ಶರಣರ ಅಂತರಂಗ-ಬಹಿರಂಗಗಳು ಬೇರೆ ಬೇರೆಯಾಗಿರಲಿಲ್ಲ

ಶ್ರಾವಣ ಸಂಜೆ ಕಾರ್ಯಕ್ರಮದಲ್ಲಿ ಸಾಣೇಹಳ್ಳಿ ಪಂಡಿತಾರಾಧ್ಯ ಶ್ರೀಗಳು

ಸಾಣೇಹಳ್ಳಿ, ಆ.19- 12ನೇ ಶತಮಾನದ ಶರಣರ ಅಂತರಂಗ-ಬಹಿರಂಗಗಳು ಬೇರೆ ಬೇರೆ ಆಗಿರಲಿಲ್ಲ. ಶರಣರು ನಡೆದಂತೆ ನುಡಿದರು. ಅಂತಹ ಶರಣರನ್ನು ಸ್ಮರಿಸಿದರೆ ಸಾಲದು. ಅವರಂತೆ ನಾವು ನಡೆಯಬೇಕು ಎಂದು ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಸ್ವಾಮಿಗಳು ನುಡಿದರು.

ಸ್ಥಳಿಯ ಎಸ್.ಎಸ್. ರಂಗಮಂದಿರದಲ್ಲಿ ಕಡೂರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಶರಣ ಸಾಹಿತ್ಯ ಪರಿಷತ್ತಿನ ಸಂಯುಕ್ತಾಶ್ರಯದಲ್ಲಿ ನಡೆದ `ಶ್ರಾವಣ ಸಂಜೆ-ಅಂತರ್ಜಾಲ ಶರಣ’ ಸಂದೇಶ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಇಷ್ಟಲಿಂಗ ತತ್ವ ಕೇವಲ ಹೇಳುವುದಲ್ಲ. ಆಚರಿಸುವುದು. `ಲಿಂಗವಿಲ್ಲದೆ ಉಗುಳು ನುಂಗಿದರೆ ಕಲ್ವಿಷ’ ಎನ್ನುವರು ಚೆನ್ನಬಸವಣ್ಣ. ಈ ಹಿನ್ನೆಲೆಯಲ್ಲಿ ನಾವು ನಡೆದುಕೊಂಡರೆ ಶರಣ ಸಂಸ್ಕೃತಿಗೆ ಹತ್ತಿರವಾಗುತ್ತೇವೆ. ಇಲ್ಲದೆ ಹೋದರೆ ಮನುಷ್ಯನ ಬದುಕು ಆಳವಾದ ತಗ್ಗಿಗೆ ಬೀಳುತ್ತದೆ. ಅಲ್ಲಮ ಪ್ರಭು ಹೇಳಿದಂತೆ `ತನುವ ತೋಂಟವ ಮಾಡಿ, ಮನವೆಂಬ ಗುದ್ದಲಿಯಿಂದ ಭ್ರಾಂತಿಯ ಬೇರು ಅಗೆದು ತೆಗೆದು ನಮ್ಮೊಳಗಿನ ಆತ್ಮವೆಂಬ ಸಸಿಯನ್ನು ಸಲಹಬೇಕು.’ ಇಂತಹ ಆಂತರಿಕ ಎಚ್ಚರ ಪ್ರತಿಯೊಬ್ಬರಿಗೂ ಮೂಡಿದರೆ ಮಾತ್ರ ಉಪನ್ಯಾಸಗಳು ಸಾರ್ಥಕವಾಗುತ್ತದೆ ಎಂದರು.

`ಶರಣ ಸಂಸ್ಕೃತಿ ಮತ್ತು ಸಾಮಾಜಿಕ ಜಾಲತಾಣಗಳು’ ವಿಷಯ ಕುರಿತಂತೆ ಸಾಣೇಹಳ್ಳಿ ಅಧ್ಯಾಪಕ ಹೆಚ್.ಎಸ್. ದ್ಯಾಮೇಶ್ ಮಾತನಾಡಿ, ಶರಣ ಎಂಬುದು ಆಗುವ ಪ್ರಕ್ರಿಯೆಯೇ ಹೊರತು ಆರೋಪಿಸಿಕೊಳ್ಳುವ ನಾಮಧೇಯವಲ್ಲ. ಶರಣತತ್ವ ಅನ್ನುವುದು ಒಂದು ಸಾರಿಗೆ ತೀರ್ಮಾನವಾಗುವುದಲ್ಲ. ಅದು ಕಾಯಾ ವಾಚಾ ಮನಸಾ ಪ್ರತಿಕ್ಷಣ ಪರೀಕ್ಷೆಗಳಿಗೆ ತಮ್ಮನ್ನು ತಾವು ಒಡ್ಡಿಕೊಂಡು ಅವುಗಳಲ್ಲಿ ವಿಜಯಿಯಾಗುವುದು. ಶರಣ ಅಂದರೆ ನಡೆ ಮತ್ತು ನುಡಿ ಒಂದಾಗಿರುವವನು ಎಂದರು. ಇದೇ ವೇಳೆ ಸಾಮಾಜಿಕ ಜಾಲತಾಣ ಕುರಿತು ವಿಷದವಾಗಿ ವಿವರಿಸಿದರು.

ಶಿವಸಂಚಾರದ ಹೆಚ್.ಎಸ್. ನಾಗರಾಜ್ ಮತ್ತು ತಬಲಾ ಸಾಥಿ ಶರಣ್‌ ಶರಣ ಸಂಸ್ಕೃತಿಗೆ ಸಂಬಂಧಿಸಿದ ವಚನಗೀತೆಗಳನ್ನು ಹಾಡಿದ್ದು ಅರ್ಥಪೂರ್ಣವಾಗಿತ್ತು. ಕಡೂರು ಕಸಾಪ ಕಾರ್ಯದರ್ಶಿ ವಿರೂಪಾಕ್ಷಪ್ಪ ಸ್ವಾಗತಿಸಿದರು. ಅಧ್ಯಕ್ಷ ವೈ.ಎಸ್. ರವಿಪ್ರಕಾಶ್ ವಂದಿಸಿದರು.

error: Content is protected !!