಹಾಕುವಾಗ ಗೃಹಿಣಿ ನೀಡುವ ಕೊಡುಗೆಯನ್ನು ಲೆಕ್ಕ ಹಾಕುತ್ತಿಲ್ಲ. ಜೀವನವಿಡೀ ಕುಟುಂಬಕ್ಕೆ ಮುಡುಪಾಗಿಡುವ ಗೃಹಿಣಿ ಕಾನೂನು ಬದ್ದವಾಗಿ ಗಂಡನ ಆದಾಯದಲ್ಲಿ ಯಾವುದೇ ಪಾಲು ಪಡೆಯಲು ಸಾಧ್ಯವಾಗದು. ಆದರೆ, ಜಗಳವಾಡಿ ವಿಚ್ಛೇದನ ಪಡೆದ ಸಂದರ್ಭದಲ್ಲಿ ಮಾತ್ರ ಆಸ್ತಿ ಪಾಸ್ತಿಯ ಮೇಲೆ ಹಕ್ಕು ಪಡೆಯಬಹುದು!

ಮಕ್ಕಳನ್ನು ಹೊಂದುವುದು ಹಾಗೂ ಕುಟುಂಬ ನಿರ್ವಹಿಸುವುದು ಕೇವಲ ಭಾವನಾತ್ಮಕ ವಿಷಯವಷ್ಟೇ ಅಲ್ಲ, ದೇಶದ ಆರ್ಥಿಕತೆಯ ವಿಷಯವೂ ಆಗಿದೆ. ಈ ಹಿನ್ನೆಲೆಯಲ್ಲಿ ದುಡಿಯುವ ಮಹಿಳೆ ದೇಶದ ಆರ್ಥಿಕತೆಗೆ ನೀಡುವಷ್ಟೇ ಕೊಡುಗೆಯನ್ನು ಗೃಹಿಣಿಯರೂ ಕೊಡುತ್ತಿ ದ್ದಾರೆ. ಮುಂಬರುವ ದಿನಗಳಲ್ಲಿ ಈ ಬಗ್ಗೆ ಲೆಕ್ಕಾಚಾರ ಹಾಕಿ ಗೃಹಿಣಿಯರಿಗೆ ಗೌರವ ನೀಡಿದರೆ ತಪ್ಪಾಗುತ್ತದೆಯೇ?


ಎಸ್.ಎ. ಶ್ರೀನಿವಾಸ್

9538641532
[email protected]

error: Content is protected !!