ವಿಧಾನಸಭಾ ಚುನಾವಣೆ ರಾಜ್ಯದ ಭವಿಷ್ಯ ನಿರ್ಧರಿಸುವ ಚುನಾವಣೆ

ವಿಧಾನಸಭಾ ಚುನಾವಣೆ ರಾಜ್ಯದ ಭವಿಷ್ಯ ನಿರ್ಧರಿಸುವ ಚುನಾವಣೆ

ಹೊನ್ನಾಳಿ, ಏ.30- 2023ರ ಪ್ರಸ್ತುತ ವಿಧಾನಸಭಾ ಚುನಾವಣೆ ಕೇವಲ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರ  ಭವಿಷ್ಯದ್ದಲ್ಲ ಇದು ಈ ಕ್ಷೇತ್ರದ ಜನರ ಮತ್ತು ಕರ್ನಾಟಕ ರಾಜ್ಯದ ಭವಿಷ್ಯ ನಿರ್ಧರಿಸುವ ಚುನಾವಣೆಯಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದರು. 

ಹೊನ್ನಾಳಿಯ ಅಗಳ ಮೈದಾನದಲ್ಲಿ ಇಂದು ಹಮ್ಮಿ ಕೊಂಡಿದ್ದ  ಬಿಜೆಪಿ ಅಭ್ಯರ್ಥಿ ಎಂ.ಪಿ.ರೇಣುಕಾಚಾರ್ಯ ಅವರ ಪರ ಚುನಾವಣಾ ಪ್ರಚಾರ ಭಾಷಣ ಕಾರ್ಯ ಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.  

ರೇಣುಕಾಚಾರ್ಯ ಅವರನ್ನು ಚುನಾವಣೆಯಲ್ಲಿ ಗೆಲ್ಲಿಸುವ ಮೂಲಕ ದೇಶದಲ್ಲಿ ಡಬ್ಬಲ್ ಇಂಜಿನ್ ಸರ್ಕಾರವನ್ನು  ಇನ್ನೂ ಪವರ್‌ಫುಲ್ ಇಂಜಿನ್ ಸರ್ಕಾರ ರಚಿಸುವ  ಅವಕಾಶವನ್ನು ಜನರು ಕೊಡಬೇಕು ಎಂದು ಹೇಳಿದರು. 

ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು ಮೀಸಲಾತಿ ವಾಪಸ್ ಪಡೆಯುವುದಾಗಿ ಹೇಳುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಬಂದರೆ  ದೇಶದಲ್ಲಿ ಸಾಮಾಜಿಕ ಅಶಾಂತಿ ತಲೆದೋರಲಿದೆ. ಬಿಜೆಪಿ ಸರ್ಕಾರ ಪಿ.ಎಫ್.ಐ ಸಂಘಟನೆಯವರನ್ನು ನಿಷೇಧಿಸಿ ಜೈಲಿಗೆ ಕಳುಹಿಸುವ ಕೆಲಸ  ಮಾಡಿದರೆ ಕಾಂಗ್ರೆಸ್‍ನವರು ಅಧಿಕಾರಕ್ಕೆ ಬರುತ್ತಿದ್ದಂತೆ ಮೊಕದ್ದಮೆ ಹಿಂಪಡೆದು ಜೈಲಿನಿಂದ ಹೊರಕಳಿಸುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು. 

ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಅರ್ಕಾವತಿ, ಪಿ.ಎಸ್.ಐ. ಮತ್ತು ಶಿಕ್ಷಕರ ನೇಮಕಾತಿ ಹಗರಣ, ಮಲಪ್ರಭ ಕಾಲುವೆ ಸೇರಿದಂತೆ ಅನೇಕ ಪ್ರಕರಣಗಳು ಆಗಿವೆ. ಇದೇ ಡಿಕೆಶಿ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಇವರೆಲ್ಲಾ ಬೇಲ್ ಮೇಲಿರುವುದು ಸುಳ್ಳೇ? ಎಂದು ಪ್ರಶ್ನಿಸಿದರು.

ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ಕೊರೊನಾ ಸಂದರ್ಭದಲ್ಲಿ 220 ಕೋಟಿ ಜನರಿಗೆ ಉಚಿತ ಕೋವಿಡ್‌ ವ್ಯಾಕ್ಸಿನ್ ನೀಡುವ  ಮಹತ್ತರ ಕೆಲಸ ನರೇಂದ್ರ ಮೋದಿಯವರು ಮಾಡಿದ್ದು, ಜೊತೆಗೆ ವಿಶ್ವದ 90 ರಾಷ್ಟ್ರಗಳಿಗೆ ಉಚಿತ ವ್ಯಾಕ್ಸಿನ್ ನೀಡಿದ್ದಾರೆ. ಜಲಜೀವನ್ ಯೋಜನೆಯಡಿ. ಪ್ರತಿಯೊಬ್ಬರ ಮನೆ ಬಾಗಿಲಿಗೆ ಕುಡಿಯುವ ನೀರು  ಒದಗಿಸುವ ಕೆಲಸ ಮಾಡಿದ್ದಾರೆ  ಎಂದು ಹೇಳಿದರು.

ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ಸದಾ ಜನರೊಂದಿಗೆ ಇದ್ದು, ಅವರ ಎಲ್ಲಾ ಕಷ್ಟಗಳಿಗೆ ನೆರವಾಗುವ ಮೂಲಕ ರಾಜ್ಯ ರಾಜರಾಜಕಾರಣದಲ್ಲಿಯೇ ಒಂದು ಸಾಧನೆ ಮಾಡಿದ್ದಾರೆ ಎಂದು ಹೇಳಿದರು.

ಶಾಸಕ ರೇಣುಕಾಚಾರ್ಯ ಮಾತನಾಡಿ, ಕಾಂಗ್ರೆಸ್‍ನವರು ಬಿಜೆಪಿ ಬಗ್ಗೆ ಏನೇ ಅಪಪ್ರಚಾರ ಮಾಡಿದರೂ ಈ ಬಾರಿ ರಾಜ್ಯದಲ್ಲಿ 150ಕ್ಕೂ ಹೆಚ್ಚು ಸೀಟುಗಳು ಬಂದೇ ಬರುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

40 ಪರ್ಸೆಂಟ್  ಕಮೀಷನ್ ಆರೋಪ ಮಾಡುತ್ತಿದ್ದಾರೆ,  ಮಾಜಿ ಶಾಸಕರು ಇದನ್ನು ಸಾಬೀತು ಪಡಿಸಿದರೆ ತಾನು ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಎಂದ ಅವರು, 4.5 ಸಾವಿರ ಕೋಟಿ ಅನುದಾನ ತಂದು  ಅವಳಿ ತಾಲ್ಲೂಕುಗಳಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಕಾಂಗ್ರೆಸ್‌ನವರು ಗ್ಯಾರಂಟ್ ಕಾರ್ಡ್‌ ನೀಡುತ್ತಿದ್ದಾರೆ. ಆದರೆ ಬೋಗಸ್ ಕಾರ್ಡ್‌ ಎಂದು ದೂರಿದರು. 

ಕಾರ್ಯಕ್ರಮದಲ್ಲಿ ಮಾಜಿ ಎಂ.ಎಲ್.ಸಿ. ಡಾ.ಶಿವಯೋಗಿ ಸ್ವಾಮಿ, ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್, ಎಂ.ಎಲ್.ಸಿ. ನವೀನ್, ಶಾಂತರಾಜ್‌ ಪಾಟೀಲ್, ತಾಲ್ಲೂಕು ಅಧ್ಯಕ್ಷ ಜೆ.ಕೆ.ಸುರೇಶ್, ಪುರಸಭೆ ಅಧ್ಯಕ್ಷೆ ಸುಮಾ ಮಂಜುನಾಥ್ ಇಂಚರ, ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮುಖಂಡರು ಇದ್ದರು.

error: Content is protected !!