ಹುಸಿ ಭರವಸೆ ನೀಡುವ ಮೋದಿ

ಹುಸಿ ಭರವಸೆ ನೀಡುವ ಮೋದಿ

ಜಗಳೂರಲ್ಲಿ ದೇವೇಂದ್ರಪ್ಪ ಪರ ಮತಯಾಚಿಸಿದ ಸಿದ್ದರಾಮಯ್ಯ

ಜಗಳೂರು, ಏ.30- ಪ್ರಧಾನಿ ಮೋದಿ ಅವರ 2 ಕೋಟಿ ಉದ್ಯೋಗ ಸೃಷ್ಠಿ, ಜನ್‌ ಧನ್ ಖಾತೆಗೆ  15 ಲಕ್ಷ ಹಣ ಜಮಾ ಎಲ್ಲವೂ ಹುಸಿ ಭರವಸೆಗಳಾಗಿವೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿವೆ. ಕೇವಲ ಪ್ರಚಾರಕ್ಕಾಗಿ ಸಬ್ ಕಾ ಸಾಥ್ ಸಬ್ ಕಾವಿಕಾಸ್, ಮೈ ಕಾವುಂಗಾ, ನ ಕಾನೆದುಂಗಾ. ಅಚ್ಚೇದಿನ್ ಘೋಷಣೆಗಳು ಎಲ್ಲಿವೆ?  ಎಂದು  ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದರು.

ಪಟ್ಟಣದ ಬಯಲು ರಂಗಮಂದಿರದ ಆವರಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ದೇವೇಂದ್ರಪ್ಪ ಅವರ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಮೀಸಲಾತಿ ಹೆಚ್ಚಳ ಪ್ರಸ್ತಾವ ಕೇಂದ್ರದಲ್ಲಿ ತಿರಸ್ಕಾರಗೊಂಡಿದೆ. ಮೂಗಿಗೆ ತುಪ್ಪ ಹಚ್ಚುವ ಕೆಲಸ ಬಿಜೆಪಿ ಮಾಡುತ್ತಿದೆ. 5 ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿಯವರು ವ್ಯಂಗ್ಯವಾಡುತ್ತಾರೆ. ಆದರೆ ನಾವು ಬಸವಣ್ಣನವರ ಅನುಯಾಯಿ. ನುಡಿದಂತೆ ನಡೆಯುತ್ತೇವೆ ಎಂದು ಹೇಳಿದರು.

ಪಕ್ಷ ನಿಷ್ಠೆಯಿಲ್ಲದೆ ಪಕ್ಷೇತರವಾಗಿ ಸ್ಪರ್ಧಿಸಿರುವ ಮಾಜಿ ಶಾಸಕ ಎಚ್.ಪಿ.ರಾಜೇಶ್ ಅವರಿಗೆ ನನ್ನ ಯಾವುದೇ ಬೆಂಬಲವಿಲ್ಲ. ಅವರನ್ನು ಸಂಪೂರ್ಣ  ತಿರಸ್ಕರಿಸಿ ಅಧಿಕೃತ ಕಾಂಗ್ರೆಸ್ ಅಭ್ಯರ್ಥಿ ಬಿ.ದೇವೇಂದ್ರಪ್ಪ ರನ್ನು ಗೆಲ್ಲಿಸಿ ಎಂದು ಕರೆ ನೀಡಿದರು.

 ಜಿಲ್ಲಾ ಕಾಂಗ್ರೆಸ್ ಸಮಿತಿ, ಎಐಸಿಸಿ ವೀಕ್ಷಕರ ವರದಿ ಅನ್ವಯ ಬಿ.ದೇವೇಂದ್ರಪ್ಪ ಅವರಿಗೆ ಟಿಕೆಟ್ ಘೋಷಣೆಯಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ. ಈ ಬಾರಿ ನಿಮ್ಮ ಬಗ್ಗೆ ಗೆಲುವಿನ ಅಭಿಪ್ರಾಯವಿಲ್ಲ ಎಂದು ಎಚ್.ಪಿ.ರಾಜೇಶ್ ಗೆ ಮನವರಿಕೆ ಮಾಡಿದರೂ ಬಂಡಾಯವಾಗಿ ಪಕ್ಷೇತರವಾಗಿ ಸ್ಪರ್ಧಿಸಿದ್ದಾರೆ. ಅವರನ್ನು ಪಕ್ಷದಿಂದ ಶೀಘ್ರ ಉಚ್ಛಾಟನೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.

ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ ಬಿ.ದೇವೇಂದ್ರಪ್ಪ ಅವರ ಗೆಲುವು ಅಷ್ಟೇ ಸತ್ಯ. ಅವರಿಗೆ ಮತ ನೀಡಿದರೆ ನನಗೆ ನೀಡಿದಂತೆ ಎಂದರು.

ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಪ್ರಬಲ ಆಕಾಂಕ್ಷಿಯಾಗಿದ್ದ ಕೆ.ಪಿ. ಪಾಲಯ್ಯ ನನಗೆ ಆತ್ಮೀಯ. ಆದರೆ ಟಿಕೆಟ್ ಕೈತಪ್ಪಿದ್ದರೂ ಪಕ್ಷ ನಿಷ್ಠೆ ಹೊಂದಿದ ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ ಎಂದು ಪ್ರಶಂಸಿಸಿದರು.

ನಾನು ಮುಖ್ಯಮಂತ್ರಿಯಾಗಿದ್ದ ವೇಳೆ ಜಗಳೂರಿಗೆ 57ಕೆರೆ‌ ತುಂಬಿಸುವ ಯೋಜನೆಗೆ ಹಣ ಮಂಜೂರು ಮಾಡಿದ್ದೆ. 3000 ಕೋಟಿ ರೂ. ಅನುದಾನ ಒದಗಿಸಿದ್ದೆ. ಆದರೆ ಎಸ್.ವಿ.ರಾಮಚಂದ್ರ ಅವರ 5 ವರ್ಷಗಳ ಆಡಳಿತಾವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗಿದೆ ಎಂದು ಆರೋಪಿಸಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅಸಗೋಡು ಜಯಸಿಂಹ ಮಾತನಾಡಿ, ಈ ಬಾರಿ 150 ವಿಧಾನಸಭಾ  ಕ್ಷೇತ್ರಗಳಲ್ಲಿ ಗೆಲುವು ನಿಶ್ಚಿತ. 25 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ದೇವೇಂದ್ರಪ್ಪ ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

ಕಾಂಗ್ರೆಸ್ ಅಭ್ಯರ್ಥಿ ಬಿ.ದೇವೇಂದ್ರಪ್ಪ ಮಾತನಾಡಿ, 2008‌ರಿಂದ ಎಸ್.ಟಿ ಮೀಸಲು ಜಗಳೂರು ವಿಧಾನ ಸಭಾ ಕ್ಷೇತ್ರದಲ್ಲಿ ಇಬ್ಬರೂ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇದೀಗ ಪಕ್ಷ ತೊರೆದು ಅದೇ ಪಕ್ಷದ‌ ಮೇಲೆ ಸೆಡ್ಡು ಹೊಡೆಯುತ್ತಿದ್ದಾರೆ.ಅವರಿಗೆ  ತಕ್ಕ‌ಪಾಠ ಕಲಿಸಬೇಕಿದೆ ಎಂದು ಕಿಡಿಕಾರಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಪ್ರಕಾಶ್ ರಾಥೋಡ್, ಕೆಪಿಸಿಸಿ ಎಸ್.ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ. ಪಾಲಯ್ಯ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ, ತಾಲ್ಲೂಕು ಸಂಯೋಜಕ‌ ಕಲ್ಲೇಶ್ ರಾಜ್ ಪಟೇಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್, ಎಸ್.ಮಂಜುನಾಥ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ನಿಖಿಲ್ ಕೊಂಡಜ್ಜಿ, ಮುಖಂಡರಾದ ಟಿ. ಮಧು, ವೀರಣ್ಣ, ಜಯದೇವನಾಯ್ಕ, ಸುರೇಶ್ ಗೌಡ, ಸಿ.ತಿಪ್ಪೇಸ್ವಾಮಿ, ಓಮಣ್ಣ, ಸಣ್ಣಸೂರಯ್ಯ, ಪಲ್ಲಾಗಟ್ಟೆ ಶೇಖರಪ್ಪ, ಅಹಮ್ಮದ್ ಅಲಿ ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

error: Content is protected !!