ಲಾಕ್‌ಡೌನ್‌ನಿಂದಾಗಿ ಗಳಿಸಿದ್ದೇನು? ಕಿವಿಗೂ ರೆಸ್ಟು – ಆರೋಗ್ಯವೂ ಬೆಸ್ಟು

ಕೊರೊನಾ ಲಾಕ್‌ಡೌನ್ ನಾವೆಲ್ಲಾ ಗಳಿಸುತ್ತಿರುವುದೇನೆಂಬ ಮಾಲಿಕೆಯ ಮೊದಲ ಲೇಖನದಲ್ಲಿ ಶುದ್ಧ ಗಾಳಿ ಪಡೆಯುತ್ತಿರುವ ಬಗ್ಗೆ ಬರೆದಿದ್ದೆ. ಶಬ್ಧ ಮಾಲಿನ್ಯ ತಗ್ಗಿದ ಬಗ್ಗೆ ಈ ಲೇಖನದಲ್ಲಿ ಪ್ರಸ್ತಾಪಿಸುವೆ.

ದೃಷ್ಟಿ, ಶಬ್ಧ, ಸ್ಪರ್ಶ, ರುಚಿ, ವಾಸನೆ ಗಳಿಂದಲೇ ಜೀವಿಗಳಿಗೆಲ್ಲಾ ಪ್ರಪಂಚದ ಅನುಭವವಾಗುವುದು. ಇಂತಹ ಶಬ್ಧವು ನಮ್ಮ ಕಿವಿಗೂ ಕೇಳಿಸಲಾರದಷ್ಟು ಕನಿಷ್ಠವೂ ಇರಬಾರದು. ನಮ್ಮ ಕಿವಿಗಳೇ ಒಡೆದು ಹೋಗುವಷ್ಟು ಗರಿಷ್ಠವೂ ಆಗಬಾರದು. ಶಬ್ಧವನ್ನು ಡೆಸಿಬಲ್ ಮಾಪನದಲ್ಲಿ ಅಂದರೆ ಡಿಬಿ ಎಂದು ವಿಶ್ಲೇಷಿಸುತ್ತಾರೆ. ಸರಳವಾಗಿ ಹೇಳಬೇಕೆಂದರೆ ಒಂದು ಸೂಜಿ ಕೆಳಗೆ ಬಿದ್ದಾಗ ಆಗುವ ಶಬ್ಧ 10 ಡಿ.ಬಿ. ಆದರೆ, ಒಂದು ಲೋಟ ಕೆಳಗೆ ಬಿದ್ದಾಗ ಆಗುವ ಶಬ್ಧ 20 ಡಿ.ಬಿ. ಆಗಬಹುದು. ಅಂದರೆ ಸೂಜಿ ಬಿದ್ದ ಶಬ್ಧದ ಎರಡರಷ್ಟಲ್ಲ, ನೂರರಷ್ಟು (ಹಂಡ್ರೆಡ್ ಟೈಮ್ಸ್) ಜಾಸ್ತಿ! ಡೆಸಿಬಲ್ ಮಾಪನದ ವೈಶಿಷ್ಟವೆಂದರೆ ಪ್ರತಿ ಹತ್ತು ಏರಿಕೆಯೂ ನೂರರಷ್ಟು ಶಬ್ಧ ಅಂದರೆ ಸದ್ದಿನ ತೀವ್ರತೆ ಜಾಸ್ತಿಯಾಗುತ್ತದೆ. ನಾವು ಮಾನವ ಜೀವಿಗಳು. 60 ಡೆಸಿಬಲ್ ವರೆಗೆ ಸಹಿಸಿಕೊಳ್ಳಬಹುದು. 60 ಡಿ.ಬಿ ದಾಟಿದರೆ ಹಿಂಸೆ ಎನಿಸುತ್ತದೆ. ಆದರೂ 140ರವರೆಗೂ ಹಿಂಸೆ ಅನುಭವಿಸುತ್ತಾ ಆಲಿಸಬಹುದು. 180 ಡಿಬಿ ದಾಟಿದರೆ ನಮಗೆ ಪ್ರಜ್ಞೆಯೇ ತಪ್ಪುತ್ತದೆ. ಸಾವೂ ಬರಬಹುದು. ಭಾರತದ ಬಹುತೇಕ ನಗರಗಳಲ್ಲಿ ಈ ಡಿಬಿ 60 ನ್ನು ದಾಟಿದೆ. ದೆಹಲಿ, ಬೆಂಗಳೂರು, ಚೆನ್ನೈ, ಹೈದ ರಾಬಾದ್, ಕೊಲ್ಕತ್ತಾ, ಲಕ್ನೋ, ಮುಂಬೈ ಮುಂತಾದ ಮಹಾ ನಗರಗಳಲ್ಲಿ ಇದು ಮಿತಿ ಮೀರುತ್ತಿದೆ. ಇದಕ್ಕೇ ಶಬ್ಧಮಾಲಿನ್ಯ ಎನ್ನಲಾಗುತ್ತಿದೆ. ಸತತ ಶಬ್ಧ ಮಾಲಿನ್ಯದಿಂದ ಮನುಷ್ಯನ ರಕ್ತದೊತ್ತಡ ಜಾಸ್ತಿಯಾಗುತ್ತದೆ. ಅಜೀರ್ಣ, ಶೀಘ್ರ ಕೋಪ, ನಿದ್ರಾಹೀನತೆ, ಹೃದಯ ರೋಗ, ಮನೋರೋಗ, ಎದೆನೋವು, ಬಾಯಿಹುಣ್ಣು, ಕಿವುಡುತನ ಮುಂತಾದ ದುಷ್ಪರಿಣಾಮಗಳಾಗುತ್ತವೆ.

ನಮ್ಮ ವಾಹನಗಳ ಶಬ್ಧ ನಮಗೂ ಮತ್ತು ಇತರರಿಗೂ ಎಲ್ಲಾ ವಾಹನಗಳ ಶಬ್ಧ ಎಲ್ಲರಿಗೂ ತೀವ್ರ ದುಷ್ಪರಿಣಾಮ ಉಂಟು ಮಾಡುತ್ತಿವೆ. ಲಾಕ್‌ಡೌನ್ ನಿಂದಾಗಿ ವಾಹನಗಳ ಓಡಾಟ ಬಹುತೇಕ ಸ್ತಬ್ಧವಾಗಿದೆ. ಕಾರ್ಯಕ್ರಮ, ಸಮಾರಂಭ, ಸಮಾವೇಶ, ಉತ್ಸವ, ಜಾತ್ರೆ, ಆಚರಣೆ, ಪ್ರತಿಭಟನೆ ಮುಂತಾಗಿ ಯಾವುವೂ  ಇಲ್ಲವಾಗಿರುವುದರಿಂದ ಧ್ವನಿವರ್ದಕ, ಡ್ರಮ್ಮು, ಡೋಲು, ಪಟಾಕಿಗಳೂ ಇಲ್ಲ. ಇವೆಲ್ಲಾ ಸಾಂದರ್ಭಿಕ ಶಬ್ಧ ಮಾಲಿನ್ಯ ಮಾಡುತ್ತಿದ್ದರೆ ಬೈಕು, ಆಟೋ, ಕಾರು ಮುಂತಾದವು ನಿರಂತರ ಶಬ್ಧ ಮಾಲಿನ್ಯ ಕಾರಕಗಳು.

ಲಾಕ್ ಡೌನ್ ನಿಂದಾಗಿ ಶಬ್ಧ ಮಾಲಿನ್ಯ ಎಷ್ಟು ಕಡಿಮೆಯಾಗಿದೆ ಎಂದರೆ ಬಹುಶಃ ಅದೀಗ ಸದ್ಯ 60 ಡಿಬಿಗಿಂತಲೂ ಹಿಂದೆ ಬಂದಿರಬಹುದು. ಇದರಿಂದಾಗಿ ನಮ್ಮಲ್ಲಿ ರಕ್ತದೊತ್ತಡ ಅಂದರೆ ಬಿ.ಪಿ., ಹೃದಯರೋಗ, ಮನೋವೈಕಲ್ಯ, ಅಜೀರ್ಣ, ಶೀಘ್ರ ಕೋಪ, ಎದೆನೋವು, ಬಾಯಿಹುಣ್ಣು, ನಿದ್ರಾಹೀನತೆ, ತಲೆನೋವು ಮುಂತಾದವು ಕಡಿಮೆಯಾಗಿವೆ. ಇದೂ ಸಹ ಲಾಕ್‌ಡೌನ್‌ನಿಂದಾಗಿ ನಾವು ಗಳಿಸಿರುವ ಆರೋಗ್ಯವಲ್ಲವೇ! ಲಾಕ್‌ಡೌನ್ ಆರ್ಥಿಕ  ನಷ್ಟದ ಬೆಲೆ ಕಟ್ಟಬಹುದು. ಆದರೆ, ಈ ಆರೋಗ್ಯ ಗಳಿಕೆಯ ಬೆಲೆ ಕಟ್ಟಲಾದೀತೆ? ಅಂದಾಕ್ಷಣ ನಾನು ಈ ಹಿಂದೆಯೂ ಹೇಳಿದಂತೆ ಲಾಕ್‌ಡೌನ್ ಶಾಶ್ವತವಾಗಿ ಇರಬೇಕೆಂದಲ್ಲ, ಆದರೆ ಲಾಕ್ ಡೌನ್ ನಿಂದಾಗಿ ಏನೇನೋ ಕಳೆದುಕೊಂಡೆವೆಂದು ಪರಿತಪಿಸುವುದಕ್ಕಿಂತಾ ಏನೆಲ್ಲಾ ಗಳಿಸಿದ್ದೇವೆಂದು ಸಮಾಧಾನಪಟ್ಟುಕೊಳ್ಳುವ ಸಕಾರಾತ್ಮಕ ಚಿಂತನೆ ನಮ್ಮ ಆರೋಗ್ಯವನ್ನೂ, ರೋಗ ನಿರೋಧಕ ಶಕ್ತಿಯನ್ನೂ  ಹೆಚ್ಚಿಸುತ್ತದೆ. ಮುಂದಿನ ಲೇಖನದಲ್ಲಿ ಆಹಾರದ ಬಗ್ಗೆ ಪ್ರಸ್ತಾಪಿಸುವ ಪ್ರಯತ್ನ ಮಾಡುವೆ.


ಹೆಚ್.ಬಿ. ಮಂಜುನಾಥ್, ಹಿರಿಯ ಪತ್ರಕರ್ತರು, ದಾವಣಗೆರೆ.

error: Content is protected !!